ಜಿಲ್ಲೆಗೆ ರೈಲು ಮಾರ್ಗ ಬೇಕು-ಬೇಡ ಎನ್ನುವ ಚರ್ಚೆಯ ನಡುವೆಯೇ ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್‍ಗೆ ಬೀಗ
ಕೊಡಗು

ಜಿಲ್ಲೆಗೆ ರೈಲು ಮಾರ್ಗ ಬೇಕು-ಬೇಡ ಎನ್ನುವ ಚರ್ಚೆಯ ನಡುವೆಯೇ ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್‍ಗೆ ಬೀಗ

October 10, 2022

ಮಡಿಕೇರಿ,ಅ.9- ಕೊಡಗು ಜಿಲ್ಲೆಗೆ ರೈಲು ಮಾರ್ಗ `ಬೇಕು-ಬೇಡ’ ಎನ್ನುವ ಕುರಿತು ಬಿಸಿಬಿಸಿ ಚರ್ಚೆಗಳು ಇಂದಿಗೂ ನಡೆಯುತ್ತಿವೆ. ಈ ನಡುವೆಯೇ ರಾಜ್ಯದ `ಹಳಿಗಳೇ ಇಲ್ಲದ ಜಿಲ್ಲೆ’ ಕೊಡಗಿನಲ್ಲಿದ್ದ ಏಕೈಕ `ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್’ ಅನ್ನು ಯಾವ ಸದ್ದಿಲ್ಲದೆ ಮುಚ್ಚಲಾಗಿದೆ.

ಕಳೆದ ಒಂದೂವರೆ ದಶಕದ ಹಿಂದೆ ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ನಗರಸಭೆ ಕಟ್ಟಡದ ಎರಡನೇ ಮಹಡಿಯಲ್ಲಿ `ನೈಋತ್ಯ ರೈಲ್ವೆ ಕಂಪ್ಯೂಟರ್ ಟಿಕೆಟ್ ಬುಕ್ಕಿಂಗ್ ಸೆಂಟರ್’ ಅನ್ನು ಸಾರ್ವಜನಿಕರ ಉಪಯೋಗ ಕ್ಕಾಗಿ ತೆರೆಯಲಾಗಿತ್ತು. 2018ರ ಪ್ರಾಕೃತಿಕ ವಿಕೋಪ, ತದ ನಂತರ 2019ರಿಂದ ಸುಮಾರು ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೇ ಕಾಡಿದ ಕೊರೊನಾ ಸಾಂಕ್ರಾಮಿಕದ ಸಂದರ್ಭ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ `ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್’ ಅನ್ನು ತಾತ್ಕಾಲಿಕವಾಗಿ ಮುಚ್ಚ ಲಾಗಿತ್ತು. ಆದರೆ ಕೊರೊನಾ ಸೋಂಕು ಮರೆ ಯಾದರೂ ಕೂಡ ಬಾಗಿಲು ಹಾಕಿಕೊಂಡ ಟಿಕೆಟ್ ಬುಕ್ಕಿಂಗ್ ಸೆಂಟರ್‍ನ ಬೀಗ ತೆರೆಯಲು ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿ ರುವ ನೈಋತ್ಯ ರೈಲ್ವೆ ಮುಂದಾಗಿಲ್ಲ. ಟಿಕೆಟ್ ಬುಕ್ಕಿಂಗ್ ಸೆಂಟರ್‍ನಲ್ಲಿದ್ದ ಕಂಪ್ಯೂಟರ್, ಇಂಟರ್‍ನೆಟ್ ಸಿಸ್ಟಂ ಮತ್ತಿತ್ತರ ವಸ್ತುಗಳನ್ನು ಸದ್ದಿಲ್ಲದೇ ಹೊತ್ತುಕೊಂಡು ಹೋದ ನೈಋತ್ಯ ರೈಲ್ವೇ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಂದಿಗೂ ಮಡಿಕೇರಿ ಕಡೆ ತಲೆ ಹಾಕಿಲ್ಲ. ಹೀಗಾಗಿ ಮೊದಲಿದ್ದ ಕಚೇರಿಯ ಬಾಗಿಲು ಮುಚ್ಚಿಕೊಂಡಿದ್ದು, ಪಾಚಿ ಕಟ್ಟಿದ `ನೈಋತ್ಯ ರೈಲ್ವೇ ಬೋರ್ಡ್’ ಮಾತ್ರ ನೇತಾಡುತ್ತಿದೆ.

