ಮೈಸೂರು, ಜೂ.17(ಎಂಟಿವೈ)- ಶ್ರೀಗಂಧ ಮರ ಕಳವು ಮಾಡುತ್ತಿದ್ದ ಇಬ್ಬರನ್ನು ಭೂ ಮಾಲೀಕರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಬೈಕ್, ಗರಗಸ, ಮಚ್ಚು ಹಾಗೂ 5 ಶ್ರೀಗಂಧದ ಮರಗಳ ತುಂಡು ಗಳನ್ನು ವಶಪಡಿಸಿಕೊಂಡಿದ್ದಾರೆ. ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ನಿವಾಸಿ ರವಿ ಮತ್ತು ಲೋಕೇಶ್ ಶ್ರೀಗಂಧ ಮರ ಕಳವು ಮಾಡಿ ಸಿಕ್ಕಿಬಿದ್ದಿದ್ದಾರೆ.
ತಿ.ನರಸೀಪುರ ತಾಲೂಕಿನ ಸೋಸಲೆ ಹೋಬಳಿ ಕಾರ್ಗಳ್ಳಿ ಗ್ರಾಮದ ಕೆ.ಎಂ.ವೀರಭದ್ರಯ್ಯ ಎಂಬವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧ ಮರವನ್ನು ರವಿ ಮತ್ತು ಲೋಕೇಶ್ ಮಂಗಳವಾರ ರಾತ್ರಿ 10.30ರಲ್ಲಿ ಕತ್ತರಿಸಿ ಸಾಗಿಸುತ್ತಿದ್ದಾಗ ಜಮೀನಿನ ಮಾಲೀಕ ವೀರಭದ್ರಯ್ಯ ಹಾಗೂ ಗ್ರಾಮಸ್ಥರು ಹಿಡಿದಿದ್ದಾರೆ.
ವಿಷಯ ತಿಳಿದು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿದ ಡಿಆರ್‍ಎಫ್‍ಓ ಎಂ.ಎಸ್.ಉಮೇಶ್, ಎಸ್.ಎಂ.ಮಂಜುನಾಥ್, ಅರಣ್ಯ ರಕ್ಷಕ ಚೇತನ್ ಮಹಜರು ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದರು. ಕೃತ್ಯಕ್ಕೆ ಬಳಸಿದ ಬೈಕ್(ಕೆಎ.11, ಯು.7990), ಗರಗಸ, 2 ಮಚ್ಚು, ಮೊಬೈಲ್ ಹಾಗೂ 20 ಕೆಜಿ ತೂಕದ ಶ್ರೀಗಂಧ ಮರದ 5 ತುಂಡುಗಳನ್ನು ವಶಕ್ಕೆ ಪಡೆದು ಕೊಂಡರು. ಆರೋಪಿಗಳು ಮೂರ್ನಾಲ್ಕು ದಿನ ಮೊದಲೇ ಸ್ಥಳ ಗುರುತಿಸಿ, ಪ್ಲಾನ್ ಮಾಡಿ ಕೊಂಡು ಶ್ರೀಗಂಧದ ಮರವನ್ನು ಕಳವು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.