ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಒಳಒಪ್ಪಂದ: ಜೆಡಿಎಸ್ ಆರೋಪ
ಮೈಸೂರು

ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಒಳಒಪ್ಪಂದ: ಜೆಡಿಎಸ್ ಆರೋಪ

July 3, 2020

ಮೈಸೂರು, ಜು.2 (ಪಿಎಂ)- ಮೈಸೂರು ತಾಲೂಕು ಎಪಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಕೆಲ ಸ್ಥಳೀಯ ಮುಖಂಡರು ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಲು ಎಪಿಎಂಸಿ ನಾಮ ನಿರ್ದೇಶಿತ ಸದಸ್ಯರಿಗೆ ಸೂಚಿಸಿದ್ದರು ಎಂದು ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೋಟೆಹುಂಡಿ ಮಹದೇವು ಮೈಸೂರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು `ಕಾಂಗ್ರೆಸ್ ಮುಕ್ತ ಭಾರತ’ದ ಪಣತೊಟ್ಟಿದ್ದರೆ, ಮೈಸೂರಿನ ಕೆಲ ಬಿಜೆಪಿ ಮುಖಂಡರು `ಕಾಂಗ್ರೆಸ್ ಉಳಿಸಲು’ ಹೊರಟಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಮೈಸೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯೇ ಸಾಕ್ಷಿ ಎಂದು ನುಡಿದರು. ಈ ಚುನಾವಣೆಯಲ್ಲಿ ಲಾಟರಿ ಮೂಲಕ ಆಯ್ಕೆ ಮಾಡುವ ಸನ್ನಿವೇಶವೇ ಇರಲಿಲ್ಲ. ಆದರೆ ಒಳ ಒಪ್ಪಂದದಿಂದ ಅಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು ಎಂದು ಆರೋಪಿಸಿದರು. ನಮಗೆ ಶಾಸಕ ಜಿ.ಟಿ.ದೇವೇಗೌಡರೇ ಒಂದು ಪಕ್ಷವಿದ್ದಂತೆ. ಅವರು ಯಾವ ಪಕ್ಷದಲ್ಲಿ ಇರುತ್ತಾರೋ ನಾನೂ ಅಲ್ಲೇ ಇರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಉಮಾಶಂಕರ್ ಮಾತ ನಾಡಿ, ಕೊರೊನಾ ನಡುವೆ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡರ ಒತ್ತಡಕ್ಕೆ ಮಣಿದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಸರ್ಕಾರ ಚುನಾವಣೆ ನಡೆಸಲು ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ಮೆಲ್ಲಹಳ್ಳಿ ಮಹದೇವಸ್ವಾಮಿ ಸಲ್ಲದ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು. ಜಿ.ಟಿ.ದೇವೇಗೌಡರು ಸಚಿವರಾಗಿಲ್ಲ. ಚುನಾವಣೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡರೆ ಅದಕ್ಕೆ ಜಿಟಿಡಿ ಹೇಗೆ ತಾನೆ ಕಾರಣರಾಗುತ್ತಾರೆ? ಮಹದೇವಸ್ವಾಮಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು. ಮೈಸೂರು ಎಪಿಎಂಸಿ ಮಾಜಿ ಉಪಾಧ್ಯಕ್ಷ ಜವರಪ್ಪ, ವರ್ತಕ ಪ್ರಕಾಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »