ಖಾದಿ ಉತ್ಸವದಲ್ಲಿ ತರಾವರಿ ವಸ್ತ್ರ ವೈಭವ
ಮೈಸೂರು

ಖಾದಿ ಉತ್ಸವದಲ್ಲಿ ತರಾವರಿ ವಸ್ತ್ರ ವೈಭವ

November 18, 2018

ಮೈಸೂರು:  ಮೈಸೂರಿನ ಜೆಕೆ ಮೈದಾನದಲ್ಲಿ ಹಮ್ಮಿಕೊಂಡಿ ರುವ ಖಾದಿ ಉತ್ಸವದಲ್ಲಿ ಬಗೆಬಗೆಯ ಖಾದಿ ಉಡುಪು ಸೇರಿದಂತೆ ತರಾವರಿ ಖಾದಿ ಬಟ್ಟೆಗಳ ಖರೀದಿ ಜೋರಾಗಿದ್ದು, ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಏರ್ಪಡಿಸಿರುವ ಈ ಖಾದಿ ಉತ್ಸವದಲ್ಲಿ ಖಾದಿಯ ವೈವಿಧ್ಯಮಯ ಲೋಕವೇ ಅನಾವರಣ ಗೊಂಡಿದೆ. ನೇಯ್ದ ಶುದ್ಧ ಖಾದಿಯ ಜುಬ್ಬ-ಪೈಜಾಮ, ಚೂಡಿದಾರ್‍ಗಳು, ದುಪ್ಪಟ್ಟಗಳು ವಿವಿಧ ವಿನ್ಯಾಸದಲ್ಲಿ ಇಲ್ಲಿನ ಮಳಿಗೆಗಳಲ್ಲಿ ಆಕರ್ಷಿಸುತ್ತಿವೆ. ಟವೆಲ್, ಕರವಸ್ತ್ರ, ಲುಂಗಿ, ವೇಸ್ಟ್‍ಕೋಟ್, ಶಾಲು, ಬೆಡ್‍ಶೀಟ್, ಶಾಲು, ಬ್ಯಾಗ್ ಸೇರಿದಂತೆ ಹಲವಾರು ಬಗೆಯ ವಸ್ತ್ರಗಳು ಖಾದಿಯಲ್ಲಿ ತಯಾರಾಗಿ ಕೈಬೀಸಿ ಕರೆಯುತ್ತಿವೆ.

ಇಲ್ಲಿನ ಸಂಡೂರ್ ಕುಶಲ ಕಲಾ ಕೇಂದ್ರದ ಮಳಿಗೆಯಲ್ಲಿ ಮಹಿಳೆಯರ ಕುರ್ತಾಗಳು ಬಗೆಬಗೆಯ ಬಣ್ಣ ಹಾಗೂ ವಿನ್ಯಾಸದಲ್ಲಿ ಕಣ್ಮನ ಸೆಳೆಯುತ್ತಿವೆ. ಈ ಮಳಿಗೆಯಲ್ಲಿ ವಿಶೇಷ ಖಾದಿ ವಸ್ತ್ರವಾದ ಈ ಕುರ್ತಾವೊಂದಕ್ಕೆ 975 ರೂ. ಬೆಲೆ ನಿಗದಿ ಮಾಡಲಾಗಿದೆ. ಚಿಕ್ಕಬಳ್ಳಾಪುರದ ಖಾದಿ ಗ್ರಾಮೋದ್ಯೋಗ ಅಸೋಸಿಯೇಷನ್‍ನ ಮಳಿಗೆ ಯಲ್ಲಿ ಮಕ್ಕಳ ಜುಬ್ಬ-ಪೈಜಾಮ ವಿಶೇಷವೆ ನಿಸುತ್ತವೆ. 350 ರೂ.ಗಳಿಂದ ಇಲ್ಲಿನ ಜುಬ್ಬ ಪೈಜಾಮದ ಬೆಲೆ ಆರಂಭವಾಗುತ್ತದೆ.

ಪುರುಷರ ಖಾದಿ ಒಳಉಡುಪುಗಳು: ಇಲ್ಲಿನ ಧಾರವಾಡ ತಾಲೂಕು ಗರಗ ಕ್ಷತ್ರಿಯ ಸೇವಾ ಸಂಘದ ಮಳಿಗೆಯಲ್ಲಿ ಪುರುಷರ ಖಾದಿ ಒಳ ಉಡುಪುಗಳು ಇವೆ. ಖಾದಿಯಲ್ಲಿ ನೇಯ್ದ ಚಡ್ಡಿ ಹಾಗೂ ಬನಿಯನ್‍ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಮಳಿಗೆಯ ವ್ಯವಸ್ಥಾಪಕ ರಾಜೀವ್ ಕಳಶಗಾರ. ಚಡ್ಡಿ ಹಾಗೂ ಬನಿಯನ್ ಎರಡಕ್ಕೂ ಒಂದಕ್ಕೆ 160 ರೂ. ದರ ನಿಗದಿ ಮಾಡಲಾಗಿದೆ.

ರಾಷ್ಟ್ರಧ್ವಜ: ಇದರೊಂದಿಗೆ ಧಾರವಾಡ ತಾಲೂಕು ಗರಗ ಕ್ಷತ್ರಿಯ ಸೇವಾ ಸಂಘವು ರಾಷ್ಟ್ರಧ್ವಜ ತಯಾರಿಕೆಯಲ್ಲೂ ಪ್ರಸಿದ್ಧಿ ಪಡೆದಿದೆ. ಸರ್ಕಾರದ ನಿಯಮ ಗಳನ್ನು ಅನುಸರಿಸಿ ನೇಯ್ದಿರುವ ರಾಷ್ಟ್ರಧ್ವಜ ಗಳು ಇವರ ಮಳಿಗೆಯಲ್ಲಿ ದೊರೆಯುತ್ತಿವೆ. 790 ರೂ.ಗಳಿಂದ 1,995 ರೂ.ವರೆಗೆ ವಿವಿಧ ಅಳತೆಯ ರಾಷ್ಟ್ರಧ್ವಜಗಳು ಇಲ್ಲಿ ಲಭ್ಯವಿವೆ.

