ಕಾಂಗ್ರೆಸ್‍ನ ಡಾ.ಡಿ.ತಿಮ್ಮಯ್ಯ ಜೆಡಿಎಸ್‍ನ ಸಿ.ಎನ್.ಮಂಜೇಗೌಡ ಜಯಭೇರಿ
ಮೈಸೂರು

ಕಾಂಗ್ರೆಸ್‍ನ ಡಾ.ಡಿ.ತಿಮ್ಮಯ್ಯ ಜೆಡಿಎಸ್‍ನ ಸಿ.ಎನ್.ಮಂಜೇಗೌಡ ಜಯಭೇರಿ

December 15, 2021

ಮೈಸೂರು, ಡಿ. 14(ಆರ್‍ಕೆ)-ಮೈಸೂರು ಮತ್ತು ಚಾಮ ರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ದ್ವಿಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಡಾ.ಡಿ.ತಿಮ್ಮಯ್ಯ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಜೆಡಿಎಸ್‍ನ ಸಿ.ಎನ್. ಮಂಜೇಗೌಡ ಅವರು ಎರಡನೇ ಪ್ರಾಶಸ್ತ್ಯ ಮತಗಳಲ್ಲೂ ನಿಗದಿತ ಗುರಿ ತಲುಪಲು ಸಾಧ್ಯ ವಾಗದೇ ಎಲಿಮಿನೇಷನ್ ಸುತ್ತಿನಲ್ಲಿ ರೋಚಕ ಗೆಲುವು ಕಂಡಿದ್ದಾರೆ.

ಮೈಸೂರಿನ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಇಂದು ನಡೆದ ಮತ ಎಣಿಕೆಯಲ್ಲಿ ಡಾ. ತಿಮ್ಮಯ್ಯ ಅವರು 2,865 ಮೊದಲ ಪ್ರಾಶಸ್ತ್ಯ ಮತಗಳನ್ನು ಗಳಿಸಿ ಗೆಲುವು ಸಾಧಿಸಿದರೆ, ಬಿಜೆಪಿಯ ಆರ್. ರಘು ಕೌಟಿಲ್ಯ ಅವರು 1919 ಮತಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದರು. ಆದರೆ, ಸಿ.ಎನ್. ಮಂಜೇಗೌಡರು 1780 ಮತಗಳ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಎರಡನೇ ಅಭ್ಯರ್ಥಿಯಾಗಿ ನಿಗದಿತ 2195ರ ಗುರಿಯನ್ನು ಯಾರೂ ಮುಟ್ಟದ ಕಾರಣ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಡೆದು, ಅದರಲ್ಲೂ ಕೂಡ ನಿಗದಿತ ಗುರಿಯನ್ನು ಯಾರೂ ತಲುಪಲಿಲ್ಲ. ಆದರೆ ಎಲಿಮಿನೇಷನ್ ಸುತ್ತಿನಲ್ಲಿ ರಘು ಅವರನ್ನು ಹಿಂದಿಕ್ಕಿ ಮಂಜೇಗೌಡರು ಅಚ್ಚರಿಯ ಗೆಲುವು ಸಾಧಿಸಿದರು. ಉಳಿದಂತೆ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್-3, ಪಕ್ಷೇತರ ಅಭ್ಯರ್ಥಿಗಳಾದ ಗುರುಲಿಂಗಯ್ಯ-3, ಕೆ.ಸಿ.ಬಸವರಾಜಸ್ವಾಮಿ-6 ಹಾಗೂ ಆರ್.ಮಂಜುನಾಥ್ 11 ಮತಗಳನ್ನು ಪಡೆದುಕೊಂಡರು. ಅಗತ್ಯವಿದ್ದ 2195 ಕೋಟಾ ದಾಟಿದ ಡಾ. ತಿಮ್ಮಯ್ಯ, ಸಮೀಪ ಪ್ರತಿಸ್ಪರ್ಧಿ ರಘು ಕೌಟಿಲ್ಯ ವಿರುದ್ಧ 946 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಎಣಿಕಾ ಕೇಂದ್ರದ 14 ಟೇಬಲ್‍ಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗುರಿ ತಲುಪಲು ಬೇಕಿದ್ದ ಅಗತ್ಯ ಮತಗಳೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ನಿರಾಯಾಸವಾಗಿ ಜಯಶೀಲರಾದರು. ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿದರೆ, ಅದೇ ವೇಳೆ ಎರಡನೇ ಪ್ರಾಶಸ್ತ್ಯದ ಮತವನ್ನು ಜಾ.ದಳ ಅಭ್ಯರ್ಥಿಗೆ ನೀಡಿದ್ದರು. ಅದೇ ರೀತಿ ಬಿಜೆಪಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿದವರ ಪೈಕಿ ಕೆಲವರು ಜಾ.ದಳದ ಅಭ್ಯರ್ಥಿಗೇ ಎರಡನೆ ಪ್ರಾಶಸ್ತ್ಯದ ಮತ ನೀಡಿದ್ದರು. ಇದು ಸಿ.ಎನ್. ಮಂಜೇಗೌಡರ ಜಯಕ್ಕೆ ಸಹಕಾರಿಯಾಯಿತು.

