ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ  ಪರೀಕ್ಷೆ ತರಬೇತಿ ನೀಡಲು ಚಿಂತನೆ
ಮೈಸೂರು

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲು ಚಿಂತನೆ

April 20, 2021

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್
ಮೈಸೂರು, ಏ.19- ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ತರಬೇತಿ ನೀಡುವ ಚಿಂತನೆ ಇದೆ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.

ಮೈಸೂರಿನ ಕುವೆಂಪುನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ `ಅಕ್ಕ ಐಎಎಸ್ ಅಕಾಡೆಮಿ’ಯನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಹಿಂದೆ ಯಾವುದೇ ತರಬೇತಿ ಅಕಾಡೆಮಿಗಳಿರ ಲಿಲ್ಲ. ಹಾಗಾಗಿ ನಾವೆಲ್ಲಾ ಕಾಲೇಜು ಶಿಕ್ಷಣದ ಮೂಲಕವೇ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನೆಲೆಗೆ ಬರಬೇಕಾಯಿತು. ಆದರೆ ಪ್ರಸ್ತುತ ಪರಿಸ್ಥಿತಿಯೇ ಬೇರೆ. ಉತ್ತಮ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಸಂಸ್ಥೆಗಳು ಸಾಕಷ್ಟಿವೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಲ್ಲೂ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಚಿಂತನೆಯಿದೆ. ಈ ನಿಟ್ಟಿನಲ್ಲಿ ಅಕ್ಕ ಅಕಾಡೆಮಿ ಸಹಯೋಗದೊಂದಿಗೆ ಕೆರಿಯರ್ ಹಬ್ ಆಯೋಜಿಸಿ, ತರಬೇತಿ ನೀಡಲಾಗುವುದು ಎಂದು ಹೇಳಿದರು.

ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ಶಿಸ್ತು ಹಾಗೂ ಕಠಿಣ ಪರಿಶ್ರಮದ ಜತೆಗೆ ನಿರಂತರ ಪ್ರಯತ್ನವಿದ್ದರೆ ಯಾವ ಸ್ಪರ್ಧೆಯಲ್ಲಾದರೂ ಗೆಲುವು ಸಾಧಿಸಬಹುದು. ನಾವು ವಿದ್ಯಾರ್ಥಿಗಳಾಗಿದ್ದಾಗ ಈಗಿನಂತೆ ಸೌಕರ್ಯ, ಅವಕಾಶಗಳಿರಲಿಲ್ಲ. ಆದರೆ ಪ್ರಸ್ತುತ ಯುವಜನರಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಂಸ್ಥೆಗಳಿವೆ. ಮಹತ್ವದ ಉದ್ದೇಶದೊಂದಿಗೆ ಆರಂಭವಾಗಿ ರುವ ಅಕ್ಕ ಅಕಾಡೆಮಿ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಶುಭ ಕೋರಿದರು.

ರಾಜ್ಯ ಲೆಕ್ಕಪತ್ರ ಇಲಾಖೆ ಜಂಟಿ ನಿರ್ದೇಶಕ ಮಹದೇವನಾಯಕ, ಅಕ್ಕ ಐ.ಎ.ಎಸ್. ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಡಾ.ಪ್ರೇಮಕುಮಾರ್, ಸೋಸಲೆ ಗಂಗಾಧರ್, ಸೋಸಲೆ ಸಿದ್ದರಾಜು, ಅಕಾಡೆಮಿಯ ಸಂದೀಪ್ ಎಸ್.ಗಾವಡ್ಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »