ಸುಂಟಿಕೊಪ್ಪ ಬಳಿ ಲಾಕ್‍ಡೌನ್ ಉಲ್ಲಂಘಿಸಿ ಮೋಜು-ಮಸ್ತಿಯಲ್ಲಿ ತೊಡಗಿದ್ದ 6 ಮಂದಿ ವಿರುದ್ಧ ಪ್ರಕರಣ ದಾಖಲು
ಕೊಡಗು

ಸುಂಟಿಕೊಪ್ಪ ಬಳಿ ಲಾಕ್‍ಡೌನ್ ಉಲ್ಲಂಘಿಸಿ ಮೋಜು-ಮಸ್ತಿಯಲ್ಲಿ ತೊಡಗಿದ್ದ 6 ಮಂದಿ ವಿರುದ್ಧ ಪ್ರಕರಣ ದಾಖಲು

April 13, 2020

ಮಡಿಕೇರಿ, ಏ.12- ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಮೋಜು-ಮಸ್ತಿಯಲ್ಲಿ ತೊಡಗಿದ್ದ 6 ಮಂದಿ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರು ಮಂದಿ ಗೆಳೆಯರು ಕಳೆದ 3 ದಿನಗಳಿಂದ ಸುಂಟಿಕೊಪ್ಪ ಬಳಿಯ ರೆಸಾರ್ಟ್‍ವೊಂದರಲ್ಲಿ ತಂಗಿದ್ದು, ಸಂಜೆ ವೇಳೆ ಡಿಜೆ ಸಂಗೀತದ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಅಲ್ಲದೇ ಜೀಪ್‍ನಲ್ಲಿ ಜಾಲಿ ರೈಡ್ ತೆರಳಿ ಎಲ್ಲೆಡೆ ಓಡಾಡುತ್ತಾ ಲಾಕ್‍ಡೌನ್ ಆದೇಶ ಉಲ್ಲಂಘಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪ್ರವಾಸಿಗರನ್ನು ಅಡ್ಡಗಟ್ಟಿ ಎಚ್ಚರಿಕೆ ನೀಡಿದರೂ, ಲೆಕ್ಕಿಸದೇ ಮೋಜು ಮಸ್ತಿಯಲ್ಲಿ ತೊಡಗಿದ್ದರೆನ್ನಲಾಗಿದೆ. ನಂತರ ಸ್ಥಳೀಯರು ಈ ಬಗ್ಗೆ ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದು ಪೊಲೀಸರು ಸ್ಥಳಕ್ಕೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದ್ದ 6 ಮಂದಿಯನ್ನು ವಶಕ್ಕೆ ಪಡೆದು, ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮತ್ತೊಂದು ಪ್ರಕರಣ: ಮಡಿಕೇರಿ ಸಮೀಪದ ಕಡಗದಾಳು ಗ್ರಾಮದಲ್ಲಿ ಫೈಯರ್ ಕ್ಯಾಂಪ್ ಹಾಕಿಕೊಂಡು ಖಾಲಿ ಬಿಯರ್ ಬಾಟಲಿಗಳಿಗೆ ಕಲ್ಲು ಹೊಡೆಯುತ್ತಾ ಮನರಂಜನೆ ಪಡೆಯುತ್ತಿದ್ದ ಯುವಕರ ತಂಡದ ಓರ್ವ ಆರೋಪಿ ಹಾಗೂ 4  ಬೈಕ್‍ಗಳನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿವರ: ಕಡಗದಾಳು ಗ್ರಾಮದ ಕತ್ತಲೆಕಾಡು ಪೈಸಾರಿಯ ಮೈದಾನದಲ್ಲಿ ಯುವಕರ ಗುಂಪೊಂದು ಫಯರ್ ಕ್ಯಾಂಪ್ ಹಾಕಿದ್ದಲ್ಲದೇ, ಖಾಲಿ ಬಿಯರ್ ಬಾಟಲಿ ಗಳನ್ನು ಮರಕ್ಕೆ ನೇತು ಹಾಕಿ ಅದಕ್ಕೆ ಕಲ್ಲು ಹೊಡೆಯುತ್ತಾ ಕೇಕೆ ಹಾಕುತ್ತಿತ್ತು. ವೈದ್ಯಕೀಯ ತುರ್ತು ಪರಿಸ್ಥಿತಿ ನಡುವೆ ಯುವಕರ ಆಟಾಟೋಪದ ಬಗ್ಗೆ ಅಲ್ಲಿನ ಸಾರ್ವಜನಿಕರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಮಾಹಿತಿ ಪಡೆದುಕೊಂಡ ಗ್ರಾಮಾಂತರ ಪೊಲೀಸರ ತಂಡ ಅತ್ತ ತೆರಳಿ ಪರಿಶೀಲನೆಗೆ ಮುಂದಾದಾಗ ಯುವಕರ ತಂಡ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಈ ಸಂದರ್ಭ ಕತ್ತಲೆಯಲ್ಲಿ ಮರೆಯಾಗುತ್ತಿದ್ದ ಯುವಕರ ಪೈಕಿ ಅಭಿಷೇಕ್ ಎಂಬಾತನನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಅಲ್ಲಿದ್ದ 4 ಮೋಟಾರು ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ಹಿನ್ನಲೆಯಲ್ಲಿ ಸರಕಾರ ಲಾಕ್‍ಡೌನ್ ಆದೇಶ ಹೊರಡಿಸಿದ್ದರೂ ಕೂಡ ಇದನ್ನು ಉಲ್ಲಂಘಿಸಿದ ಅಪರಾಧಕ್ಕಾಗಿ ಕಲಂ 188, 269, ಐಪಿಸಿ ಮತ್ತು 5(ಬಿ) ಡಿಎಂ ಆ್ಯಕ್ಟ್ 2005 ಪ್ರಕಾರ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿ ಮತ್ತು ವಶಕ್ಕೆ ಪಡೆಯಲಾದ ಮೋಟಾರು ವಾಹನಗಳ ಕುರಿತು ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 

 

 

 

Translate »