ಅಜೀಜ್ ಸೇಠ್ ಜೋಡಿ ರಸ್ತೆ ಫುಟ್‍ಪಾತ್ ಒತ್ತುವರಿ ತೆರವು
ಮೈಸೂರು

ಅಜೀಜ್ ಸೇಠ್ ಜೋಡಿ ರಸ್ತೆ ಫುಟ್‍ಪಾತ್ ಒತ್ತುವರಿ ತೆರವು

March 31, 2021

ಮೈಸೂರು, ಮಾ.30(ಆರ್‍ಕೆ)- ಮೈಸೂರಿನಲ್ಲಿ ಅತ್ಯಧಿಕ ವಾಹನ ದಟ್ಟಣೆ ಇರುವ ಶಾಂತಿನಗರದ ಅಜೀಜ್ ಸೇಠ್ ಜೋಡಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು, ಇರಿಸಿದ್ದ ಅಂಗಡಿಗಳನ್ನು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.
ಶಾಂತಿನಗರ 1ನೇ ಕ್ರಾಸ್‍ನಿಂದ ಅಜೀಜ್ ಸೇಠ್ ಜೋಡಿ ರಸ್ತೆಯುದ್ದಕ್ಕೂ ಎರಡೂ ಕಡೆ ಫುಟ್‍ಪಾತ್‍ನಲ್ಲಿ ನೂರಾರು ಅಂಗಡಿಗಳು ತಲೆ ಎತ್ತಿದ್ದರಿಂದ ಪಾದಚಾರಿ ಗಳು ಓಡಾಡಲು ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದರಿಂದ ಮೈಸೂರು ಪಾಲಿಕೆ ಕಮಿಷನರ್ ಶಿಲ್ಪಾನಾಗ್ ನಿರ್ದೇಶನದಂತೆ ಮಂಗಳವಾರ ತೆರವು ಕಾರ್ಯಾಚರಣೆ ನಡೆಯಿತು.

ಉಪಮೇಯರ್ ಅನ್ವರ್ ಬೇಗ್ ಅವರೇ ಮುಂದಾ ಳತ್ವ ವಹಿಸಿ ಪಾಲಿಕೆ ವಲಯ ಕಚೇರಿ-8ರ ಅಸಿ ಸ್ಟೆಂಟ್ ಕಮಿಷನರ್ ಶಿವಕುಮಾರ್ ಉಸ್ತುವಾರಿಯಲ್ಲಿ ಗ್ಯಾಂಗ್‍ಮನ್‍ಗಳು, 2 ಜೆಸಿಬಿ, 2 ಡೋಸರ್, ಟಿಪ್ಪರ್ ಗಳ ಸಹಾಯದಿಂದ ನೂರಕ್ಕೂ ಹೆಚ್ಚು ಫುಟ್‍ಪಾತ್ ಅಂಗಡಿಗಳನ್ನು ತೆರವುಗೊಳಿಸಿದರು. ಇಂದು ಬೆಳಿಗ್ಗೆ 9ಕ್ಕೆ ಆರಂಭವಾದ ತೆರವು ಕಾರ್ಯಾಚರಣೆ ಸಂಜೆ 4 ಗಂಟೆಯವರೆಗೂ ನಡೆಯಿತು. ಕಾರ್ಯಾಚರಣೆ ವೇಳೆ ಕೆಲ ಮಾಲೀಕರು ತಮ್ಮ ಪೆಟ್ಟಿಗೆ ಅಂಗಡಿಗಳನ್ನು ತಾವೇ ಬೇರೆಡೆಗೆ ಸ್ಥಳಾಂತರಿಸಿಕೊಂಡರೆ, ಮತ್ತೆ ಕೆಲವರು ಸಮಯಾವಕಾಶ ಕೋರಿ, ಬಳಿಕ ಅಂಗಡಿಗಳನ್ನು ತೆರವುಗೊಳಿಸಿದರು. ಮತ್ತೆ ಕೆಲವರು ಪಾಲಿಕೆ ಅಧಿಕಾರಿ, ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಉಪ ಮೇಯರ್ ಅನ್ವರ್ ಬೇಗ್, `ಸಾರ್ವಜನಿಕರು ಸರಾಗವಾಗಿ ಓಡಾಡು ವಂತೆ ಮಾಡಲು ಫುಟ್‍ಪಾತ್ ಒತ್ತುವರಿ ಮಾಡಿ ಕೊಂಡಿದ್ದ ಅಂಗಡಿಗಳ ತೆರವು ಅನಿವಾರ್ಯ’ ಎಂದು ಖಡಕ್ ಆಗಿ ಹೇಳಿದ್ದರಿಂದ ವಾಗ್ವಾದಕ್ಕಿಳಿದವರು ಸುಮ್ಮ ನಾದರು. ಬಳಿಕ ಪಾಲಿಕೆ ಅಧಿಕಾರಿಗಳು ಸರಾಗ ವಾಗಿ ಕಾರ್ಯಾಚರಣೆ ಪೂರ್ಣಗೊಳಿಸಿದರು.

ಬಂದೋಬಸ್ತ್: ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ 50 ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಕೆಲವರು ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಮಾಜಿ ಮೇಯರ್ ಅಯೂಬ್ ಖಾನ್ ಹಾಗೂ ಇತರ ಜನಪ್ರತಿನಿಧಿ ಗಳಿಗೆ ಮೊಬೈಲ್ ಕರೆ ಮಾಡಿ `ನಮ್ಮ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಉಳಿಸಿ ಕೊಡಿ’ ಎಂದು ಬೇಡಿಕೊಂಡರಾದರೂ, ಪ್ರಯೋಜನ ವಾಗಲಿಲ್ಲ. ಕೋಳಿ ಅಂಗಡಿ, ಚಿಲ್ಲರೆ ಅಂಗಡಿ, ಟೀ ಶಾಪ್, ಫಾಸ್ಟ್‍ಫುಡ್ ಮಳಿಗೆ ಸೇರಿದಂತೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ ಎಲ್ಲಾ ಅಂಗಡಿ ಗಳನ್ನು ತೆರವುಗೊಳಿಸಿದ್ದರಿಂದ ಮಹದೇವಪುರ ರಸ್ತೆಯ ಇಕ್ಕೆಲಗಳ ಪಾದಚಾರಿ ರಸ್ತೆಯಲ್ಲಿ ಈಗ ಜನರು ಸರಾಗವಾಗಿ ಓಡಾಡುವಂತಾಗಿದೆ.

 

Translate »