ಸ್ವತಂತ್ರವಾಗಿ ಸೆಣಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದ್ಯದ ನಿರ್ಧಾರ
ಮೈಸೂರು

ಸ್ವತಂತ್ರವಾಗಿ ಸೆಣಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದ್ಯದ ನಿರ್ಧಾರ

September 6, 2022

ಮೈಸೂರು, ಸೆ.5(ಆರ್‍ಕೆ, ಎಸ್‍ಬಿಡಿ)- ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ನಾಳೆ(ಸೆ.6) ಚುನಾವಣೆ ನಡೆಯಲಿದ್ದು, ಸದ್ಯ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಅಂತಿಮ ಕ್ಷಣದಲ್ಲಿ ನಿಲುವು ಬದಲಾವಣೆ ತಳ್ಳಿ ಹಾಕುವಂತಿಲ್ಲ.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾ ಯಣ್, ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಭಾನುವಾರ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಪೊ ರೇಟರ್‍ಗಳ ಸಭೆಯಲ್ಲಿ ಸ್ವತಂತ್ರ ಸ್ಪರ್ಧೆಗೆ ನಿರ್ಧ ರಿಸಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯನವರ ಸಮ್ಮತಿಯೂ ಇದೆ ಎನ್ನ ಲಾಗಿದೆ. ಹಾಗೆಯೇ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಪೊರೇಟರ್‍ಗಳ ಸಭೆ ನಡೆದಿದ್ದು, ಮುಖಂಡರು ಹಾಗೂ ಕಾರ್ಪೊ ರೇಟರ್‍ಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮಾತಿನಂತೆ ಮೈತ್ರಿ ಮುಂದುವರಿಕೆ ಸಂಬಂಧ ಬಿಜೆಪಿಯಿಂದ ಯಾವುದೇ ಸಂದೇಶ ಬಾರದ ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ವತಂತ್ರವಾಗಿ ಸ್ಪರ್ಧೆಗಿಳಿ ಯುವ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆಯಬೇಕಿತ್ತಾ ದರೂ ಅವರು ಅರಸೀಕೆರೆಗೆ ತೆರಳಿದ್ದರಿಂದ ನಾಳೆ(ಸೆ.6) ಬೆಳಗ್ಗೆ 7.30ಕ್ಕೆ ಪಕ್ಷದ ಕಚೇರಿ ಯಲ್ಲಿ ಸಭೆ ನಡೆಸಲಿದ್ದಾರೆ. ಸದ್ಯಕ್ಕೆ ಚುನಾವಣೆ ಯಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆಗೆ ನಾಯಕರು ಸೂಚನೆ ನೀಡಿದ್ದು, ಅದಕ್ಕೆ ಬದ್ಧವಾಗಿರ ಬೇಕೆಂದು ಈಗಾಗಲೇ ಕಾರ್ಪೊರೇಟರ್‍ಗಳಿಗೆ ಮಾಹಿತಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ. ಸದ್ಯದ ನಿರ್ಧಾರದಂತೆ ಎಲ್ಲಾ ಪಕ್ಷ ಗಳೂ ಸ್ವತಂತ್ರವಾಗಿ ಸ್ಪರ್ಧೆಗಿಳಿದರೆ ಕಾಂಗ್ರೆಸ್ ನಿಂದ ಶಾಂತಕುಮಾರಿ, ಬಿಜೆಪಿಯಿಂದ ಬಿ.ವಿ. ಮಂಜುನಾಥ್ ಹಾಗೂ ಜೆಡಿಎಸ್‍ನಿಂದ ಕೆ.ವಿ. ಶ್ರೀಧರ್ ಮೇಯರ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.

ಕಣದಲ್ಲಿ ಏನಾದರೂ ಆಗಬಹುದು: ಜೆಡಿಎಸ್ ವಿರುದ್ಧ ಕಿಡಿಕಾರುತ್ತಿರುವ ಕಾಂಗ್ರೆಸ್ ಈ ಬಾರಿ ಮೈತ್ರಿಗೆ ಜೋತುಬೀಳದೆ ಸ್ವತಂತ್ರವಾಗಿ ಸ್ಪರ್ಧಿಸುವ ದೃಢ ನಿರ್ಧಾರಕ್ಕೆ ಬಂದಿದೆ. ಅವಕಾಶ ಸಿಕ್ಕರೆ ಆಡಳಿತ ನಡೆಸುವುದು ಇಲ್ಲವೇ ಪ್ರತಿಪಕ್ಷದಲ್ಲಿ ಕೂರುವ ಮೂಲಕ ಬದ್ಧತೆ ಕಾಯ್ದುಕೊಳ್ಳುವ ನಿಲುವು ಹೊಂದಿದೆ. ಈ ನಡುವೆ ಬಿಎಸ್‍ಪಿ ಸದಸ್ಯೆ ಪಲ್ಲವಿ ಬೇಗಂ ಹಾಗೂ ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿರುವ ಮತ್ತೋರ್ವ ಸದಸ್ಯನ ಬೆಂಬಲ ಪಡೆಯುವ ನಿಟ್ಟಿನಲ್ಲೂ ಅವಿರತ ಪ್ರಯತ್ನ ನಡೆಸಿದೆ. ಈವರೆಗೆ ಬಿಜೆಪಿಯಿಂದ ಯಾವುದೇ ಸಂದೇಶ ಬಾರದಿದ್ದರೂ ಜೆಡಿಎಸ್ ಪಾಳಯದಲ್ಲಿ ಮಾತ್ರ ವಿಶ್ವಾಸ ಅಚಲವಾಗಿದೆ. ಅಂತಿಮ ಕ್ಷಣದಲ್ಲಾದರೂ ಬಿಜೆಪಿ ಬೆಂಬಲಿಸಲಿದೆ ಎನ್ನುವ ನಂಬಿಕೆಯೊಂದಿಗೆ ಜೆಡಿಎಸ್ ಕಾದು ಕುಳಿತಿದೆ. ಒಂದು ವೇಳೆ ಮಾತಿನಂತೆ ನಡೆಯದೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ತಕ್ಕ ಉತ್ತರ ನೀಡುವ ನಿಟ್ಟಿನಲ್ಲೂ ತಂತ್ರ ರೂಪಿಸಿಕೊಂಡಿದೆ. ಸಂಖ್ಯಾಬಲದಲ್ಲಿ ಕಾಂಗ್ರೆಸ್‍ಗಿಂತ ಒಂದು ಮತ ಹೆಚ್ಚಿರುವ ಬಿಜೆಪಿಯೂ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಇಷ್ಟೆಲ್ಲಾ ಬೆಳವಣಿಗೆಯಾದರೂ ಅಂತಿಮ ಕ್ಷಣದಲ್ಲಿ ಬಿಜೆಪಿ ನಿಲುವು ಬದಲಿಸಿ ಜೆಡಿಎಸ್‍ಗೆ ಬೆಂಬಲ ನೀಡಬಹುದು. ತಪ್ಪಿದರೆ ಬಿಜೆಪಿಗೆ ಹೊಡೆತ ನೀಡಲು ಜೆಡಿಎಸ್, ಕಾಂಗ್ರೆಸ್‍ಗೆ ಬೆಂಬಲಿಸಬಹುದು. ಇಲ್ಲವೇ ಪಕ್ಷೇತರರ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು. ಒಟ್ಟಾರೆ ಚುನಾವಣಾ ಅಖಾಡದಲ್ಲಿ ಏನು ಬೇಕಾದರೂ ಆಗಬಹುದು.

ಸದ್ಯದ ಬಲಾಬಲ: ಅಧಿಕೃತವಾಗಿ ಮೈಸೂರು ಮಹಾನಗರ ಪಾಲಿಕೆಯಲ್ಲಿನ 65 ವಾರ್ಡ್‍ಗಳ ಪೈಕಿ ಬಿಜೆಪಿಯ 22, ಕಾಂಗ್ರೆಸ್‍ನ 20, ಜೆಡಿಎಸ್‍ನಿಂದ 17, ಬಿಎಸ್‍ಪಿಯ 1 ಹಾಗೂ ಐವರು ಸ್ವತಂತ್ರವಾಗಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಜೊತೆಗೆ ಬಿಜೆಪಿಗೆ ಓರ್ವ ಸದಸ್ಯ, ಇಬ್ಬರು ಶಾಸಕರು ಹಾಗೂ ಓರ್ವ ವಿಧಾನ ಪರಿಷತ್ ಸದಸ್ಯ ಸೇರಿ ಒಟ್ಟು 26 ಮಂದಿ ಮೇಯರ್, ಉಪಮೇಯರ್ ಚುನಾವಣೆಗೆ ಮತ ಚಲಾಯಿಸುವ ಅವಕಾಶ ಹೊಂದಿದ್ದಾರೆ. ಕಾಂಗ್ರೆಸ್‍ನಿಂದ ಓರ್ವ ಶಾಸಕ, ಮೂವರು ವಿಧಾನಪರಿಷತ್ ಸದಸ್ಯರು ಸೇರಿ 24 ಮಂದಿ, ಜೆಡಿಎಸ್‍ನಿಂದ ಓರ್ವ ಶಾಸಕ, ಇಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 20 ಮಂದಿ ಮತದಾನ ಮಾಡಲು ಹಕ್ಕುಳ್ಳವರಾಗಿದ್ದಾರೆ. ಆದರೆ ಬಿಎಸ್‍ಪಿ ಹಾಗೂ ಸ್ವತಂತ್ರವಾಗಿ ಆಯ್ಕೆಯಾಗಿರುವ 6 ಮಂದಿ ನಗರ ಪಾಲಿಕೆ ಸದಸ್ಯರು, ಆಯಾಯ ವಿದ್ಯಮಾನಗಳಿಂದ ಪಕ್ಷಗಳಲ್ಲಿ ಗುರ್ತಿಸಿಕೊಂಡಿರುವುದರಿಂದ ಪ್ರಸ್ತುತ ಬಿಜೆಪಿ 27, ಕಾಂಗ್ರೆಸ್ 26 ಹಾಗೂ ಜೆಡಿಎಸ್ 23 ಸದಸ್ಯ ಬಲ ಹೊಂದಿದೆ. ಇಂದು ರಾತ್ರಿ ನಡೆಯಲಿರುವ ರಾಜಕೀಯ ಅಂತಿಮ ವಿದ್ಯಮಾನಗಳಿಂದ ಅವರು ಯಾರಿಗೆ ಬೆಂಬಲಿಸುವರೆಂಬುದು ನಿರ್ಧಾರವಾಗಲಿದೆ. ಪಾಲಿಕೆ ಅಧಿಕಾರ ಹಿಡಿಯಲು ಯಾವುದೇ ಪಕ್ಷಕ್ಕೂ ಸಂಖ್ಯಾಬಲವಿಲ್ಲ. ಹೊಂದಾಣಿಕೆ ಮಾಡಿಕೊಂಡರಷ್ಟೇ ಎರಡು ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿಯಬಹುದಾಗಿದೆ. ಕಳೆದ ಬಾರಿ ಬಿಜೆಪಿಗೆ ಜೆಡಿಎಸ್ ಪರೋಕ್ಷ ಬೆಂಬಲ ನೀಡಿದ ಕಾರಣ ಸುನಂದಾ ಪಾಲನೇತ್ರ ಅವರು ಮೇಯರ್ ಆಗಿ ಆಯ್ಕೆಯಾಗಲು ಸಾಧ್ಯವಾಗಿತ್ತು.

Translate »