ಜೇಡಿಮಣ್ಣಿನ ದೀಪಗಳು ಹಾಗೂ ಕಲಾಕೃತಿಗಳು ಖಾದಿ ಉತ್ಸವದ ಮತ್ತೊಂದು ಆಕರ್ಷಣೆ. ಈ ಎಲ್ಲಾ ಕಲಾಕೃತಿಗಳ ನಡುವೆ ಇನ್ನೊಂದು ಕುತೂಹಲ ಕೆರಳಿಸಲಿದೆ ಮ್ಯಾಜಿಕ್ ದೀಪ. ಮೈಸೂರಿನ ಜೆಕೆ ಮೈದಾನ ದಲ್ಲಿ ಏರ್ಪಡಿಸಿರುವ ಖಾದಿ ಉತ್ಸವದ ಮುಖ್ಯ ದ್ವಾರದ ಹೊರಾವರಣದಲ್ಲಿ ಈ ದೀಪಗಳು ಹಾಗೂ ಕಲಾಕೃತಿಗಳು ಥಟ್ಟನೆ ಗಮನ ಸೆಳೆಯುವಷ್ಟು ಅಂದ-ಚೆಂದದಿಂದ ಕೂಡಿವೆ. ರಾಮನಗರ ತಾಲೂಕಿನ ಚನ್ನಮಾನಹಳ್ಳಿ ಗ್ರಾಮದ ಕಲಾವತಿ ಅವರು ಇದರ ವ್ಯವಸ್ಥಾಪಕರು. ಇವರು ಸ್ತ್ರೀಶಕ್ತಿ ಸಂಘದಿಂದ ಸಾಲ ಪಡೆದು ಈ ಕಾಯಕದಲ್ಲಿ ತೊಡಗಿದ್ದಾರೆ. ಇಂತಹ ಉತ್ಸವವೇ ನಮಗೆ ಮಾರಾಟಕ್ಕೆ ವೇದಿಕೆ. ಇದು ಬಿಟ್ಟರೆ ಬಾಡಿಗೆ ನೀಡಿ ವ್ಯಾಪಾರ ನಡೆಸಲಾಗುತ್ತಿಲ್ಲ ಎನ್ನುತ್ತಾರೆ.

ಈ ಎಲ್ಲಾ ಪದಾರ್ಥಗಳನ್ನು ಕುಶಲಕರ್ಮಿ ಕಾಲೇಜ್ ತಯಾರು ಮಾಡಿದರೆ, ಕಲಾವತಿ ಮತ್ತವರ ಸಂಗಡಿಗರ ಗುಂಪು ಅವುಗಳಿಗೆ ಬಣ್ಣದ ಸ್ಪರ್ಶದೊಂದಿಗೆ ಅನೇಕ ಅಲಂಕಾರದ ಮುದ್ರೆ ಒತ್ತುತ್ತಾರೆ. ಇಂತಹ ಕಾಯಕದಲ್ಲಿ ಮುನ್ನಡೆದಿರುವ ಇವರು ಖಾದಿ ಉತ್ಸವದಲ್ಲಿ ಕಲಾಕೃತಿಗಳು, ದೀಪಗಳು ಸೇರಿದಂತೆ ನಾನಾ ಬಗೆಯ ಜೇಡಿಮಣ್ಣಿನ ಪದಾರ್ಥಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಕಾಫಿ ಲೋಟ, ಬ್ಯಾಸ್ಕೆಟ್, ಹೂದಾನಿ ಸೇರಿದಂತೆ ಹತ್ತು ಹಲವು ವಸ್ತುಗಳು ಜೇಡಿಮಣ್ಣಿನಲ್ಲಿ ಸಿದ್ಧಗೊಂಡಿವೆ. ಕಾಫಿ ಲೋಟವೊಂದಕ್ಕೆ 30 ರೂ. ಇದ್ದು, ವಿವಿಧ ವಿನ್ಯಾಸದ ದೀಪಗಳು 20 ರೂ. ನಿಂದ 300 ರೂ.ವರೆಗೆ ಇಲ್ಲಿ ದೊರೆಯಲಿವೆ. ಹೂದಾನಿಗೆ 1 ಸಾವಿರ ರೂ. ಇದ್ದು, ಮ್ಯಾಜಿಕ್ ದೀಪ ವಿಭಿನ್ನ ಹಾಗೂ ವಿಶೇಷ ಎನ್ನಿಸುತ್ತದೆ. `ಈ ದೀಪಕ್ಕೆ ತಲೆ ಕೆಳಗಾಗಿ ತಿರುಗಿಸಿ ಎಣ್ಣೆ ತುಂಬಿಸಬೇಕು. ಸಂಪೂರ್ಣ ಎಣ್ಣೆ ಭರ್ತಿ ಮಾಡಿದರೆ 12 ಗಂಟೆಗಳ ಕಾಲ ಬೆಳಗಲಿದೆ ಎನ್ನುವ ಕಲಾವತಿ, ಯಾವ ತಂತ್ರಗಾರಿಕೆ ಬಳಸಿ ತಯಾರು ಮಾಡಲಾಗಿದೆ ಎಂಬ ಗುಟ್ಟು ಮಾತ್ರ ಬಿಟ್ಟು ಕೊಡಲಿಲ್ಲ.

Translate »