ಮೈಸೂರು, ಆ.13(ಪಿಎಂ)- ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಕಿಡಿಕಾರಿದರು.
ಮೈಸೂರಿನ ಶ್ರೀರಾಂಪುರದಲ್ಲಿ ಗುರುವಾರ ಬೆಮೆಲ್ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡಿ, ತಮ್ಮದೇ ಪಕ್ಷದ ಶಾಸಕರ ಸಂಬಂಧಿಕ ನನ್ನು ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಇದು ಕೀಳುಮಟ್ಟದ ರಾಜಕಾರಣ. ಕೃತ್ಯ ಮಾಡಿದವರು ಯಾರೇ ಆಗಿರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಖಂಡಿಸಬೇಕು ಎಂದರು.
ರಾಜ್ಯದಲ್ಲಿ ಇಂತಹ ಗಲಭೆ ಮರುಕಳಿಸದಂತೆ ದುಷ್ಕರ್ಮಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನೇರವಾಗಿ ಒತ್ತಾಯಿಸಬೇಕಿತ್ತು. ಆದರೆ ಅವರು ಹಾಗೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ತಮ್ಮದೇ ಪಕ್ಷದ ಶಾಸಕರನ್ನು ರಕ್ಷಣೆ ಮಾಡುವ ಕಳಕಳಿ ಇಲ್ಲ. ಇನ್ನು ಜನಸಾಮಾನ್ಯ ರನ್ನು ರಕ್ಷಣೆ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನವರು ದಲಿತರ ಬಗ್ಗೆ ದೊಡ್ಡ ದೊಡ್ಡ ಮಾತನಾಡುತ್ತಾರೆ. ದಲಿತ ಸಮುದಾಯದ ಶಾಸಕರ ಮನೆ ಮೇಲೆ ದಾಳಿ ಮಾಡಲಾಗಿದ್ದರೂ ಸುಮ್ಮನಿದ್ದಾರೆ. ಎರಡು ಪೊಲೀಸ್ ಠಾಣೆಗಳ ಮೇಲೆಯೂ ದಾಂಧಲೆ ನಡೆಸಲಾಗಿದೆ. ಇಂಥ ಸಂದರ್ಭ ಕೀಳು ಮಟ್ಟದ ರಾಜಕಾರಣ ಮಾಡಬಾರದು ಎಂದು ರಾಮದಾಸ್ ವಾಗ್ದಾಳಿ ನಡೆಸಿದರು.