ವಿಶ್ವದ ಶ್ರೇಷ್ಠ ನಾಯಕ, ಚಾಣಾಕ್ಷ ವಿಕೆಟ್ ಕೀಪರ್, ಕ್ಯಾಪ್ಟನ್ ಕೂಲ್, ಅತ್ಯುತ್ತಮ ಫಿನಿಷರ್, ಹೆಲಿಕಾಪ್ಟರ್ ಶಾಟ್ ಜನಕ, ಮೂರು ಐಸಿಸಿ ಟ್ರೋಫಿ ಗಳನ್ನು ಗೆದ್ದು ಕೊಟ್ಟು ಅನೇಕ ಸಾಧನೆಗಳನ್ನು ತಮ್ಮ ಹೆಸ ರಿಗೆ ಬರೆಸಿಕೊಂಡಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. ಶನಿವಾರ ತಮ್ಮ ಇನ್‍ಸ್ಟಾಗ್ರಾಮ್ ಮೂಲಕ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಧೋನಿ, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದರು. ಈ ಮೂಲಕ 2019ರ ವಿಶ್ವಕಪ್ ಬಳಿಕ ನಿವೃತ್ತಿ ವಿಚಾರವಾಗಿ ನಡೆಯುತ್ತಿದ್ದ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಧೋನಿ ಸಾಧನೆಗಳು: 2004ರ ಡಿಸೆಂಬರ್ 24ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದರ್ಪಣೆ ಮಾಡಿದ ಮಹೇಂದ್ರ ಸಿಂಗ್ ಧೋನಿ, ತಮ್ಮ 16 ವರ್ಷಗಳ ವೃತ್ತಿ ಜೀವನದಲ್ಲಿ ಹಲವಾರು ಸಾಧನೆ ಮಾಡಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಯಾವಾಗಲೂ ಶಾಂತರಾಗಿರುವ ಧೋನಿ, ಒಟ್ಟು 538 ಪಂದ್ಯಗಳಿಂದ 17266 ರನ್ ಗಳಿಸಿದ್ದು, ಟೆಸ್ಟ್ 90 ಪಂದ್ಯಗಳಿಂದ 4876 ರನ್, ಗರಿಷ್ಠ 224, 6 ಶತಕ, 33 ಅರ್ಧ ಶತಕ, 256 ಕ್ಯಾಚ್, 38 ಸ್ಟಂಪ್ ಮಾಡಿದ್ದಾರೆ. 350 ಏಕದಿನ ಪಂದ್ಯಗಳಿಂದ 10773 ರನ್, ಗರಿಷ್ಠ 183, 10 ಶತಕ, 73 ಅರ್ಧ ಶತಕ, 321 ಕ್ಯಾಚ್, 123 ಸ್ಟಂಪ್ ಮಾಡಿದ್ದಾರೆ. ಇನ್ನೂ 98 ಟಿ20ಯಲ್ಲಿ ಪಂದ್ಯಗಳಿಂದ 1617 ರನ್, ಗರಿಷ್ಠ 56, 2 ಅರ್ಧ ಶತಕ, 57 ಕ್ಯಾಚ್, 34 ಸ್ಟಂಪ್ ಮಾಡಿದ್ದಾರೆ. ನಾಯಕನಾಗಿ ಅತೀ ಹೆಚ್ಚು 332 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಧೋನಿ 195 ಸ್ಟಂಪ್ ಮಾಡಿದ್ದಾರೆ.
ನಾಯಕನಾಗಿ ಧೋನಿ: ಭಾರತ ತಂಡಕ್ಕೆ ಎಲ್ಲವನ್ನೂ ಕೊಟ್ಟ ಏಕೈಕ ನಾಯಕ ಧೋನಿ ನಾಯಕತ್ವದಲ್ಲಿ ಭಾರತ 110 ಏಕದಿನ, 27 ಟೆಸ್ಟ್ ಹಾಗೂ 41 ಟಿ20 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಲ್ಲದೇ 2007 ರಲ್ಲಿ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಗಳನ್ನು ಗೆದ್ದಿದೆ. ಈ ಮೂಲಕ 3 ಐಸಿಸಿ ಟ್ರೋಫಿ ಗೆದ್ದ ಮೊದಲ ನಾಯಕ ಎಂಬ ಕೀರ್ತಿಗೆ ಧೋನಿ ಭಾಜನರಾಗಿದ್ದಾರೆ. ಏಷ್ಯಾಕಪ್ ಜಯಿಸುವ ಜೊತೆಗೆ ಮೂರು ಮಾದರಿ ಕ್ರಿಕೆಟ್‍ನಲ್ಲಿ ಭಾರತವನ್ನು ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಅಗ್ರಕ್ಕೇರಿದ ಭಾರತ ಸತತ 11 ತಿಂಗಳ ಕಾಲ ನಂ.1 ಸ್ಥಾನದಲ್ಲಿದ್ದು, ಮೊದಲ ಬಾರಿಗೆ ಮೆಸ್ ಪ್ರಶಸ್ತಿ ಪಡೆದ ಸಾಧನೆ ಮಾಡಿತು.
