ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಸಾವು ಆಸ್ಪತ್ರೆ ಸೀಲ್ ಡೌನ್, 7 ಸಿಬ್ಬಂದಿ ಕ್ವಾರಂಟೈನ್‍ಗೆ
ಮೈಸೂರು

ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಸಾವು ಆಸ್ಪತ್ರೆ ಸೀಲ್ ಡೌನ್, 7 ಸಿಬ್ಬಂದಿ ಕ್ವಾರಂಟೈನ್‍ಗೆ

May 10, 2020

ಬೆಂಗಳೂರು, ಮೇ 9-ಬೆಂಗಳೂ ರಿನ ಖಾಸಗಿ ಆಸ್ಪತ್ರೆಯೊಂದರ ಕೊರೊನಾ ಸೋಂಕಿತ ಮಹಿಳೆ ಮೃತಪಟ್ಟಿರುವುದು ತಡವಾಗಿ ವರದಿಯಾಗಿದೆ. ಮೇ 7ರಂದು ಈ ಮಹಿಳೆ ಸಾವನ್ನಪ್ಪಿದ್ದು, ಆಕೆಗೆ ಸೋಂಕು ಇತ್ತು ಎಂಬುದು ಇಂದು ಸಂಜೆ ಆರೋಗ್ಯ ಇಲಾಖೆ ಗಮನಕ್ಕೆ ಬರುತ್ತಿ ದ್ದಂತೆಯೇ ಆಕೆ ಮೃತಪಟ್ಟ ಖಾಸಗಿ ಆಸ್ಪತ್ರೆಯಲ್ಲಿ ಸೀಲ್ ಡೌನ್ ಮಾಡ ಲಾಗಿದೆ. ಹೆಣ್ಣೂರು ಬಾಣಸವಾಡಿಯ 57 ವರ್ಷದ ಮಹಿಳೆ ಹೆಚ್‍ಬಿಆರ್ ಬಡಾವಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಉಸಿರಾಟದ ಸಮಸ್ಯೆಯಿಂದಾಗಿ ಮೇ 6ರಂದು ದಾಖಲಾಗಿದ್ದಳು. ಆಕೆ ಮರು ದಿನವೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಆಸ್ಪತ್ರೆಯವರು ಆಕೆಯ ಗಂಟಲ ದ್ರವವನ್ನು ಹೈದರಾಬಾದ್‍ನ ಲ್ಯಾಬ್‍ಗೆ ಕಳುಹಿಸಿದ್ದರು. ಪರೀಕ್ಷಾ ವರದಿಯ ಪಾಸಿಟಿವ್ ಬಂದಿದ್ದು, ಹೈದರಾಬಾದ್ ಲ್ಯಾಬ್‍ನಿಂದ ಖಾಸಗಿ ಆಸ್ಪತ್ರೆಗೆ ಮತ್ತು ಆರೋಗ್ಯ ಇಲಾಖೆಗೆ ವರದಿಯನ್ನು ಕಳುಹಿಸಲಾಗಿತ್ತು. ಹೈದರಾಬಾದ್ ಲ್ಯಾಬ್‍ನ ವರದಿ ತಲುಪಿದಾಗಲೇ ಆರೋಗ್ಯ ಇಲಾಖೆಗೆ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಆಕೆಯ ಬಗ್ಗೆ ಆರೋಗ್ಯ ಇಲಾಖೆಗೆ ಖಾಸಗಿ ಆಸ್ಪತ್ರೆಯವರು ತಿಳಿಸಿರಲಿಲ್ಲ ಎನ್ನಲಾಗಿದ್ದು, ಆಕೆ ಸೋಂಕಿತೆ ಇರಬಹುದು ಎಂಬ ಅನುಮಾನದ ಮೇರೆಗೆ ಮೃತ ದೇಹವನ್ನು ವಾರಸುದಾರರಿಗೆ ನೀಡದೇ ಆಸ್ಪತ್ರೆಯಲ್ಲೇ ಇಟ್ಟಿದ್ದರು ಎಂದು ಹೇಳಲಾಗಿದೆ. ಇಂದು ಸಂಜೆ ಆರೋಗ್ಯ ಇಲಾಖೆಯು ಖಾಸಗಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಿ, ಮೃತದೇಹವನ್ನು ಸಿ.ವಿ.ರಾಮನ್ ಆಸ್ಪತ್ರೆಗೆ ರವಾನಿಸಿದೆ. ಆಸ್ಪತ್ರೆಯ 7 ಸಿಬ್ಬಂದಿಯನ್ನು ಕ್ವಾರಂಟೈನ್‍ಗೊಳಗಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬೆಂಗಳೂರು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದ್ದಾರೆ. ಆರೋಗ್ಯ ಇಲಾಖೆಯು ಗಮನಕ್ಕೆ ಬಾರದೆ ಸೋಂಕಿತ ಮಹಿಳೆಯ ಗಂಟಲ ದ್ರವವನ್ನು ಹೈದರಾಬಾದ್‍ಗೆ ಕೊಂಡೊಯ್ದ ವ್ಯಕ್ತಿ ವಿರುದ್ಧ ನಾಳೆ ಎಫ್‍ಐಆರ್ ದಾಖಲಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Translate »