ಉದ್ದಿಮೆ ರಹದಾರಿ ಶುಲ್ಕ ವಸೂಲಾತಿ  ಕಾರ್ಯ ತೀವ್ರಗೊಳಿಸಿದ ನಗರಪಾಲಿಕೆ
ಮೈಸೂರು

ಉದ್ದಿಮೆ ರಹದಾರಿ ಶುಲ್ಕ ವಸೂಲಾತಿ ಕಾರ್ಯ ತೀವ್ರಗೊಳಿಸಿದ ನಗರಪಾಲಿಕೆ

March 25, 2022

ಮೈಸೂರು,ಮಾ.24(ಆರ್‍ಕೆ)-ಆರ್ಥಿಕ ಸಂಪನ್ಮೂಲ ಕ್ರೋಢೀ ಕರಿಸಲು ಆಸ್ತಿ ತೆರಿಗೆ, ನೀರಿನ ಕಂದಾಯ ವಸೂಲಾತಿ ತೀವ್ರಗೊಳಿ ಸಿರುವ ಮೈಸೂರು ಮಹಾನಗರಪಾಲಿಕೆಯು, ಇದೀಗ ಉದ್ದಿಮೆ ರಹದಾರಿ(ಟ್ರೇಡ್ ಲೈಸೆನ್ಸ್) ಶುಲ್ಕ ವಸೂಲಾತಿ ಕಾರ್ಯ ತೀವ್ರ ಗೊಳಿಸಿದೆ. ಮೈಸೂರು ನಗರದಲ್ಲಿರುವ ಅಂಗಡಿ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ವಾಣಿಜ್ಯ ಮಳಿಗೆಗಳು, ಮಾಲ್, ಸಿನಿಮಾ ಮಂದಿರ ಸೇರಿದಂತೆ ಹಲವು ಬಗೆಯ ವ್ಯಾಪಾರ-ವಹಿವಾಟು ನಡೆಸುವವರು ಕಡ್ಡಾಯವಾಗಿ ಪಾಲಿಕೆಯಿಂದ ರಹದಾರಿ ಪಡೆಯಬೇಕು ಹಾಗೂ ಪ್ರತೀ ವರ್ಷ ನವೀಕರಿಸಿಕೊಳ್ಳಬೇಕು. ಆದರೆ ಹಲವರು ಟ್ರೇಡ್ ಲೈಸೆನ್ಸ್ ಅನ್ನೇ ಪಡೆಯುವುದಿಲ್ಲ. ಹಲವು ಉದ್ದಿಮೆದಾರರು ನವೀಕರಣ ಮಾಡಿಸಿಕೊಳ್ಳದೇ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.

ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಅವರ ನಿರ್ದೇಶನದಂತೆ ಎಲ್ಲಾ 9 ವಲಯ ಕಚೇರಿಗಳ ವಲಯಾಧಿಕಾರಿಗಳು, ರೆವಿನ್ಯೂ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿಗಳೊಂದಿಗೆ ತಂಡ ರಚಿಸಿ ಕೊಂಡು ಕಳೆದ ಸೋಮವಾರದಿಂದ ತಮ್ಮ ವ್ಯಾಪ್ತಿಯ ವಾಣಿಜ್ಯ ರಸ್ತೆ, ಮುಖ್ಯ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟು, ವಿವಿಧ ಮಾದರಿಯ ಉದ್ದಿಮೆಗಳಿಗೆ ಭೇಟಿ ನೀಡಿ ಟ್ರೇಡ್ ಲೈಸೆನ್ಸ್ ಪರಿಶೀಲಿಸುತ್ತಿ ದ್ದಾರೆ. ಲೈಸೆನ್ಸ್ ಪಡೆದಿದ್ದರೆ ಪ್ರಸಕ್ತ ಸಾಲಿನಲ್ಲಿ ರಿನೀವಲ್ ಮಾಡಿಸಿ ಕೊಂಡಿದ್ದಾರೆಯೇ ಅಥವಾ ರಹದಾರಿಗಳನ್ನೇ ಪಡೆಯದಿದ್ದಲ್ಲಿ ಅಂತಹ ಉದ್ದಿಮೆಗಳನ್ನು ಬಂದ್ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಅಧಿಕಾರಿಗಳಿಗೆ ಹೆದರಿ ಕೆಲವರು ಸ್ಥಳದಲ್ಲೇ ದಾಖಲಾತಿಗಳ ಪ್ರತಿ ಸಲ್ಲಿಸಿ ಶುಲ್ಕ ಪಾವತಿಸಿ ಟ್ರೇಡ್ ಲೈಸೆನ್ಸ್ ನೋಂದಣಿ ಹಾಗೂ ರಿನೀವಲ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ‘ಮೈಸೂರು ಮಿತ್ರ’ ನಿಗೆ ಮಾಹಿತಿ ನೀಡಿದ ಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪಾ, ಟ್ರೇಡ್ ಲೈಸೆನ್ಸ್ ತಪಾಸಣೆ ನಿರಂತರವಾಗಿ ನಡೆಯುವ ಪ್ರಕ್ರಿಯೆ, ಆದರೆ ಬಹುತೇಕ ಉದ್ದಿಮೆದಾರರು ಪರವಾನಗಿ ತೆಗೆದುಕೊಳ್ಳದೇ ಅಥವಾ ನವೀಕರಿಸಿಕೊಳ್ಳದೇ ವ್ಯಾಪಾರ-ವಹಿವಾಟು ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಸೂಚನೆಯಂತೆ ಸೋಮವಾರದಿಂದ ಅಭಿಯಾನ ತೀವ್ರಗೊಳಿಸಿ ದ್ದೇವೆ ಎಂದರು. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಗಳ ಕಾಲ ವ್ಯಾಪಾರ ಕ್ಷೀಣಿಸಿದ್ದ ಕಾರಣ ನಾವು ಕಾರ್ಯಾಚರಣೆ ನಡೆಸುತ್ತಿರಲಿಲ್ಲ. ಇದೀಗ ಎಲ್ಲಾ ವಹಿವಾಟುಗಳೂ ಸಹಜ ಸ್ಥಿತಿಗೆ ಮರಳಿರುವುದರಿಂದ ಇದೀಗ ಟ್ರೇಡ್ ಲೈಸೆನ್ಸ್ ಶುಲ್ಕ ವಸೂಲಿ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದೇವೆ ಎಂದು ತಿಳಿಸಿದರು.
ಕಲ್ಯಾಣ ಮಂಟಪ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಸಿನಿಮಾ ಮಂದಿರ, ಖಾಸಗಿ ಆಸ್ಪತ್ರೆ, ಮಾಲ್, ವಾಣಿಜ್ಯ ಸಂಕೀರ್ಣಗಳಂತಹ ದೊಡ್ಡ ದೊಡ್ಡ ಉದ್ದಿಮೆಗಳ ಟ್ರೇಡ್ ಲೈಸೆನ್ಸ್‍ಗಳನ್ನು ಮೊದಲ ಆದ್ಯತೆ ಮೇರೆಗೆ ಪರಿಶೀಲಿಸುತ್ತಿದ್ದೇವೆ. ಲೈಸೆನ್ಸ್ ಪಡೆಯದ ಅಥವಾ ನವೀಕರಿಸದ ಉದ್ದಿಮೆಗಳನ್ನು ಮುಲಾಜಿಲ್ಲದೇ ಬಂದ್ ಮಾಡಿ ಸುತ್ತಿದ್ದೇವೆ. ನಾವು ಕ್ರಮಕ್ಕೆ ಮುಂದಾಗುತ್ತಿದ್ದಂತೆಯೇ ಬಹುತೇಕ ಮಂದಿ ಸ್ಥಳದಲ್ಲೇ ಶುಲ್ಕ ಪಾವತಿಸಿ ನವೀಕರಿಸಿಕೊಳ್ಳುತ್ತಿದ್ದಾರೆ ಎಂದು ರೂಪಾ ತಿಳಿಸಿದರು.

Translate »