`ಸ್ಪಿರುಲಿನಾ ಚಿಕ್ಕಿ’ ಕೋವಿಡ್ ಚಿಕಿತ್ಸೆಗಲ್ಲ: ಸಿಎಫ್‍ಟಿಆರ್‍ಐ ಸ್ಪಷ್ಟನೆ ಮಕ್ಕಳ ನ್ಯೂನಪೋಷಣೆ ಸುಧಾರಿಸಲು ಅಭಿವೃದ್ಧಿಪಡಿಸಿದ್ದು
ಮೈಸೂರು

`ಸ್ಪಿರುಲಿನಾ ಚಿಕ್ಕಿ’ ಕೋವಿಡ್ ಚಿಕಿತ್ಸೆಗಲ್ಲ: ಸಿಎಫ್‍ಟಿಆರ್‍ಐ ಸ್ಪಷ್ಟನೆ ಮಕ್ಕಳ ನ್ಯೂನಪೋಷಣೆ ಸುಧಾರಿಸಲು ಅಭಿವೃದ್ಧಿಪಡಿಸಿದ್ದು

May 11, 2020

ಮೈಸೂರು, ಮೇ 10(ಆರ್‍ಕೆಬಿ)- ಸಿಎಫ್‍ಟಿಆರ್‍ಐ ಮೈಸೂರು ಅಭಿವೃದ್ಧಿ ಪಡಿಸಿರುವ ಸ್ಪಿರುಲಿನಾ ಚಿಕ್ಕಿಗಳು ಮಕ್ಕಳಲ್ಲಿ ಕಾಣುವ ನ್ಯೂನಪೋಷಣೆ ಯನ್ನು ಸುಧಾರಿಸಲೆಂದು ಅಭಿವೃದ್ಧಿ ಪಡಿಸಿದ್ದೇವೆ. ಇದನ್ನು ಕೋವಿಡ್ ರೋಗಕ್ಕೆ ಚಿಕಿತ್ಸೆಗಾಗಿ ಅಭಿವೃದ್ಧಿ ಪಡಿ ಸಿದ್ದಲ್ಲ ಎಂದು ಕೇಂದ್ರೀಯ ಆಹಾರ ತಂತ್ರ ಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಪ್ರಕಟಣೆ ತಿಳಿಸಿದೆ.

ಈ ಸ್ಪಿರುಲಿನಾ ಚಿಕ್ಕಿಗಳಾಗಲಿ ಅಥವಾ ಇದೇ ರೀತಿಯಲ್ಲಿ ಪರಿಹಾರ ಆಹಾರ ವಾಗಿ ಸರಬರಾಜು ಮಾಡಿದ ಇತರೆ ಸಿಎಫ್‍ಟಿಆರ್‍ಐ ಉತ್ಪನ್ನಗಳಾಗಲಿ ಯಾವುದೇ ರೋಗ ಇಲ್ಲವೇ ಖಾಯಿಲೆಗೆ ಚಿಕಿತ್ಸೆ ಎಂದು ಎಲ್ಲಿಯೂ ಹೇಳಿಲ್ಲ. ಸ್ಪಿರುಲಿನಾ ಚಿಕ್ಕಿಗಳು ದೇಹದ ರೋಗ ಪ್ರತಿರೋಧವನ್ನು ಹೆಚ್ಚಿಸಲು ಬಳಸಬಹುದಾದ ಪೂರಕ ಆಹಾರಗಳು ಅಷ್ಟೆ. ಅಲ್ಲದೆ, ಸ್ಪಿರುಲಿನಾ ಚಿಕ್ಕಿಯನ್ನು ಮಕ್ಕಳಲ್ಲಿ ಕಾಣುವ ನ್ಯೂನಪೋಷಣೆಯನ್ನು ಸುಧಾರಿಸಲೆಂದು ಅಭಿವೃದ್ಧಿಪಡಿಸಿದ್ದೇ ಹೊರತು ಕೋವಿಡ್-19 ಸೋಂಕಿಗೆ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿಲ್ಲ. ಪರಿಹಾರಾತ್ಮಕವಾಗಿ ಪೂರೈಸಿದ ಆಹಾರವೆಲ್ಲವೂ ರೋಗ ಪ್ರತಿರೋಧ ಬೆಳೆಸಲು ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ ಅಷ್ಟೆ ಎಂದು ಸಿಎಫ್‍ಟಿಆರ್‍ಐ ಸ್ಪಷ್ಟನೆ ನೀಡಿದೆ. ಮೈಸೂರಿನಲ್ಲಿ ಸೋಂಕಿನಲ್ಲಿ ಆದ ಸುಧಾರಣೆಗೆ ಮೈಸೂರು ಜಿಲ್ಲಾಡಳಿತ, ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳ ಅವಿರತ ಪರಿಶ್ರಮವೇ ಕಾರಣ ಎಂದು ಸಿಎಫ್‍ಟಿಆರ್‍ಐ ತಿಳಿಸಿದೆ.

Translate »