ಜಾ.ದಳಕ್ಕೆ ರೋಚಕ ಜಯ: ಜಾತ್ಯತೀತ ಜನತಾ ದಳದ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಅವರು ಎಲಿಮಿನೇಷನ್ ಸುತ್ತಿನಲ್ಲಿ ರೋಚಕ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರಿಗೆ ಜಯ ದೊರೆಯಲಿದೆ ಎನ್ನುವ ವಾತಾವರಣ ಇತ್ತಾದರೂ, ದ್ವಿತೀಯ ಪ್ರಾಶಸ್ತ್ಯದ ಮತಗಳು ಮಂಜೇಗೌಡರ ಪಾಲಿಗೆ ವರವಾಗಿ ಪರಿಗಣಿಸಿದ್ದರಿಂದ ಅಂತಿಮವಾಗಿ ಫಲಿತಾಂಶದ ಚಿತ್ರಣವೇ ಬದಲಾಯಿತು. ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ರಘು ಕೌಟಿಲ್ಯ ಅವರಿಗಿಂತ ಸಿ.ಎನ್. ಮಂಜೇಗೌಡರು 139 ಮತಗಳಿಂದ ಹಿಂದಿದ್ದರು. ಹಾಗಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಹೊಂದಿದ್ದರೆ, ಜಾ.ದಳದ ಅಭ್ಯರ್ಥಿ ತಮಗೆ ದ್ವಿತೀಯ ಪ್ರಾಶಸ್ತ್ಯದ ಮತಗಳಲ್ಲಿ ಜಯ ಗಳಿಸುತ್ತೇನೆಂಬ ಬಲವಾದ ನಂಬಿಕೆ ಹೊಂದಿದ್ದರು. ಕಾಂಗ್ರೆಸ್‍ಗೆ ಮತ ನೀಡಿದವರು ಬಿಜೆಪಿಗೆ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ನೀಡಿದ್ದಾರೆಂಬು ದರಲ್ಲಿ ನಂಬಿಕೆ ಹೊಂದಿದ್ದ ಆರ್. ರಘು ಅವರಿಗೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ವೇಳೆ ಆಘಾತ ಕಾದಿತ್ತು. ರಘು ಅವರು ತಮ್ಮ ನಿಗದಿತ ಕೋಟಾ ತಲುಪದಿದ್ದರಿಂದ ಮಂಜೇಗೌಡರವರು ಗೆಲುವಿನ ಸನಿಹಕ್ಕೆ ಬಂದರು. ಇದರಿಂದಾಗಿ ಫಲಿತಾಂಶ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. ಅಂತಿಮವಾಗಿ ಅಭ್ಯರ್ಥಿಗಳ ಎಲಿಮಿನೇಷನ್ ಹಂತ ತಲುಪಿದಾಗ ಮಂಜೇಗೌಡರು ಅಚ್ಚರಿಯ ಗೆಲುವು ಸಾಧಿಸಿದರು.

