ಭ್ರಮರ ಟ್ರಸ್ಟ್‍ನ ಜೀವಮಾನ ಸಾಧನೆ ಪ್ರಶಸ್ತಿ
ಮೈಸೂರು

ಭ್ರಮರ ಟ್ರಸ್ಟ್‍ನ ಜೀವಮಾನ ಸಾಧನೆ ಪ್ರಶಸ್ತಿ

March 2, 2023

ಮೈಸೂರು,ಮಾ.1(ಪಿಎಂ)-ಕೋವಿಡ್ ಮಹಾ ಮಾರಿ ತೊಡೆದು ಹಾಕಲು `ಕೋವ್ಯಾಕ್ಸಿನ್’ ಲಸಿಕೆ ಆವಿಷ್ಕರಿಸಿದ `ಭಾರತ್ ಬಯೋಟೆಕ್’ನ ವಿಜ್ಞಾನಿಗಳ ತಂಡವು ವೈ.ಟಿ ಮತ್ತು ಮಾಧುರಿ ತಾತಾಚಾರಿಯವರ `ಭ್ರಮರ ಟ್ರಸ್ಟ್’ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ `ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾಜನವಾಗಿದ್ದು, ಮಾ.4ರಂದು ಮೈಸೂರಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಭಾರತ್ ಬಯೋಟೆಕ್‍ನ ಸಹ ಸಂಸ್ಥಾಪಕರೂ ಆದ ಕಾರ್ಯಕಾರಿ ಅಧ್ಯಕ್ಷ ಡಾ.ಕೃಷ್ಣ ಎಲ್ಲ ಅವರ ನೇತೃತ್ವ ದಲ್ಲಿ ಸದರಿ ಲಸಿಕೆ ಆವಿಷ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿಗಳ ತಂಡವು ಪ್ರಶಸ್ತಿ ಸ್ವೀಕರಿಸಲಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧ ವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಮಾಧುರಿ ತಾತಾಚಾರಿ, ಕೋವಿಡ್‍ನಿಂದ ಇಡೀ ವಿಶ್ವದಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿತು. ಲಸಿಕೆ ಆವಿಷ್ಕಾರದಿಂದ ಕೋವಿಡ್ ದುರಂತಗಳಿಗೆ ಕಡಿವಾಣ ಸಾಧ್ಯವಾ ಯಿತು. ಕೇವಲ 9 ತಿಂಗಳಲ್ಲೇ ಕೋವ್ಯಾಕ್ಸಿನ್ ಲಸಿಕೆ ಆವಿಷ್ಕಾರ ಮಾಡಲಾಯಿತು. ದೇಶ ಮಾತ್ರವಲ್ಲದೆ, ವಿದೇಶಗಳಿಗೂ ಇದನ್ನು ಕಳುಹಿಸಿ ಹೆಚ್ಚಿನ ದುರಂತಕ್ಕೆ ತಡೆಯೊಡ್ಡಲಾಯಿತು. ಇಂತಹ ಮಹತ್ವದ ಕಾರ್ಯವನ್ನು ಗುರುತಿಸಿ ಭಾರತ ಸರ್ಕಾರವು ಭಾರತ್ ಬಯೋಟೆಕ್‍ನ ಡಾ.ಕೃಷ್ಣ ಎಲ್ಲ ಅವರಿಗೆ ದೇಶದ ಅತ್ಯುನ್ನತ ಪದ್ಮಭೂಷಣ ಪುರಸ್ಕಾರ ನೀಡಿ, ಗೌರವಿಸಿದೆ ಎಂದು ತಿಳಿಸಿದರು.

