ಬೆಂಗಳೂರು,ಅ.22(ಕೆಎಂಶಿ)-ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಇಂದಿಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜತೆಗೆ ನಮ್ಮ ಶಾಸಕರೂ ಸರಿ ಯಾಗಿ ನಡೆದುಕೊಳ್ಳುತ್ತಿಲ್ಲ ಎಂದಿ ದ್ದಾರೆ. ಇಂದು ನಡೆದ ಸಂಪುಟ ಸಭೆಯ ನಂತರ ಸಚಿವರ ಜೊತೆ ಅನೌಪಚಾರಿಕವಾಗಿ ವಿಧಾನಸಭೆ ಉಪ ಚುನಾವಣೆ, ಪ್ರಸಕ್ತ ರಾಜಕಾರಣ, ಕೋವಿಡ್-19 ಸಾಂಕ್ರಾ ಮಿಕ ರೋಗ ಹಾಗೂ ಅತಿವೃಷ್ಟಿಯ ಬಗ್ಗೆ ಪ್ರಸ್ತಾಪ ಮಾಡಿದ ಮುಖ್ಯಮಂತ್ರಿಯವರು ಬೆರಳಣಿಕೆಯಷ್ಟು ಸಚಿವರನ್ನು ಹೊರತುಪಡಿಸಿದರೆ, ಉಳಿದವರು ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ ಎಂದು ನೇರ ವಾಗಿ ಕಿಡಿಕಾರಿದ್ದಾರೆ. ಕೊರೊನಾ ಸೋಂಕಿನಿಂದ ಜನ ಸಂಕಷ್ಟಕ್ಕೆ ಸಿಲುಕಿ ಭಯಭೀತರಾಗಿದ್ದಾರೆ. ಮತ್ತೊಂ ದೆಡೆ ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಬೇಕಾದ ಸಂದರ್ಭ ದಲ್ಲಿ ಕೆಲವು ಸಚಿವರು ಅಸಡ್ಡೆ ತೋರಿದ್ದಾರೆ. ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ, ಸೋಂಕು ಈ ದೊಡ್ಡ ಪ್ರಮಾಣದಲ್ಲಿ ಹಬ್ಬುತ್ತಿರಲಿಲ್ಲ. ಇಷ್ಟು ಸಾವು ನೋವು ಗಳು ಆಗುತ್ತಿರಲಿಲ್ಲ. ನಾನೊಬ್ಬನೇ ಎಲ್ಲವನ್ನೂ ಮಾಡಲು ಆದಿತೆ. ನಿಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವ ಹಿಸಲು ಸಾಧ್ಯವಾಗದಿದ್ದರೆ, ನೀವು ಅಧಿಕಾರದಲ್ಲಿ ಮುಂದು ವರೆಯಬೇಕೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಸೋಂಕಿನ ವಿಷಯದಲ್ಲಿ ಕೆಲವರಂತೂ ಒಬ್ಬರ ಕಾಲು ಒಬ್ಬರು ಎಳೆಯುವ ಕೆಲಸ ನಡೆದಿತ್ತು. ಮೊದಲು ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಮುಂದೆ ರಾಜಕಾರಣ. ಆದರೆ ನೀವು ನಿಮ್ಮನ್ನು ನೋಡಿಕೊಂಡು, ಇಡೀ ರಾಜ್ಯವನ್ನು ಮರೆತಿರಿ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೇ ಸಚಿವರ ಮುಖಕ್ಕೆ ಬಡಿದಂತೆ ಹೇಳಿದ್ದಾರೆ. ಇನ್ನೂ ಅವರ ಕ್ಷೇತ್ರಗಳಲ್ಲೇ ಶಾಸಕರು ಕೂಡ ಎಡವಿದ್ದಾರೆ ಎಂದು ನೇರವಾಗಿಯೇ ಕಿಡಿಕಾರಿದ್ದಾರೆ.
ಈಗಾಗಲೇ ಪಕ್ಷದಲ್ಲಿ ಇರಿಸು-ಮುರಿಸಾಗುವಂತಹ ಪರಿಸ್ಥಿತಿಯನ್ನು ನೋಡಿಯೂ ಸುಮ್ಮನಿದ್ದರೆ ಹೇಗೆ? ಉತ್ತಮ ಆಡಳಿತ ನೀಡಲು ನೀವೆಲ್ಲರೂ ಕೈಜೋಡಿಸ ಬೇಕಲ್ಲವೆ? ಎಂದು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಕೆಲ ಹಿರಿಯ ಸಚಿವರು ಸಿಎಂಗೆ ಸಮಾ ಧಾನ ಹೇಳಿದ್ದು, ತಮ್ಮೊಂದಿಗೆ ಎಲ್ಲರೂ ಇದ್ದು ಒಟ್ಟಾಗಿ ಉಪಚುನಾವಣೆ ಎದುರಿಸೋಣ. ಸರ್ಕಾರಕ್ಕೆ ಯಾವುದೇ ಮುಜುಗರವಾಗದಂತೆ ನೋಡಿಕೊಳ್ಳು ತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಯವರು ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುವಂತೆ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ವಿವಾದವನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಸಾಧ್ಯವಾದಷ್ಟೂ ವಿವಾದಗಳಿಂದ ದೂರ ಉಳಿಯಿರಿ. ಮತದಾರರ ಮನವೊಲಿಕೆಗೆ ಪ್ರಯತ್ನ ಮಾಡಿ ಎಂಬ ಕಿವಿಮಾತು ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚುನಾವಣಾ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೀಡು ಬಿಡಬೇಕು, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನರ ನಾಡಿಮಿಡಿತ ಅರಿವಾಗಲಿದೆ ಎಂದು ಬಿಂಬಿಸಲಾಗುತ್ತಿದೆ. ಇದನ್ನು ಅರಿತು ವಿವಾದಗಳನ್ನು ಮೃದುವಾಗಿ ಬಗೆಹರಿಸಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಿದ್ದೇವೆ. ಅದೇ ರೀತಿ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲೂ ಕಾರ್ಯ ನಿರ್ವಹಿಸಬೇಕು.
ಶಿರಾ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಒಳ್ಳೆಯ ಒಲವು ಕಂಡುಬರುತ್ತಿದೆ. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ಗೆಲ್ಲಲೇಬೇಕು. ಇದು ನಿಮ್ಮ ಆದ್ಯತೆಯಾಗಬೇಕೆಂದು ಸಚಿವರಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣಾ ಪ್ರಚಾರದಿಂದ ನೆರೆ ಹಾವಳಿ ಪರಿಹಾರ ಕಾರ್ಯಕ್ಕೆ ಹಿನ್ನಡೆಯಾಗಬಾರದು. ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಬೇಕು. ಅತಿವೃಷ್ಟಿ ಹಾಗೂ ಪ್ರವಾಹಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ಈಗಾಗಲೇ ಪ್ರಧಾನಿಯವರು ತಮ್ಮೊಂದಿಗೆ ಮಾತನಾಡಿ, ಸೂಕ್ತ ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಪರಿಹಾರ ಕಾರ್ಯ ನಿರ್ವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡಬೇಕು. ಸ್ಯಾನಿಟೈಸರ್, ಮಾಸ್ಕ್‍ಗಳನ್ನು ಒದಗಿಸಿ ಸಾಮಾಜಿಕ ಅಂತರ ಕಾಪಾಡುವ ಮೂಲಕ ಮುನ್ನೆಚ್ಚರಿಕೆ ವಹಿಸಲು ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.