ಕೋಟಾ ನಿಗದಿ: ಮೊದಲ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಕೋಟಾ 2195 ಮತಕ್ಕೆ ನಿಂತಿತ್ತು. ಇದರಲ್ಲಿ 2865 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ. ತಿಮ್ಮಯ್ಯ ಗೆಲುವು ಸಾಧಿಸಿದರು. ಉಳಿದಂತೆ ಬಿಜೆಪಿ ಅಭ್ಯರ್ಥಿ 1919, ಜಾ.ದಳದ ಅಭ್ಯರ್ಥಿ ಸಿ.ಎನ್. ಮಂಜೇಗೌಡ 1780 ಮತಗಳನ್ನು ಪಡೆದಿದ್ದರಿಂದ, ಈ ಇಬ್ಬರಲ್ಲಿ ಒಬ್ಬರು 2195 ಮತಗಳ ಕೋಟಾ ತಲುಪುವ ಅನಿವಾರ್ಯ ಉಂಟಾಯಿತು. ಹಾಗಾಗಿ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಗೆ ನಿರ್ಧರಿಸಿದ ಚುನಾವಣಾಧಿಕಾರಿಗಳು, ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳನ್ನು ಕರೆದು ಪ್ರಾಶಸ್ತ್ಯ ಮತಗಳ ಎಣಿಕಾ ಪ್ರಕ್ರಿಯೆಯನ್ನು ವಿವರಿಸಿದರು. 1 ಮತಕ್ಕೆ 3.5ರಷ್ಟು ಮೌಲ್ಯದಂತೆ 2ನೇ ಪ್ರಾಶಸ್ತ್ಯದ ಮತ ಎಣಿಕೆ ಮಾಡಲು ನಿರ್ಧರಿಸಿದಾಗ ಬಿಜೆಪಿ ಅಭ್ಯರ್ಥಿಗೆ 966 ಮತಗಳು, ಜಾ.ದಳದ ಅಭ್ಯರ್ಥಿಗೆ 1452 ಮತಗಳ ಕೋಟಾ ನಿಗದಿಯಾಯಿತು. ಅದರಂತೆ ಚುನಾವಣಾಧಿಕಾರಿ ಡಾ. ಬಗಾದಿ ಗೌತಮ್ ಅವರೇ ಖುದ್ದು 2ನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲು ಮುಂದಾದರು. ಡಾ. ತಿಮ್ಮಯ್ಯ ಅವರಿಗೆ ದೊರೆತಿದ್ದ 2ನೇ ಪ್ರಾಶಸ್ತ್ಯದ ಮತಗಳಲ್ಲಿ ಕೋಟಾ ತಲುಪದ ಕಾರಣ ಪಕ್ಷೇತರ ಅಭ್ಯರ್ಥಿ ಆರ್. ಮಂಜುನಾಥ್ ಮತಗಳನ್ನು ಎಣಿಕೆ ಮಾಡಿ, ಅವರ ಎಲಿಮಿನೇಟ್ ಮಾಡಲಾಯಿತು. ಅದೇ ವೇಳೆ ಕೆ.ಸಿ. ಬಸವರಾಜಸ್ವಾಮಿ ಅವರ ಮತಗಳನ್ನು ಎಣಿಸಿ ಎಲಿಮಿನೇಟ್ ಮಾಡಿದಾಗ ಆರ್. ರಘು ಅವರಿಗೆ 52 ಮತಗಳು ಹಾಗೂ ಸಿ.