ಇಂತಹ ಮಾನವೀಯ ಸೇವೆಗಾಗಿ ಭ್ರಮರ ಟ್ರಸ್ಟ್, ತೆಲಂಗಾಣದ ಹೈದರಾಬಾದಿನ ಭಾರತ್ ಬಯೋ ಟೆಕ್‍ನ ಕೋವಾಕ್ಸಿನ್ ತಂಡಕ್ಕೆ ಜೀವಮಾನ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಕೋವ್ಯಾಕ್ಸಿನ್ ತಂಡವು ಈ ಲಸಿಕೆಯನ್ನು ಆವಿಷ್ಕರಿಸಿ ಇಡೀ ದೇಶವೇ ಹೆಮ್ಮೆಪಡು ವಂತೆ ಮಾಡಿದೆ. ಮೈಸೂರಿನ ಬನ್ನಿಮಂಟಪದ ಶ್ರೀ ಶಿವರಾತ್ರೀಶ್ವರನಗರದ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಅಂದು ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಕೋವ್ಯಾಕ್ಸಿನ್ ತಂಡವನ್ನು ಗೌರವಿಸಲು ಮೈಸೂರಿನ ಜನತೆ ಕೈಜೋಡಿಸಬೇಕು ಎಂದು ಕೋರಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಸಮಾರಂಭದ ಸಾನ್ನಿಧ್ಯ ವಹಿಸಲಿ ದ್ದಾರೆ. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕøತ ಇಸ್ರೋ ಮಾಜಿ ಮುಖ್ಯಸ್ಥ ಎ.ಎಸ್.ಕಿರಣ್‍ಕುಮಾರ್ ಭಾಗ ವಹಿಸಲಿದ್ದಾರೆ. ಅತಿಥಿಗಳಾಗಿ ಭಾರತ ಸರ್ಕಾರದ ಮಾಜಿ ಮುಖ್ಯ ವೈಜ್ಞಾನಿಕ ಸಲಹೆಗಾರ ಪದ್ಮಶ್ರೀ ಪುರಸ್ಕøತ ಕೆ.ವಿಜಯರಾಘವನ್, ಭಾರತೀಯ ವಿಜ್ಞಾನ ಕಾಂಗ್ರೆಸ್‍ನ ಮಾಜಿ ಪ್ರಧಾನ ಅಧ್ಯಕ್ಷರೂ ಆದ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮಕುಲಾಧಿಪತಿ ಡಾ.ಸುರೇಶ್ ಭೋಜ್‍ರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರೊ.ವೈ.ಟಿ.ತಾತಾಚಾರಿ ಬಯಸಿದಂತೆ ಸೇವೆ-ಸಹಾಯ: ಸಾಮಾನ್ಯವಾಗಿ ಪ್ರಶಸ್ತಿಯೊಂದಿಗೆ ನಗದು ನೀಡು ವುದು ನಮ್ಮ ವಾಡಿಕೆ. ಆದರೆ ಯಾವುದೇ ಕಾರಣಕ್ಕೂ ನಗದು ನೀಡಬಾರದೆಂದು ನಯವಾಗಿಯೇ ನಿರಾಕರಿ ಸಿದ್ದಾರೆ. ಅದಕ್ಕಾಗಿ ನಗದು ಬದಲಿಗೆ ಪ್ರಶಸ್ತಿ ಪತ್ರ ದೊಂದಿಗೆ ವಿಶೇಷ ಸ್ಮರಣಿಕೆಯನ್ನು ನೀಡಲಾಗುತ್ತಿದೆ. ಕೋವಿಡ್ ತೀವ್ರವಾಗಿದ್ದ ವರ್ಷಗಳನ್ನು ಹೊರತು ಪಡಿಸಿ, ಕಳೆದ 25 ವರ್ಷಗಳಿಂದ ಈ ಪ್ರಶಸ್ತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ನನ್ನ ಪತಿ ಪ್ರೊ.ವೈ.ಟಿ.ತಾತಾಚಾರಿ ಪ್ರಸಿದ್ಧ ವಿಜ್ಞಾನಿ ಆಗಿದ್ದವರು. ಅವರು 1993ರಲ್ಲಿ ನಿಧನ ಹೊಂದಿದರು. ಅವರ ಸ್ಮರಣಾರ್ಥ ಈ ಟ್ರಸ್ಟ್ ಸ್ಥಾಪಿಸಿ, ಸೇವಾ ಚಟುವಟಿಕೆ ನಡೆಸಲಾಗುತ್ತಿದೆ. ನಮ್ಮ ಸಂಪಾದನೆಯಲ್ಲಿ ಸಮಾಜಕ್ಕೆ ಕೈಲಾದ ಸೇವೆ-ಸಹಾಯ ಮಾಡಬೇಕೆಂದು ಅವರು ಬಯಸಿದ್ದರು. ಅದರಂತೆ ಟ್ರಸ್ಟ್ ಮುನ್ನಡೆಯುತ್ತಿದೆ ಎಂದು ಮಾಧುರಿ ತಾತಾಚಾರಿ ಹೇಳಿದರು.

ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಭ್ರಮರ ಟ್ರಸ್ಟ್ ಕಳೆದ 25 ವರ್ಷಗಳಿಂದ ಸಮಾಜ ಸೇವೆ ಮಾಡು ವವರನ್ನು ಗುರುತಿಸಿ, ಗೌರವಿಸುತ್ತಿದೆ. ಟ್ರಸ್ಟ್ ನೀಡುವ ಪ್ರಶಸ್ತಿ ತನ್ನದೇ ಆದ ಪ್ರತಿಷ್ಠೆ ಹೊಂದಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸು ವುದು ಸೇರಿದಂತೆ ಬಹಳಷ್ಟು ಸೇವಾ ಚಟುವಟಿಕೆ ಗಳನ್ನು ಮೊದಲಿನಿಂದಲೂ ಟ್ರಸ್ಟ್ ಮಾಡುತ್ತಾ ಬರುತ್ತಿದೆ. ಭಾರತ್ ಬಯೋಟೆಕ್ ಅತ್ಯುತ್ತಮ ಲಸಿಕೆ ಆವಿಷ್ಕರಿಸಿದೆ. ದೇಶಿಯ ಕಂಪನಿಯಾದ ಇದರ ಈ ಕಾರ್ಯ ನಿಜಕ್ಕೂ ಪ್ರಶಂಸನೀಯ. ಇಡೀ ಪ್ರಪಂಚ ದಲ್ಲೇ ಕೋವ್ಯಾಕ್ಸಿನ್ ಉತ್ತಮ ಲಸಿಕೆ ಎಂದು ಪರಿಗಣಿ ಸಲ್ಪಟ್ಟಿದೆ ಎಂದು ತಿಳಿಸಿದರು.

ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶು ಪಾಲ ಡಾ.ಹೆಚ್.ಬಸವನಗೌಡಪ್ಪ ಮಾತನಾಡಿ, ಪ್ರತಿಯೊಂದು ಲಸಿಕೆ ಆವಿಷ್ಕರಿಸಲು ಹತ್ತಾರು ವರ್ಷಗಳೇ ಬೇಕು. ಆದರೆ ಕೋವ್ಯಾಕ್ಸಿನ್ ಲಸಿಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಆವಿಷ್ಕರಿಸಲ್ಪಟ್ಟಿದೆ. ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿ ರಕ್ಷಣೆ ನೀಡಿದ ಲಸಿಕೆ ಇದಾಗಿದೆ. ಈ ಲಸಿಕೆ ಕಂಡುಹಿಡಿಯು ವಲ್ಲಿ 100ಕ್ಕೂ ಹೆಚ್ಚು ವಿಜ್ಞಾನಿಗಳು ಶ್ರಮಿಸಿದ್ದಾರೆ. ಈ ಪೈಕಿ ಮುಖ್ಯ ಪಾತ್ರ ವಹಿಸಿದ ಅನೇಕ ವಿಜ್ಞಾನಿ ಗಳು ಡಾ.ಕೃಷ್ಣ ಎಲ್ಲ ಅವರ ನೇತೃತ್ವದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಹೇಳಿದರು. ಜೆಎಸ್‍ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರೂ ಆದ ಪ್ರಭಾರ ನಿರ್ದೇಶಕ ಡಾ.ಸಿ.ಪಿ.ಮಧು, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ಮಂಜುನಾಥ್ ಗೋಷ್ಠಿಯಲ್ಲಿದ್ದರು.

Translate »