ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನಿಯೋಜಿಸಿ ಶಾಸಕ ಅಶ್ವಿನ್‍ಕುಮಾರ್ ಸೂಚನೆ
ಮೈಸೂರು

ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನಿಯೋಜಿಸಿ ಶಾಸಕ ಅಶ್ವಿನ್‍ಕುಮಾರ್ ಸೂಚನೆ

April 26, 2021

ತಿ.ನರಸೀಪುರ, ಏ.25(ಎಸ್‍ಕೆ)- ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನಿಯೋಜಿಸಿ ಮೇಲ್ವಿಚಾರಣೆ ನಡೆಸುವಂತೆ ಶಾಸಕ ಎಂ.ಅಶ್ವಿನ್‍ಕುಮಾರ್ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು. ಕೋವಿಡ್ ಸೋಂಕು ಕಂಡು ಬಂದ ಕಡೆ ಸ್ಯಾನಿಟೈಸ್ ಮಾಡಿಸಿ. ಪ್ರತಿ ಪಂಚಾಯಿತಿಗೂ ಉಸ್ತುವಾರಿ ಅಧಿಕಾರಿಗಳ ನೇಮಕ ಮಾಡಿ 144 ಸೆಕ್ಷನ್ ಜಾರಿಗೊಳಿಸಿ ಗುಂಪು ಸೇರುವುದನ್ನು ತಡೆಗಟ್ಟಬೇಕು. ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕೂಡ್ಲೂರು ಶಾಲೆಯಲ್ಲಿ ಈಗಾಗಲೇ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸ ಲಾಗುತ್ತಿದೆ. ಹೋಂ ಐಸೋಲೇಷನ್ ವ್ಯವಸ್ಥೆ ಇಲ್ಲದವರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದ ಅವರು, ಆರೋಗ್ಯ ಇಲಾಖೆ ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ಸಿಗುವಂತೆ ಮಾಡಬೇಕು. ಪ್ರತಿಯೊಂದಕ್ಕೂ ಮೈಸೂರಿಗೆ ರವಾನಿಸುವ ಬದಲು ಎಲ್ಲಾ ಅಗತ್ಯ ಚಿಕಿತ್ಸೆ ಇಲ್ಲಿಯೇ ಸಿಗುವ ವ್ಯವಸ್ಥೆ ಕಲ್ಪಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರಲ್ಲದೇ, ಸಾರ್ವಜನಿಕರು ಅನಗತ್ಯ ಸಂಚಾರ ನಿಲ್ಲಿಸಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಕೆ ಮಾಡುವಂತೆ ತಿಳಿಸಿದರು.
ಜಿಪಂ ಸದಸ್ಯ ಜಯಪಾಲ್ ಭರಣಿ, ತಹಶೀಲ್ದಾರ್ ಡಿ.ನಾಗೇಶ್, ಇಓ ಜೆರಾಲ್ಡ್ ರಾಜೇಶ್, ಸಿಪಿಐ ಕೃಷ್ಣಪ್ಪ, ಸಿಡಿಪಿಓ ಬಸವರಾಜು, ಬಿಇಓ ಮರಿಸ್ವಾಮಿ, ಲೋಕೋಪ ಯೋಗಿ ಎಇಇ ಶಿವರಾಜು, ಪ್ರಭಾರ ಆರೋಗ್ಯಾಧಿಕಾರಿ ಡಾ. ಪುಟ್ಟಸ್ವಾಮಿ, ವಿವಿಧ ಇಲಾಖಾಧಿಕಾರಿಗಳಾದ ಕೃಷ್ಣ, ಭವಾನಿ, ಸುಧಾಮಣಿ, ಸಹನಾ, ಬಿಂದು ಮತ್ತಿತರರಿದ್ದರು.

Translate »