ನವದೆಹಲಿ, ಆ.30- ಈಗ ಹಬ್ಬ, ಉತ್ಸವಗಳ ಸಮಯ, ಅವುಗಳನ್ನು ಸಂತೋಷ, ಸಂಭ್ರಮಗಳಿಂದ ಆಚರಿಸುವು ದರ ಮಧ್ಯೆ ಕೊರೊನಾ ವೈರಸ್ ಹೆಚ್ಚುತ್ತಿರುವುದನ್ನು ಮರೆಯ ಬೇಡಿ, ಜನರು ಇನ್ನಷ್ಟು ಜಾಗರೂಕತೆಯಿಂದ ಇರುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಅವರು ಭಾನುವಾರ ಆಕಾಶವಾಣಿ ರೇಡಿಯೊದಲ್ಲಿ ತಮ್ಮ ತಿಂಗಳ ಕೊನೆಯ ಭಾನುವಾರದ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಅಂದರೆ 78 ಸಾವಿರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದರಿಂದ ದೇಶದಲ್ಲಿ ಕೊರೊನಾ ಪೀಡಿ ತರ ಸಂಖ್ಯೆ 35 ಲಕ್ಷ ಗಡಿ ದಾಟಿದೆ. ಬ್ರೆಜಿಲ್ ದೇಶದಲ್ಲಿ 38 ಲಕ್ಷ ಸೋಂಕಿತರಿದ್ದು ಅದಕ್ಕೆ ಹತ್ತಿರದಲ್ಲಿಯೇ ನಮ್ಮ ದೇಶ ಇದೆ. ಕೊರೊನಾ ವೈರಸ್ ಬಂದ ಮೇಲೆ ಲಾಕ್ ಡೌನ್ ಆದ ಮೇಲೆ ಜನರಲ್ಲಿ ಶಿಸ್ತಿನ ಪ್ರಜ್ಞೆ ಹೆಚ್ಚಾಗಿದೆ. ಅದನ್ನು ಇನ್ನಷ್ಟು ಬೆಳೆಸಿಕೊಳ್ಳಿ ಎಂದು ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಇಂದು ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಂಶೋಧನೆ, ಹೊಸದನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿಗಳು, ಶಿಕ್ಷ ಕರು ಒಟ್ಟಾಗಿ ಸೇರಿ ಹೊಸದನ್ನು ಶೋಧಿಸುತ್ತಾರೆ.ಸಂಶೋಧನೆ, ಸಮಸ್ಯೆ ಪರಿಹಾರದಲ್ಲಿ ಭಾರತೀ ಯರ ಸಾಮಥ್ರ್ಯ ಪ್ರತಿಯೊಬ್ಬರಿಗೂ ಗೊತ್ತಿದೆ. ಜನರಲ್ಲಿ ನಿಷ್ಠೆ, ಶ್ರದ್ಧೆ, ಶಕ್ತಿ ಸಾಕಷ್ಟಿದೆ ಎಂದರು.
ಕುಟುಕಿಡ್ಸ್ ಲರ್ನಿಂಗ್ ಆ್ಯಪ್: ಆತ್ಮನಿರ್ಭರ ಆ್ಯಪ್‍ನಲ್ಲಿ ಸಂಶೋಧನಾ ಸವಾಲಿದ್ದು ಕುಟುಕಿಡ್ಸ್ ಕಲಿಕೆ ಆ್ಯಪ್ ಇದೆ. ಇದು ಸಂವಹನಾತ್ಮಕ ಆ್ಯಪ್ ಆಗಿದ್ದು, ಈ ಮೂಲಕ ಮಕ್ಕಳು ಗಣಿತ, ವಿಜ್ಞಾನ ವಿಷಯಗಳನ್ನು ಹಾಡು, ಕಥೆಗಳ ಮೂಲಕ ಸುಲಭವಾಗಿ ಆಸಕ್ತಿಕರವಾಗಿ ಕಲಿಯಬಹುದು. ಸ್ಟೆಪ್ ಸೆಟ್ ಗೋ ಎನ್ನುವ ಮತ್ತೊಂದು ಆಪ್ ಇದ್ದು, ಇದು ಫಿಟ್‍ನೆಸ್ ಆ್ಯಪ್ ಆಗಿದೆ. ನೀವು ಎಷ್ಟು ನಡೆದಿದ್ದೀರಿ,
ಎಷ್ಟು ಕ್ಯಾಲರಿ ಕಳೆದುಕೊಂಡಿದ್ದೀರಿ ಎಂದು ತೋರಿಸುತ್ತದೆ. ನೀವು ಆರೋಗ್ಯವಾಗಿ, ಸದೃಢವಾಗಿ ಇರಲು ಈ ಆಪ್ ಉತ್ತೇಜನ ನೀಡುತ್ತದೆ ಎಂದರು. ಹಲವು ಉದ್ಯಮ ಆಪ್‍ಗಳಿವೆ. ಈಕ್ವಲ್ ಟು, ಬುಕ್ಸ್ ಅಂಡ್ ಎಕ್ಸ್‍ಪೆನ್ಸ್, ಜೊಹೊ ವರ್ಕ್ ಪ್ಲೇಸ್, ಎಫ್‍ಟಿಸಿ ಟಾಲೆಂಟ್ ಇತ್ಯಾದಿ. ಅವುಗಳನ್ನು ನೆಟ್‍ಲ್ಲಿ ಹುಡುಕಿ ಅದರಲ್ಲಿ ಸಾಕಷ್ಟು ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮಗೆ ಸಿಗುತ್ತವೆ ಎಂದು ಪ್ರಧಾನಿ ಹೇಳಿದರು.
ಭಾರತೀಯ ತಳಿ ನಾಯಿಗಳು ತುಂಬಾ ದಕ್ಷವಾಗಿ, ಚುರುಕಾಗಿ ಇರುತ್ತವೆ. ಅವುಗಳನ್ನು ಸಾಕಿ, ಬೆಳೆಸಲು ಬೇರೆ ನಾಯಿಗಳಿಗೆ ಹೋಲಿಸಿದರೆ ಖರ್ಚು ಕಡಿಮೆ. ಭಾರತದ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆ. ನಮ್ಮ ಸೇನೆಯಲ್ಲಿ ಕೂಡ ಅವುಗಳಿಗೆ ತರಬೇತಿ ನೀಡಿ ನಾಯಿಗಳ ದಳಗಳನ್ನು ಬೆಳೆಸಲಾಗುತ್ತಿದೆ ಎಂದರು.