ಧೋನಿಗೆ ಸಂದ ಗೌರವಗಳು: 2018ರಲ್ಲಿ ಪದ್ಮಭೂಷಣ, 2009ರಲ್ಲಿ ಪದ್ಮಶ್ರೀ, 2007-08ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ರಾಷ್ಟ್ರೀಯ ಪ್ರಶಸ್ತಿ. 2008, 2009ರಲ್ಲಿ ವರ್ಷದ ಐಸಿಸಿ ಏಕದಿನ ಆಟಗಾರ, 2011ರಲ್ಲಿ ವರ್ಷದ ಭಾರತೀಯ ಕ್ರಿಕೆಟಿಗ ಪ್ರಶಸ್ತಿ, 2009, 2010, 2013ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಇಲೆವೆನ್ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ 2011ರಲ್ಲಿ ಇಂಡಿಯನ್ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ಸ್ಥಾನ ಪಡೆದಿದ್ದ ಧೋನಿ, 2019ರಲ್ಲಿ ಜಮ್ಮು ಕಾಶ್ಮೀರದಲ್ಲಿ 2 ವಾರಗಳ ಕಾಲ ಭದ್ರತಾ ಸೇವೆಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಅಭಿನಂದನೆಗಳ ಮಹಾಪೂರ: ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಮಾಜಿ ನಾಯಕ ಧೋನಿ ಅವರಿಗೆ ಕ್ರಿಕೆಟ್ ದೇವರು, ಸಚಿನ್ ತೆಂಡೂಲ್ಕರ್, ಭಾರತ ತಂಡದ ನಾಯಕ ಕಿಂಗ್ ಕೊಹ್ಲಿ, ವಿರೇಂದ್ರ ಸೆಹ್ವಾಗ್, ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಕೆ.ಎಲ್. ರಾಹುಲ್, ಸೇರಿದಂತೆ ವಿಶ್ವದ ಎಲ್ಲಾ ತಂಡಗಳ ಹಾಲಿ ಹಾಗೂ ಮಾಜಿ ಆಟಗಾರರು ಅಭಿನಂದನೆ ಸಲ್ಲಿಸಿದ್ದು, ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಹಲವು ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದ ಧೋನಿ 2014ರಲ್ಲೇ ಟೆಸ್ಟ್‍ಗೆ ವಿದಾಯ ಘೋಷಿಸಿದ್ದರು. ಕಳೆದ ವರ್ಷ ಇಂಗ್ಲೆಂಡ್‍ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿ ಮೂರು ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಒಟ್ಟಾರೆ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಜೀವನ ಅಂತ್ಯವಾಗಿದ್ದು, ಅವರು ಧರಿಸುತ್ತಿದ್ದ 7ನೇ ನಂಬರ್‍ನ ಜೆರ್ಸಿ ತೆರೆಮರೆಗೆ ಸರಿದಿದೆ.
ಐಪಿಎಲ್‍ನಲ್ಲಿ ಧೋನಿ ಹವಾ: 2008ರಲ್ಲಿ ಆರಂಭವಾದ ವಿಶ್ವದ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲೂ ಧೋನಿ ಅದ್ಫುತ ಸಾಧನೆ ಮಾಡಿದ್ದಾರೆ. ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿರುವ ಅವರು ಚೆನ್ನೈಗೆ 3 ಬಾರಿ (2010, 2011 ಹಾಗೂ 2018) ಐಪಿಎಲ್ ಹಾಗೂ 2 ಬಾರಿ ಚಾಂಪಿಯನ್ಸ್ ಲೀಗ್ ಟೋಫಿ ಗೆದ್ದು ಕೊಟ್ಟಿದ್ದಾರಲ್ಲದೆ, ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ ಚೆನ್ನೈ ತಂಡವನ್ನು ಉಪಾಂತ್ಯಕ್ಕೆ ಕರೆದೊಯ್ದ ಏಕೈಕ ನಾಯಕರಾಗಿ ಹೊರಹೊಮ್ಮಿದ್ದಾರೆ.
ಕ್ರಿಕೆಟ್‍ಗೆ ಸುರೇಶ್ ರೈನಾ ಗುಡ್ ಬೈ
ಬೆಂಗಳೂರು, ಆ.16- ಮಾಜಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಭಾರತದ ಪ್ರಮುಖ ಆಟಗಾರ ಸುರೇಶ್ ರೈನಾ ತಮ್ಮ 13 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಈ ಸಂಬಂಧ ಇನ್‍ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಿರುವ ರೈನ್, ಮಹಿ ನಿಮ್ಮೊಂದಿಗೆ ಅಂಗಣದಲ್ಲಿ ಕಳೆದ ಕ್ಷಣಗಳು ರೋಚಕ. ನಿಮ್ಮ ಮೇಲಿನ ಅಭಿಮಾನದಿಂದ ನಿಮ್ಮ ಹಾದಿಯನ್ನೇ ಹಿಡಿಯಲು ಬಯಸಿದ್ದೇನೆ. ಧನ್ಯವಾದಗಳು ಭಾರತ, ಜೈ ಹಿಂದ್ ಎಂದಿದ್ದಾರೆ. ಮೂಲತಃ ಉತ್ತರ ಪ್ರದೇಶದ ರೈನಾ 3 ಮಾದರಿಯಲ್ಲಿ ಶತಕ ಗಳಿಸಿದ ಅಪರೂಪದ ಆಟಗಾರ. ಇವರು 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 768, 5615 ಮತ್ತು 1605 ರನ್ ಗಳಿಸಿ ದ್ದಾರೆ. ಇನ್ನೂ ಐಪಿಎಲ್‍ನಲ್ಲಿ 193 ಪಂದ್ಯ ಆಡಿರುವ ಅವರು 5368 ರನ್ ಗಳಿಸಿದ್ದಾರೆ.