ಎನ್. ಮಂಜೇಗೌಡರಿಗೆ ಕೇವಲ 6 ಮತಗಳು ಬೇಕಾಗಿತ್ತು. ನಂತರ ಗುರುಲಿಂಗಯ್ಯ ಮತ ಎಣಿಕೆಗೆ ಮುಂದಾಗುತ್ತಿದ್ದಂತೆ ಆಕ್ಷೇಪಣೆ ಸಲ್ಲಿಸಿದ ಆರ್. ರಘು, ಮರು ಎಣಿಕೆ ಮಾಡಬೇಕೆಂದು ಮನವಿ ಮಾಡಿದರು. ಆದರೆ, ಈ ವೇಳೆ ಚುನಾವಣಾಧಿ ಕಾರಿಗಳು ತಾಂತ್ರಿಕ ಕಾರಣಗಳನ್ನು ಹೊರತುಪಡಿಸಿ, ಈ ಹಂತದಲ್ಲಿ ಮರು ಎಣಿಕೆ ಮಾಡಲು ಸಾಧ್ಯವಿಲ್ಲ. ಅಲ್ಲದೇ ಇಡೀ ಮತ ಎಣಿಕೆ ಪ್ರಕ್ರಿಯೆಯು ಅಭ್ಯರ್ಥಿಗಳು ಹಾಗೂ ಅವರ ಏಜೆಂಟರ ಸಮ್ಮುಖದಲ್ಲೇ ನಡೆದಿರುವುದರಿಂದ ಮರು ಎಣಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿ ಅವರ ಮನವಿಯನ್ನು ತಿರಸ್ಕರಿಸಿ, ಲಿಖಿತ ಹಿಂಬರಹ ನೀಡಿದರು. ಅದರಿಂದ ನಿರಾಶರಾದ ರಘು ಕೌಟಿಲ್ಯರವರು ಮತ ಎಣಿಕಾ ಕೇಂದ್ರದಿಂದ ಹೊರ ನಡೆಯುತ್ತಿದ್ದಂತೆಯೇ ಗುರುಲಿಂಗಯ್ಯ ಅವರ ಮತಗಳ ಎಣಿಕೆ ಮುಂದುವರಿಸಿದಾಗ ಅಂತಿಮವಾಗಿ ನಿಗದಿತ ಕೋಟಾ ಮುಟ್ಟಿದ ಜಾ.ದಳದ ಅಭ್ಯರ್ಥಿ ಸಿ.ಎನ್. ಮಂಜೇಗೌಡರಿಗೆ ಗೆಲುವು ಲಭಿಸಿತು.
ಅದರಂತೆ ಎಲಿಮಿನೇಷನ್ ಪ್ರಕ್ರಿಯೆ ಮುಗಿದ ನಂತರ ಮಂಜೇಗೌಡರ ಮತಗಳ ಮೌಲ್ಯ 2,19,455 ಹಾಗೂ ರಘು ಕೌಟಿಲ್ಯ ಅವರ ಮತಗಳ ಮೌಲ್ಯ 2,14,425 ಆದ ಕಾರಣ ಸಹಜವಾಗಿ ರಘು ಅವರ ಮತಗಳ ಬ್ಯಾಲೆಟ್ ಪೇಪರ್‍ನಲ್ಲಿ ಮಂಜೇಗೌಡರಿಗೆ ಲಭಿಸಿರುವ ದ್ವಿತೀಯ ಪ್ರಾಶಸ್ತ್ಯದ ಮತಗಳು ಲೆಕ್ಕಕ್ಕೆ ಬರುತ್ತವೆ ಹಾಗಾಗಿ ಮಂಜೇಗೌಡರು ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಂತಿಮವಾಗಿ ರಾತ್ರಿ ಸುಮಾರು 11 ಗಂಟೆ ವೇಳೆಗೆ ಫಲಿತಾಂಶ ಪ್ರಕಟಿಸಿದರು.

Translate »