ಡಿಸೆಂಬರ್ 10ರಿಂದಲೇ ಬಿಜೆಪಿ ಚುನಾವಣಾ ಕಣ ಪ್ರವೇಶ
News

ಡಿಸೆಂಬರ್ 10ರಿಂದಲೇ ಬಿಜೆಪಿ ಚುನಾವಣಾ ಕಣ ಪ್ರವೇಶ

November 25, 2022

ಬೆಂಗಳೂರು, ನ.24 (ಕೆಎಂಶಿ)- ಮುಂಬರುವ ವಿಧಾನಸಭಾ ಚುನಾವಣೆಗೆ ಡಿಸೆಂಬರ್ 10 ರಿಂದಲೇ ಕಣಕ್ಕಿಳಿಯಲು ರಾಜ್ಯ ಬಿಜೆಪಿ ನಿರ್ಧರಿಸಿದೆ.
ಆರ್‍ಎಸ್‍ಎಸ್ ಮತ್ತು ಅದರ ಉಪ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಹಾಗೂ ಪಕ್ಷದ ಮುಖಂಡರುಗಳನ್ನು ಕೇಶವ ಕೃಪಕ್ಕೆ ಕರೆಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸಲಾಗಿದೆ.
ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ವರಿಷ್ಠರು ನಡೆಸಿರುವ ಸಮೀಕ್ಷೆಗಳ ಆಧಾರದ ಮೇಲೆ ಎ,ಬಿ ಮತ್ತು ಸಿ ದರ್ಜೆಯಲ್ಲಿ ವಿಭಜಿಸಲಾಗಿದೆ. ಗೆದ್ದೇ ಗೆಲ್ಲುವ ಕ್ಷೇತ್ರವನ್ನು ಎ ಎಂದು ಪರಿಗಣಿಸಲಾಗಿದೆ. ಬಿ ವಿಭಾಗದಲ್ಲಿ ಒಂದಷ್ಟು ಶ್ರಮ ವಹಿಸಿದರೆ ಆ ಕ್ಷೇತ್ರವನ್ನು ಗೆಲ್ಲಬಹುದು. ಸಿ ವಿಭಾಗದಲ್ಲಿ ಗೆಲುವು ಸಾಧ್ಯವೇ ಇಲ್ಲ. ಆದರೆ ಚುನಾ ವಣೆಯಲ್ಲಿ ಮತ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು. ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು, ಐವರು ಸಚಿವರನ್ನು ರಾಜ್ಯ ಚುನಾವಣಾ ಉಸ್ತುವಾರಿಗೆ ನೇಮಿಸಲಿದ್ದಾರೆ. ಡಿಸೆಂಬರ್ 10ರಿಂದಲೇ ಈ ಸಚಿವರು ವಾರ್‍ರೂಂನಲ್ಲಿ ಕುಳಿತು ಕೆಲಸ ಮಾಡಲಿದ್ದಾರೆ. ರಾಜ್ಯ ವನ್ನು ಐದು ಭಾಗವಾಗಿ ವಿಂಗಡಿಸಿ, ಪ್ರತಿ ಸಚಿವರಿಗೆ ಸಂಪೂರ್ಣ ಹೊಣೆಗಾರಿಕೆಯನ್ನು ವರಿಷ್ಠರು ನೀಡಲಿದ್ದಾರೆ.
ಈ ಸಚಿವರು ನೀಡುವ ಮಾರ್ಗದರ್ಶನದಂತೆ ನೀವು ನಡೆದುಕೊಳ್ಳಬೇಕು ಹಾಗೂ ಅವರ ಎಲ್ಲಾ ಕೋರಿಕೆಗಳನ್ನು ಈಡೇರಿಸುವ ಕೆಲಸ ನಿಮ್ಮದಾಗಿದೆ ಎಂದು ಮುಖ್ಯಮಂತ್ರಿ ಯವರಿಗೆ ಸಂಘ ಪರಿವಾರದ ಮುಖಂಡರು ಸೂಚಿಸಿದ್ದಾರೆ.

ವಾರ್ ರೂಂನಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಅವರು ಏನು ಹೇಳುತ್ತಾರೋ ಅದೇ ಅಂತಿಮ. ಕೇಂದ್ರ ವರಿಷ್ಠರ ಮಾರ್ಗದರ್ಶನದಲ್ಲಿ ವಾರ್ ರೂಂ ಕೆಲಸ ಮಾಡುತ್ತದೆ. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣಾ ಕಣಕ್ಕಿಳಿದಿವೆ. ನೀವೂ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದೀರಿ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಎಸೆಯು ತ್ತಿರುವ ಬಾಣಗಳಿಗೆ ನಿಮ್ಮಿಂದ ಸಮರ್ಪಕ ಉತ್ತರವಿಲ್ಲ. ಅದಕ್ಕೆ ಪ್ರತಿತಂತ್ರ ರೂಪಿಸುತ್ತಿಲ್ಲ ಎಂದು ಪರಿವಾರದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿವಾರದ ಪ್ರತಿಯೊಬ್ಬ ಕಾರ್ಯಕರ್ತನು ತನಗೆ ವಹಿಸಿದ ಕೆಲಸವನ್ನು ಆ ಕ್ಷೇತ್ರದಲ್ಲಿ ಮಾಡುತ್ತಾನೆ. ಅವರು ನೀಡುವ ವರದಿಯನ್ನು ಮುಂದಿಟ್ಟು ಕೊಂಡು ನಿಮಗೆ ನಾವು ಸಲಹೆ ಸೂಚನೆ ಕೊಡುತ್ತೇವೆ. ನಿಮ್ಮ ಸಂಪುಟದಲ್ಲಿರುವ ಪ್ರತಿಯೊಬ್ಬ ಸಚಿವನು ತನ್ನ ಸುತ್ತಲಿನ ನಾಲ್ಕು ಕ್ಷೇತ್ರಗಳ ಹೊಣೆಗಾರಿಕೆಯು ಅವರೇ ವಹಿಸಿಕೊಳ್ಳಬೇಕು. ಪಕ್ಷದ ಅಭ್ಯರ್ಥಿಗಳಿಗೆ ಈ ಸಚಿವರು ಚುನಾವಣೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ಇದನ್ನು ಈಗಲೇ ಅವರಿಗೆ ಮನದಟ್ಟು ಮಾಡಿ. ಹಾಲಿ ಶಾಸಕರಿಗೆ ಪಕ್ಷದಿಂದ ಯಾವುದೇ ರೀತಿಯ ಸೌಕರ್ಯಗಳಿರುವುದಿಲ್ಲ. ಅವರಿಗೆ ಟಿಕೆಟ್ ನೀಡಿದರೆ ಅವರು ಸ್ವಂತ ಚುನಾವಣಾ ವೆಚ್ಚ ಭರಿಸಿ, ಮತ್ತೆ ಆಯ್ಕೆಗೊಳ್ಳಬೇಕು.

Translate »