ಮೈಸೂರು, ಏ.23(ಪಿಎಂ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಗುರುವಾರ ತುಸು ಆಶಾಭಾವ ವ್ಯಕ್ತಪಡಿಸಿದರು.
ಮೈಸೂರು ತಾಲೂಕಿನ ಜಯಪುರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಒಟ್ಟು 88 ಜನರಲ್ಲಿ 33 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದಾರೆ. ಗುಣ ಮುಖರಲ್ಲಿ ಇಬ್ಬರು ಹಿರಿಯ ನಾಗರಿಕರೂ ಇದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ರೀತಿಯ ಚಿಕಿತ್ಸೆ ಸೌಲಭ್ಯ ಕಲ್ಪಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದರು. ಜುಬಿಲಂಟ್ ಕಾರ್ಖಾನೆ ಸಂಬಂಧ ಎಲ್ಲಾ ಕಾರ್ಮಿಕರ ಪರೀಕ್ಷೆ ಪೂರ್ಣಗೊಂಡಿದೆ. ಕಳೆದ ಐದಾರು ದಿನಗಳಿಂದ ಜ್ಯುಬಿಲಂಟ್ ಕಾರ್ಖಾನೆ ಕಾರ್ಮಿಕರ ಸಂಪರ್ಕ ಇದ್ದವರು ಪಾಸಿಟಿವ್ ಆಗಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 300 ಮಂದಿ ಸೋಂಕಿನ ಶಂಕಿತರು ವಿವಿಧ ಹೋಟೆಲ್, ಲಾಡ್ಜ್‍ಗಳಲ್ಲಿ ಕ್ವಾರಂಟೈನ್‍ನಲ್ಲಿ ಇದ್ದರೆ, ದ್ವಿತೀಯ ಹಂತದ ಸಂಪರ್ಕಕ್ಕೆ ಒಳಗಾಗಿದ್ದ 300 ಮಂದಿಯನ್ನು ಅವರ ಮನೆಗಳಲ್ಲಿಯೇ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಚರ್ಚಿಸಿ ಮೈಸೂರು ಜಿಲ್ಲೆಯನ್ನು ಆದಷ್ಟೂ ಬೇಗ ಕೊರೊನಾ ಮುಕ್ತಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ. ಹಾಗಾಗಿ, ಈಗಿರುವ ಲಾಕ್‍ಡೌನ್ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಮಾಡದಿರಲು ನಿರ್ಧರಿಸಿದ್ದಾರೆ. ಕೃಷಿ ಹಾಗೂ ಅಗತ್ಯ ಸೇವಾ ಕಾರ್ಯಗಳ ಚಟುವಟಿಕೆಗೆ ಮೊದಲಿ ನಿಂದಲೂ ಅವಕಾಶವಿದ್ದು, ಅವು ಯಥಾಸ್ಥಿತಿ ಮುಂದುವರೆಯಲಿವೆ ಎಂದರು. ಕಟ್ಟಡ ನಿರ್ಮಾಣಕ್ಕೆ ಮತ್ತು ಹಾರ್ಡ್‍ವೇರ್ ಅಂಗಡಿಗಳ ವ್ಯಾಪಾರಕ್ಕೆ ಅವಕಾಶ ನೀಡಿದರೆ ಜನದಟ್ಟಣೆ ಉದ್ಭವಿಸುತ್ತದೆ ಎಂಬ ಆತಂಕವಿದೆ ಎಂದರು.
ಹಾಗಾಗಿ ಬಹಳ ತುರ್ತು ಇದ್ದರಷ್ಟೇ ಅನುಮತಿ ನೀಡಲಾಗುವುದು. ಐಟಿ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು. ತೀರಾ ಅನಿವಾರ್ಯವಿದ್ದರಷ್ಟೇ ಪಾಸ್ ತೆಗೆದುಕೊಂಡು ನಿರ್ದಿಷ್ಟ ದಿನ ಕರ್ತವ್ಯ ನಿರ್ವಹಿಸಬೇಕು. ಮೇ 3ರ ಬಳಿಕ ಸರ್ಕಾರದ ನಿರ್ದೇಶನದ ಅನುಸಾರವೇ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.
ಅದು ತನಿಖಾ ತಂಡವಲ್ಲ…: ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಸದ್ಯದ ಸ್ಥಿತಿಗತಿ ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯದ ತಂಡವೊಂದು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, ಮೈಸೂರು ಜಿಲ್ಲೆಗೆ ಆಗಮಿಸಿದ ತಂಡವು ಕೋವಿಡ್ ಆಸ್ಪತ್ರೆ, ಫೀವರ್ ಕ್ಲಿನಿಕ್ ಹಾಗೂ ಕ್ವಾರಂಟೈನ್ ಕೇಂದ್ರಗಳ ಪರಿವೀಕ್ಷಣೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಡಿಸಿ ಅಭಿರಾಮ್ ಜಿ.ಶಂಕರ್ ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಅದನ್ನು ತನಿಖಾ ತಂಡ ಎಂದು ಕರೆಯಲು ಬರುವುದಿಲ್ಲ ಎಂದು ಪ್ರತಿಕ್ರಿಯಿದರು.