ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಜೊತೆ ಹೊಂದಾಣಿಕೆ ಅನಿವಾರ್ಯ
ಮೈಸೂರು

ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಜೊತೆ ಹೊಂದಾಣಿಕೆ ಅನಿವಾರ್ಯ

December 21, 2020

ಈ ಸಂಬಂಧ ಶಾಸಕರೊಂದಿಗೆ ಕುಮಾರಸ್ವಾಮಿ ಚರ್ಚಿಸಿದ್ದಾರೆ
ಹುಬ್ಬಳ್ಳಿ,ಡಿ.20-ಪಕ್ಷದ ಅಸ್ತಿತ್ವದ ಕಾರಣಕ್ಕಾಗಿ ಬಿಜೆಪಿ ಜೊತೆ ಜೆಡಿಎಸ್ ಹೊಂದಾ ಣಿಕೆ ಮಾಡಿಕೊಳ್ಳುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪಕ್ಷದ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರೂ ಆದ ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಜೊತೆ ಹೊಂದಾ ಣಿಕೆ ಮಾಡಿಕೊಳ್ಳಬಹುದೇ ಹೊರತು, ಯಾವುದೇ ಕಾರಣಕ್ಕೂ ವಿಲೀನವಾಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಜೊತೆ ಹೋದರೆ ಹೇಗೆ? ಎಂದು ಕುಮಾರಸ್ವಾಮಿ ಅವರು ನನ್ನ ಜೊತೆ ಚರ್ಚೆ ಮಾಡಿ ದ್ದಾರೆ. ಅದೇ ರೀತಿ ಪಕ್ಷದ ಇತರ ಶಾಸಕರೊಂದಿಗೂ ಚರ್ಚಿಸಿದ್ದಾರೆ. ನಾನಂತೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಅಭಿಪ್ರಾಯವನ್ನು ತಿಳಿಸಿದ್ದೇನೆ ಎಂದರು. ಕುಮಾರಸ್ವಾಮಿ ಅವರು ನಮ್ಮ ಶಾಸಕರ ಮಧ್ಯೆ ಚರ್ಚೆನಡೆಸಿರುವುದು ನಿಜ. ಆದರೆ ಅವರು ಬಿಜೆಪಿ ಮುಖಂಡರ ಜೊತೆ ಈ ಸಂಬಂಧ ಮಾತನಾಡಿ ದ್ದಾರಾ? ಎಂಬುದು ಗೊತ್ತಿಲ್ಲ. ಈ ವಿಷಯದ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದರು. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದ ಅಳಿವು-ಉಳಿವಿನ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕಷ್ಟವಾಗುತ್ತದೆ ಎಂದು ನಮ್ಮ-ನಮ್ಮಲ್ಲಿ ಚರ್ಚೆಯಾಗಿದೆ. ಯುವ ಶಾಸಕರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹೊಂದಾಣಿಕೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ಜನತಾ ಪರಿವಾರದ ರಾಜಕಾರಣವೇ ಬೇರೆ. ರಾಮಕೃಷ್ಣ ಹೆಗ್ಡೆ, ಹೆಚ್.ಡಿ.ದೇವೇಗೌಡ, ಬೊಮ್ಮಾಯಿ ಅವರ ಕಾಲದಂತೆ ಇಂದಿನ ರಾಜಕೀಯ ಇಲ್ಲ. ಶಿರಾ ಉಪ ಚುನಾವಣೆ ಗೆಲ್ಲಲು ದೇವೇಗೌಡರು ಬಹಳಷ್ಟು ಶ್ರಮ ಹಾಕಿದ್ದರು. ಆದರೆ ಅದಕ್ಕೆ ಜನ ಮನ್ನಣೆ ದೊರೆಯಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರ್ಯಾಯ ಚಿಂತನೆ ಮಾಡಲೇಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು. ಮುಂದಿನ ಚುನಾವಣೆಗಳಲ್ಲಿ ಯಾರಿಗೂ ಬಹುಮತ ಬರುವ ಸಾಧ್ಯತೆಯೇ ಇಲ್ಲ. ಆ ಕಾರಣದಿಂದಾಗಿ ಹೊಂದಾಣಿಕೆ ಅನಿವಾರ್ಯ. ಹೀಗಾಗಿ ಹೊಂದಾಣಿಕೆಗೆ ಪೂರಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದರು.

ದೇವೇಗೌಡರು ಬಿಸಿ ತುಪ್ಪ: ಏನೇ ಮಾಡಬೇಕಾದರೂ ದೇವೇಗೌಡರ ಒಪ್ಪಿಗೆ ಅಗತ್ಯ. ಆದರೆ ಈ ಹೊಂದಾಣಿಕೆ ಬಗ್ಗೆ ಅವರ ಅನುಮತಿಯನ್ನು ಕೇಳುವುದೂ ಕಷ್ಟ, ಕೇಳದೇ ಇರುವುದೂ ಕಷ್ಟ. ನಮಗೆ ಅವರು ಬಿಸಿ ತುಪ್ಪದಂತಿದ್ದಾರೆ. ನಮ್ಮ ಶಾಸಕರ ಮಧ್ಯೆ ಚರ್ಚೆ ಮಾಡಿರುವ ವಿಷಯವನ್ನು ಕುಮಾರಸ್ವಾಮಿ ಅವರು ದೇವೇಗೌಡರ ಬಳಿ ಪ್ರಸ್ತಾಪಿಸಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಅವರು ಪ್ರಸ್ತಾಪ ಮಾಡುವುದೂ ಕಷ್ಟ. ನಮ್ಮಂತಹ ಹಿರಿಯರು ಬೇಕಾದರೆ ದೇವೇಗೌಡರ ಬಳಿ ಹೊಂದಾಣಿಕೆಗೆ ಅನುಮತಿ ಕೊಡಿ ಎಂದು ಮನವಿ ಮಾಡಬಹುದು ಎಂದು ಹೇಳಿದರು. ಒಂದಂತೂ ನಿಜ. ಬಿಜೆಪಿ ಜೊತೆ ಮೈತ್ರಿ ಆಗಬಹುದೇ ಹೊರತು, ವಿಲೀನವಂತೂ ಇಲ್ಲವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Translate »