ಮೈಸೂರು, ಮೇ 14 (ಆರ್‍ಕೆ)- ನಕಲಿ ಸಂಘಟನೆಯ ನಾಮಫಲಕ ಹಾಗೂ ಲಾಂಛನ ಅಳವಡಿಸಿಕೊಂಡು ಓಡಾಡುತ್ತಿದ್ದ ಕಾರನ್ನು ವಶಪಡಿಸಿಕೊಂಡಿರುವ ಉದಯ ಗಿರಿ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಮೈಸೂರಿನ ಅಜೀಜ್ ಸೇಠ್ ನಗರ ನಿವಾಸಿ ಜುಲ್ಫಿಕರ್ ಅಲಿಯಾಸ್ ಜುಲ್ಲಾ (45) ಬಂಧಿತ ಆರೋಪಿಯಾಗಿದ್ದು, ಮಹೀಂದ್ರಾ ಎಕ್ಸ್‍ಯುವಿ (ಕೆಎ 23, ಎನ್ 1314) ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಷನಲ್ ಆಂಟಿ ಕರಪ್ಸನ್ ಟೈಗರ್ ಸಂಸ್ಥಾನ ರಾಜ್ಯಾಧ್ಯಕ್ಷ ಎಂಬ ನಾಮಫಲಕ ಮತ್ತು ತ್ರಿಭುಜಾಕಾರದ ಹಸಿರು ಲಾಂಛನ ಹಾಗೂ ಹುಲಿ ಚಿತ್ರವನ್ನು ಕಾರಿನ ಮುಂಭಾಗ ಅಳವಡಿಸಿಕೊಂಡು ಓಡಾಡುತ್ತಿದ್ದ ಈತನನ್ನು ಇಂದು ಬೆಳಿಗ್ಗೆ ಮೈಸೂರಿನ ಉದಯಗಿರಿ ಮುಖ್ಯ ರಸ್ತೆಯಲ್ಲಿ ಪೊಲೀಸರು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಯನ್ನು ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಜುಲ್ಫಿಕರ್ ವಿರುದ್ಧ ದಿ ಎಂಬ್ಲಮ್ ಅಂಡ್ ನೇಮ್ಸ್ ಆಕ್ಟ್ 1950 ಸೆಕ್ಷನ್ 3, 5 ರೀತ್ಯಾ ಪ್ರಕರಣ ದಾಖಲಿಸಿಕೊಂಡಿ ರುವ ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಪೂಣಚ್ಚ ತನಿಖೆ ಮುಂದುವರೆಸಿದ್ದಾರೆ.