ಏಷಿಯನ್ ಪೇಂಟ್ಸ್ ಮೂಲ ಸ್ಥಾವರದಲ್ಲೇ ಕೆಲಸಕ್ಕೆ ಪಟ್ಟು: ಇಂದು ಸಂಜೆವರೆಗೆ ಗಡುವು
ಮೈಸೂರು

ಏಷಿಯನ್ ಪೇಂಟ್ಸ್ ಮೂಲ ಸ್ಥಾವರದಲ್ಲೇ ಕೆಲಸಕ್ಕೆ ಪಟ್ಟು: ಇಂದು ಸಂಜೆವರೆಗೆ ಗಡುವು

December 15, 2020

ಮೈಸೂರು, ಡಿ.14(ಆರ್‍ಕೆ)-ಭೂಮಿ ಕಳೆದುಕೊಂಡ ಕುಟುಂ ಬದ 53 ಮಂದಿಗೆ ನಂಜನೂಡು ಬಳಿಯ ಏಷಿಯನ್ ಪೇಂಟ್ಸ್ ಮೂಲ ಸ್ಥಾವರದಲ್ಲೇ ಖಾಯಂ ಉದ್ಯೋಗ ನೀಡಬೇಕೆಂದು ಧರಣಿ ನಡೆಸುತ್ತಿರುವ ರೈತರು, ನಾಳೆ (ಡಿ.15) ಸಂಜೆವರೆಗೆ ಗಡುವು ನೀಡಿದ್ದಾರೆ. ಏಷಿಯನ್ ಪೇಂಟ್ಸ್ ಸ್ಥಾವರ ನಿರ್ಮಿಸಲು ಭೂಸ್ವಾಧೀನ ಮಾಡಿಕೊಳ್ಳುವಾಗ ಭೂಮಿ ನೀಡಿದ 53 ಕುಟುಂಬದ ತಲಾ ಒಬ್ಬೊಬ್ಬರಿಗೆ ಕೆಲಸ ಕೊಡುವುದಾಗಿ ಒಪ್ಪಂದವಾಗಿರುವಂತೆ ನಡೆದು ಕೊಳ್ಳಬೇಕು ಎಂದು ಆಗ್ರಹಿಸಿ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹೊಸಕೋಟೆ ಬಸವರಾಜು ನೇತೃತ್ವದ ರೈತ ಮುಖಂ ಡರು, ಇಂದು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಬಳಿ ಜಮಾಯಿಸಿ ಧರಣಿ ನಡೆಸಿದರು.

ಏಷಿಯನ್ ಪೇಂಟ್ಸ್ ಮುಖ್ಯ ಸ್ಥಾವರದಲ್ಲೇ ಖಾಯಂ ಉದ್ಯೋಗ ನೀಡಬೇಕೆಂದು ಪಟ್ಟು ಹಿಡಿದಿದ್ದ ಪ.ಮಲ್ಲೇಶ್, ಪ್ರಸನ್ನ ಎನ್.ಗೌಡ, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ ಹಾಗೂ ಇತರ ರೈತ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ದಿನೇಶ್ ಅವರು, ಹೆಬ್ಬಾಳಿನಲ್ಲಿರುವ ಏಷಿಯನ್ ಪೇಂಟ್ಸ್‍ಗೆ ಸೇರಿದ ಹೆಲ್ತ್ ಅಂಡ್ ಹೈಜಿನ್ ಕಂಪನಿಯಲ್ಲಿ ಕೆಲಸ ಕೊಡುವುದಾಗಿ ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ ಎಂದರು.

ಅದಕ್ಕೆ ಒಪ್ಪದ ರೈತ ಮುಖಂಡರು, ನಾವು ಭೂಮಿ ಕಳೆದು ಕೊಂಡಿರುವ ಸ್ಥಳದಲ್ಲೇ ಕೆಲಸ ಮಾಡಬೇಕೆಂದು ಪಟ್ಟು ಹಿಡಿದಾಗ ಮಧ್ಯಾಹ್ನ ಏಷಿಯನ್ ಪೇಂಟ್ಸ್‍ನ ಮಾನವ ಸಂಪನ್ಮೂಲ ವಿಭಾ ಗದ ಮುಖ್ಯಸ್ಥ ಅಮರನಾಥ್‍ರನ್ನು ಕರೆಸಿ ಮುಖಾಮುಖಿ ಮಾತನಾಡಿ ಸಿದರು. ಹೆಬ್ಬಾಳು ಘಟಕದಲ್ಲಿ ಖಾಯಂ ಕೆಲಸವನ್ನೇ ನೀಡುತ್ತೇವೆ ಎಂಬುದನ್ನೇ ಕಂಪನಿಯವರು ಪುನರುಚ್ಛರಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು, ಸ್ಥಳದಲ್ಲೇ ಪ್ರತಿಭಟನಾ ಧರಣಿ ನಡೆಸಿದಾಗ, ಮಧ್ಯಾಹ್ನ 3 ಗಂಟೆಗೆ ತಮ್ಮ ನಿಲುವು ಹೇಳುತ್ತೇವೆಂದು ಹೇಳಿ ಹೋದ ಏಷಿಯನ್ ಪೇಂಟ್ಸ್ ಅಧಿಕಾರಿಗಳು ಮತ್ತೆ ಬರಲೇ ಇಲ್ಲ. ಕಡೆಗೆ ಮಂಗಳವಾರ ಸಂಜೆಯೊಳಗಾಗಿ ನಿಲುವು ತಿಳಿಸದಿದ್ದಲ್ಲಿ ಬುಧವಾರದಿಂದ ಕೆಐಎಡಿಬಿ ಕಚೇರಿ ಮುಂದೆ ಅನಿರ್ದಿಷ್ಠಾವಧಿ ಧರಣಿ ಮತ್ತು ಏಷಿಯನ್ ಪೇಂಟ್ಸ್‍ಗೆ ಸೌಲಭ್ಯ ಸ್ಥಗಿತಗೊಳಿಸುವ ಚಳುವಳಿ ನಡೆಸಲು ರೈತ ಮುಖಂಡರು ನಿರ್ಣಯ ಕೈಗೊಂಡು ಸ್ಥಳದಿಂದ ನಿರ್ಗಮಿಸಿದರು. ಕೆಲಸ ಕೊಡದಿದ್ದಲ್ಲಿ ಏಷಿಯನ್ ಪೇಂಟ್ಸ್‍ಗೆ ನೀಡಿರುವ ಭೂಮಿಯನ್ನು ಹಿಂಪಡೆಯಬೇಕು, ಅವರಿಗೆ ಒದಗಿಸುತ್ತಿ ರುವ ಸೌಲಭ್ಯಗಳ ಸಂಪರ್ಕವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡ ಹೊಸಕೋಟೆ ಬಸವರಾಜು ಅವರು ತಿಳಿಸಿದ್ದಾರೆ.

Translate »