ಮೈಸೂರು,ಆ.12(ಆರ್‍ಕೆ)-ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ಕಳೆದ ರಾತ್ರಿ ನಡೆದ ಗಲಭೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ಪ್ರಕರಣ ಕುರಿತಂತೆ ಮೈಸೂರಿನ ಉದಯ ಗಿರಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂ ರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಬಡಾವಣೆಯ ಗಲಭೆಯಿಂದ ಶಾಂತಿ ಕದಡಿದಂತಾಗಿದ್ದು, ಅದಕ್ಕೆ ರಾಜ್ಯ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎಂದರು. ರಾಜ್ಯದಲ್ಲಿ ಇಂಟೆಲಿಜೆನ್ಸ್ ವಿಂಗ್ ತುಂಬಾ ವೀಕ್ ಅಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಕಾರಣ ಮೂವರು ಬಲಿಯಾಗಿ ಶಾಸಕರ ಮನೆ ಸೇರಿದಂತೆ ಹಲವು ಆಸ್ತಿಗೆ ಹಾನಿಯಾಗಿದೆ. ಇಂತಹ ವಿಷಯಗಳಲ್ಲಿ ಗುಪ್ತಚಾರ ಇಲಾಖೆ ಅಧಿಕಾರಿಗಳು ಚುರುಕಾ ಗಿದ್ದು ಎಚ್ಚರದಿಂದಿರಬೇಕಿತ್ತು ಎಂದು ತನ್ವೀರ್ ಸೇಠ್ ತಿಳಿಸಿದರು. ಯುವಕರು ವಾಕ್ ಸ್ವಾತಂತ್ರ್ಯವನ್ನು ಸೋಷಿಯಲ್ ಮೀಡಿಯಾಗಳಲ್ಲಿ ದುರ್ಬಳಕೆ ಮಾಡಿಕೊಳ್ಳಬಾರದು. ಅದರಿಂದ ಸಮಾಜದಲ್ಲಿ ಶಾಂತಿಗೆ ಭಂಗ ಉಂಟಾಗುತ್ತದೆಯಾದ್ದರಿಂದ ಪೊಲೀಸರು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದರು.