ಕೋವಿಡ್ ಪ್ರಭಾವ; `ಪಲ್ಸ್ ಆಕ್ಸಿಮೀಟರ್’ಗೆ ದಿಢೀರ್ ಬೇಡಿಕೆ
ಮೈಸೂರು

ಕೋವಿಡ್ ಪ್ರಭಾವ; `ಪಲ್ಸ್ ಆಕ್ಸಿಮೀಟರ್’ಗೆ ದಿಢೀರ್ ಬೇಡಿಕೆ

April 24, 2021

ಮೈಸೂರು,ಏ.23(ಎಸ್‍ಪಿಎನ್)-ಕೋವಿಡ್-19 ಸೋಂಕಿತರ ದೇಹದಲ್ಲಿ ಆಮ್ಲಜನಕ ಪ್ರಮಾಣವನ್ನು ತೋರಿಸುವ `ಪÀಲ್ಸ್ ಆಕ್ಸಿಮೀಟರ್’ ಉಪಕರಣಕ್ಕೆ ದಿಢೀರ್ ಬೇಡಿಕೆ ಹೆಚ್ಚಾಗಿದೆ. ದೇಶಾದ್ಯಂತ ಕೊರೊನಾ 2ನೇ ಅಲೆ ತೀವ್ರಗತಿ ಯಲ್ಲಿ ಏರಿಕೆಯಾಗುತ್ತಿರುವ ಸಂದರ್ಭ ಸೋಂಕಿತರು, ಅವರ ಮನೆಯವರು ತಮ್ಮ ದೇಹದಲ್ಲಿನ ಆಮ್ಲಜನಕ ಪ್ರಮಾಣ ಪರಿಶೀಲಿಸಿಕೊಳ್ಳಲು `ಪಲ್ಸ್ ಆಕ್ಸಿಮೀಟರ್’ ಖರೀದಿಸುತ್ತಿದ್ದಾರೆ.

ಕಳೆದ 15 ದಿನಗಳಿಂದ ಮೈಸೂರಿನಲ್ಲಿ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರ ಸಲಹೆಯಂತೆ ಹೋಂ ಐಸೊಲೇಷನ್ (ಮನೆಯಲ್ಲೇ ಏಕಾಂತ ವಾಸ) ಆಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕಿತರ ದೇಹದಲ್ಲಿ ರಾತ್ರಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಲು `ಪಲ್ಸ್ ಆಕ್ಸಿಮೀಟರ್’ ಇದ್ದರೆ ಒಳ್ಳೆಯದೆಂದು ವೈದ್ಯರು ಹೇಳಿದ್ದರಿಂದ ಖರೀದಿಸುವವರ ಸಂಖ್ಯೆ ಹೆಚ್ಚಿದೆ ಎಂದು ಮೈಸೂರಿನ ಖಾಸಗಿ ಮೆಡಿಕಲ್ ಸ್ಟೋರ್ ಮಾಲೀಕರೊಬ್ಬರು `ಮೈಸೂರು ಮಿತ್ರ’ನಿಗೆ ಶುಕ್ರವಾರ ತಿಳಿಸಿದರು. ಕಂಪನಿ, ಕಲ್ಯಾಣಮಂಟಪ, ಮಾಲ್‍ಗಳು ಹಾಗೂ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಕೊರೊನಾ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸರ್ಕಾರದ ಸೂಚನೆ ಪಾಲಿಸಲೂ ಈ ಸ್ಥಳಗಳಲ್ಲಿ ಪÀಲ್ಸ್ ಆಕ್ಸಿಮೀಟರ್ ಬಳಕೆಯಾಗುತ್ತಿದೆ. ಅದರ ಖರೀದಿ ದಿಢೀರ್ ಹೆಚ್ಚಲು ಈ ಅಂಶವೂ ಕಾರಣವಿರ ಬಹುದು ಎಂದರು. ಕೊರೊನಾ ಆರಂಭದ ದಿನಗಳಲ್ಲಿ ಈ ಸಾಧನಕ್ಕೆ ಇಷ್ಟೊಂದು ಬೇಡಿಕೆ ಇರಲಿಲ್ಲ. ಇದೀಗ 100 ಸೋಂಕಿತರಲ್ಲಿ 20 ಮಂದಿಯಾದರೂ ಈ ಉಪ ಕರಣದ ಬಗ್ಗೆ ವಿಚಾರಿಸುತ್ತಾರೆ, ಖರೀದಿಸುತ್ತಾರೆ ಎಂದು ಮಾಹಿತಿ ನೀಡಿದರು.

 

Translate »