ಮೈಸೂರು, ಮೇ 7-ಟ್ಯಾಕ್ಸಿಗಳಿಗೆ ಒಂದು ವರ್ಷದ ರಸ್ತೆ ತೆರಿಗೆ ಶುಲ್ಕ ಹಾಗೂ ವಾಹನ ವಿಮೆ ಕಡಿತಗೊಳಿಸಬೇಕೆಂದು ಮೈಸೂರು ಜಿಲ್ಲಾ ಲಕ್ಸುರಿ ಟ್ಯಾಕ್ಸಿ ಸ್ಟ್ಯಾಂಡ್ ಮಾಲೀಕರು ಮತ್ತು ಚಾಲಕರ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾಹನಗಳ ಚಾಲನೆಗೆ ಅವಕಾಶವಿಲ್ಲದ ಕಾರಣ ಟ್ಯಾಕ್ಸಿ ಚಾಲಕರ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿರುವುದರಿಂದ ಈ ಕುಟುಂಬಗಳಿಗೆ ವೃತ್ತಿ ವೇತನ ಅಥವಾ ಸೂಕ್ತ ಸೌಲಭ್ಯ ಒದಗಿಸಿ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡ ಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಲಾಕ್‍ಡೌನ್ ಸಡಿಲಗೊಂಡು ವಾಹನ ಚಾಲನೆಗೆ ಅವಕಾಶ ದೊರೆತರೂ ನಮ್ಮ ವೃತ್ತಿ ಸಮರ್ಪಕವಾಗಿ ಆರಂಭಗೊಳ್ಳಲು ಸುಮಾರು 6 ತಿಂಗಳಿಂದ ಒಂದು ವರ್ಷ ಕಾಲಾವಕಾಶ ಬೇಕಾಗಬಹುದು. ಆದ್ದರಿಂದ ಒಂದು ವರ್ಷದ ಅವಧಿಗೆ ರಸ್ತೆ ತೆರಿಗೆ ಶುಲ್ಕ ಹಾಗೂ ವಾಹನ ವಿಮೆ ಕಡಿತಗೊಳಿಸಬೇಕು ಅಥವಾ ಅದನ್ನು ಸರ್ಕಾರವೇ ಭರಿಸಬೇಕೆಂದು ಮನವಿ ಮಾಡಲಾಗಿದೆ.