ಕೋರ್ಟ್‍ನಲ್ಲಿ ದಾವೆ: ನೆನೆಗುದಿಗೆ ಬಿದ್ದ ಇರ್ವಿನ್ ರಸ್ತೆ ಅಭಿವೃದ್ಧಿ
ಮೈಸೂರು

ಕೋರ್ಟ್‍ನಲ್ಲಿ ದಾವೆ: ನೆನೆಗುದಿಗೆ ಬಿದ್ದ ಇರ್ವಿನ್ ರಸ್ತೆ ಅಭಿವೃದ್ಧಿ

December 3, 2021

ಮೈಸೂರು, ಡಿ.2(ಆರ್‍ಕೆ)- ಎರಡು ಕಟ್ಟಡಗಳಿಗೆ ಸಂಬಂಧಿಸಿದಂತೆ ನ್ಯಾಯಾ ಲಯದಲ್ಲಿ ದಾವೆ ಹೂಡಿರುವುದರಿಂದ ಮೈಸೂರಿನ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಇರ್ವಿನ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಬಿ.ಎನ್.ರಸ್ತೆಯ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ಕಮಾನ್ ಗೇಟ್ ನಿಂದ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್‍ವರೆಗಿನ 850 ಮೀಟರ್ ಇರ್ವಿನ್ ರಸ್ತೆಯನ್ನು ಹಾಲಿ 30 ಅಡಿಯಿಂದ 60 ಅಡಿವರೆಗೆ ಅಗಲೀಕರಿಸಿ, ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಮೈಸೂರು ನಗರಪಾಲಿಕೆ ಕಳೆದ 4 ವರ್ಷಗಳ ಹಿಂದೆ ಕೈಗೆತ್ತಿಕೊಂಡಿತ್ತು. ಈ ರಸ್ತೆಯ ಇಕ್ಕೆಲಗಳಲ್ಲಿ 7ರಿಂದ 10 ಅಡಿ ಜಾಗವನ್ನು ವಶಪಡಿಸಿಕೊಂಡು, ಅಲ್ಲಿದ್ದ 83 ಕಟ್ಟಡಗಳ ಮಾಲೀಕರಿಗೆ 27 ಕೋಟಿ ರೂ. ಪರಿಹಾರ ನೀಡಿ, ಪರಿಹಾರ ಕಲ್ಪಿಸಿದ ಪ್ರಮಾಣ ದಷ್ಟು ಕಟ್ಟಡಗಳ ಕೆಡವಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಲಾಯಿತು. ಆದರೆ ವಕ್ಫ್ ಮಂಡಳಿಗೆ ಸೇರಿದ ಧಾರ್ಮಿಕ ಕೇಂದ್ರ ಹಾಗೂ ಖಾಸಗಿ ಕಟ್ಟಡಗಳ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದ ರಿಂದ ಲಷ್ಕರ್ ಪೊಲೀಸ್ ಠಾಣೆ ಸರ್ಕಲ್ ನಿಂದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸರ್ಕಲ್ ನಡುವೆ ಕೇವಲ 60 ಮೀಟರ್ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಉಳಿದಂತೆ ಸರ್ಕಾರಿ ಆಯುರ್ವೇದ ಕಾಲೇಜಿನಿಂದ ರೈಲ್ವೆ ನಿಲ್ದಾಣ ಬಳಿಯ ಬಾಬು ಜಗಜೀವನ್‍ರಾಂ ಸರ್ಕಲ್‍ವರೆಗೆ ಇರ್ವಿನ್ ರಸ್ತೆ ಅಗಲೀಕರಣ ಮಾಡಿ, ಅಭಿವೃದ್ಧಿಪಡಿಸಲಾಗಿದೆ. ಲಷ್ಕರ್ ಪೊಲೀಸ್ ಠಾಣೆ ಸರ್ಕಲ್‍ನಿಂದ ಸರ್ಕಾರಿ ಆಯು ರ್ವೇದ ಆಸ್ಪತ್ರೆ ಸರ್ಕಲ್‍ವರೆಗಿನ ರಸ್ತೆಯನ್ನು 60 ಮೀಟರ್ ಹೊರತುಪಡಿಸಿ ಡಾಂಬರೀ ಕರಣ ಕಾಂಕ್ರಿಟ್ ಬಾಕ್ಸ್ ಡ್ರೈನ್ ಹಾಗೂ ಎರಡೂ ಕಡೆ ಫುಟ್‍ಪಾತ್ ನಿರ್ಮಿಸಲಾಗಿದೆ. ನ್ಯಾಯಾಲಯದಲ್ಲಿರುವ ದಾವೆ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಇತ್ಯರ್ಥಪಡಿಸಿದರೆ ಇರ್ವಿನ್ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಇದೀಗ ಈ ರಸ್ತೆಯು ರೈಲ್ವೆ ನಿಲ್ದಾಣ ಸರ್ಕಲ್‍ನಿಂದ ಗ್ರಾಮಾಂತರ ಬಸ್ ನಿಲ್ದಾಣದ ಸರ್ಕಲ್‍ವರೆಗೆ ಬಹುತೇಕ ಅಗಲೀಕರಣ ಕಾಮಗಾರಿ ಪೂರ್ಣಗೊಂಡು ಅಭಿವೃದ್ಧಿಪಡಿ ಸಿದ್ದರೂ ಒಂದೆಡೆ ರಸ್ತೆ ಕಿರಿದಾಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಈ ಕುರಿತು ‘ಮೈಸೂರು ಮಿತ್ರ’ ಜೊತೆ ಮಾತನಾಡಿದ ನಗರಪಾಲಿಕೆ ವಲಯ ಕಚೇರಿ-6ರ ಅಭಿವೃದ್ಧಿ ಅಧಿಕಾರಿ ಮಂಜು ನಾಥ್, ಬಾಕಿ ಇರುವ ಎರಡು ಕಟ್ಟಡಗಳ ಅಗತ್ಯವಿರುವ ಜಾಗವನ್ನು ವಶಪಡಿಸಿಕೊಂಡು, ತೆರವುಗೊಳಿಸುವ ಸಂಬಂಧ ನ್ಯಾಯಾಲ ಯದಲ್ಲಿ ದಾವೆ ಇರುವುದರಿಂದ ಇರ್ವಿನ್ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದರು.

Translate »