ಲಕ್ಷ ರೂ.ಆದಾಯ: ಕೊಡಗಿಗೆ ಸಮೀಪ ಎಂಬಂತೆ ಮೈಸೂರು, ಪುತ್ತೂರು, ಮಂಗಳೂರು ಮತ್ತು ಹಾಸನ ಭಾಗಗಳಲ್ಲಿ ರೈಲ್ವೇ ನಿಲ್ದಾಣಗಳಿವೆ. ಜಿಲ್ಲೆಯಿಂದ ಹೊರ ತೆರಳುವವರು ಮತ್ತು ಬರುವವರು ಹೆಚ್ಚಾಗಿ ಮೈಸೂರು ರೈಲ್ವೆಯನ್ನು ಅವಲಂಬಿಸುತ್ತಾರೆ. ಮಡಿಕೇರಿಯಲ್ಲಿ ನೈಋತ್ಯ ರೈಲ್ವೆ ಬುಕ್ಕಿಂಗ್ ಸೆಂಟರ್ ಇದ್ದ ಸಂದರ್ಭ, ಕಾಫಿ ಕೊಯ್ಲಿನ ಅವಧಿಯಾದ ಅಕ್ಟೋಬರ್, ನವೆಂಬರ್ ಹಾಗೂ ಜನವರಿಯಿಂದ ಮಾರ್ಚ್‍ವರೆಗಿನ ಅವಧಿಯಲ್ಲಿ ಈ ಬುಕ್ಕಿಂಗ್ ಸೆಂಟರ್‍ನಲ್ಲಿ ಪ್ರತಿನಿತ್ಯ ಸರಾಸರಿ 2 ರಿಂದ 4 ಲಕ್ಷ ರೂ. ವ್ಯವಹಾರ ನಡೆಯುತ್ತಿತ್ತು ಎನ್ನುವುದು ಒಂದು ಲೆಕ್ಕಾಚಾರ.

ಕಾರ್ಮಿಕರಿಗೆ ಅನುಕೂಲ:ಕೊಡಗು ಜಿಲ್ಲೆಗೆ ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಉತ್ತರ ಪ್ರದೇಶ, ದಕ್ಷಿಣದ ರಾಜ್ಯಗಳಾದ ತಮಿಳು ನಾಡು, ಕೇರಳದಿಂದ ಹಾಗೂ ರಾಜ್ಯದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ ವಿಭಾಗಗಳಿಂದ ಕಾಫಿ ಕೊಯ್ಲು ಸಂದರ್ಭ ತಂಡೋಪತಂಡವಾಗಿ ಕಾರ್ಮಿಕರು ಆಗಮಿ ಸುತ್ತಾರೆ. ಅವರು ತಾವಿರುವ ಪ್ರದೇಶದಿಂದ ಕೊಡಗಿಗೆ ಆಗಮಿಸಲು ಇಂದಿಗೂ ರೈಲ್ವೇ ಮಾರ್ಗವನ್ನೇ ನೆಚ್ಚಿಕೊಂಡಿದ್ದಾರೆ. ಬಸ್ ಮಾರ್ಗ ದುಬಾರಿ ಮತ್ತು ತ್ರಾಸದಾಯಕ ವಾಗಿರುವುದು ಇದಕ್ಕೆ ಮೂಲ ಕಾರಣ.

ಮಡಿಕೇರಿಯಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್ ಇದ್ದ ಸಂದರ್ಭ ಇಲ್ಲಿಯೇ ತಾವು ತೆರಳಬೇಕಾದ ರೈಲ್ವೆ ಟಿಕೆಟ್‍ಗಳನ್ನು ಮುಂಗಡ ವಾಗಿ ಬುಕ್ಕ್ ಮಾಡಿ ಸಾಕಷ್ಟು ಅನುಕೂಲತೆ ಯನ್ನು ಕಾರ್ಮಿಕರು ಪಡೆಯುತ್ತಿದ್ದರು. ಆದರೆ ಇಂದು ಜಿಲ್ಲೆಯ ಸೈನಿಕರು ಮತ್ತು ಕಾರ್ಮಿಕರು ರೈಲ್ವೆ ಬುಕ್ಕಿಂಗ್‍ಗೆ ಪರದಾಡು ವಂತಾಗಿದೆ. ಪ್ರಸ್ತುತ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆಗಳು ಇದೆಯಾದರು ಕಾರ್ಮಿಕ ಸಮೂಹ ಇದನ್ನು ಬಳಸುವುದು ಅಷ್ಟಕ್ಕಷ್ಟೆ ಎಂಬುದು ಕೂಡ ವಾಸ್ತವ.

ಭರವಸೆ ಮರೆತರೇ?:ಜಿಲ್ಲೆಯ ಗಡಿ ಭಾಗದವರೆಗೆ ರೈಲು ಸೇವೆ ನೀಡಲಾಗುತ್ತದೆ ಎಂದು ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ರೈಲ್ವೆ ಸಂಪರ್ಕ ಬೇಕು ಬೇಡ ಎನ್ನುವ ದೊಡ್ಡ ಚರ್ಚೆಯೇ ನಡೆಯುತ್ತಿರುವ ನಡುವೆಯೇ ರೈಲು ಮಾರ್ಗದ ಪ್ರಾಥಮಿಕ ಸರ್ವೇ ಕಾರ್ಯ ಈ ಹಿಂದೆ ನಡೆದಿದ್ದು, ರೈಲು ಯಾವಾಗ ಬರುತ್ತದೋ ತಿಳಿದಿಲ್ಲ. ಅಲ್ಲಿಯವರೆಗೆ ಮಡಿ ಕೇರಿಯಲ್ಲಿದ್ದ ಏಕೈಕ ರೈಲ್ವೆ ಬುಕ್ಕಿಂಗ್ ಸೆಂಟರ್‍ನ್ನು ಉಳಿಸಿಕೊಳ್ಳುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿತ್ತು. ಆದರೆ ಆ ಬಗ್ಗೆ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ತಮ್ಮ ಆಸಕ್ತಿ ಕಳೆದುಕೊಂಡರೇ? ನೀಡಿದ್ದ ಭರವಸೆಯನ್ನು ಮರೆತು ಹೋದರೆ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಅದರಲ್ಲೂ ಮುಖ್ಯ ವಾಗಿ ರೈಲ್ವೇ ಟಿಕೆಟ್ ಬುಕ್ಕಿಂಗ್ ಸೆಂಟರ್ ಅನ್ನು ಬಹುವಾಗಿ ಅವಲಂಬಿಸಿಕೊಂಡಿದ್ದ ಜನರನ್ನು ಕಾಡುತ್ತಿದೆ.
ಜಿಲ್ಲೆಯ ಜನತೆಗೆ ಉಪಯುಕ್ತವಾಗಿದ್ದ ನೈಋತ್ಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್ ಅನ್ನು ಮತ್ತೆ ಆರಂಭಿಸಲು ಜಿಲ್ಲಾ ಉಸ್ತು ವಾರಿ ಸಚಿವರು, ಸಂಸದರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಆಸಕ್ತಿ ವಹಿಸಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬರುತ್ತಿದೆ.

Translate »