ಕೊಳ್ಳೇಗಾಲ, ಜು.13- ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಪಕ್ಷ ಮುಖಂಡರು ಪಟ್ಟಣದಲ್ಲಿ ಸೈಕಲ್ ಜಾಥಾ ನಡೆಸುವ ಮೂಲಕ ಪ್ರತಿಭಟಿಸಿದರು.
ನಗರದ ಬಸ್ ನಿಲ್ದಾಣದ ಗಣಪತಿ ದೇಗುಲದ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಗಮನ ಸೆಳೆದರು.
ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೇಂದ್ರ ಕಳೆದ 1 ತಿಂಗಳಲ್ಲಿ 24 ಬಾರಿ ತೈಲ ಬೆಲೆ ಏರಿಕೆಮಾಡಿದೆ. ಸುಮಾರು 5 ಸಾವಿರ ಕೋಟಿ ವರಮಾನ ವಿದ್ದರೂ ಸಹ ಕೇಂದ್ರ ತೈಲ ಬೆಲೆ ಇಳಿಸದೇ ಜನ ಸಾಮಾನ್ಯ ರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಜಿಲ್ಲಾ ಸಮಸ್ಯೆ ನಿವಾರಿಸುವಲ್ಲಿ ಉಸ್ತುವಾರಿ ಸಚಿವರು ಸಂಪೂರ್ಣ ವಿಫರಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿದಿದ್ದರೂ ಸಹ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಇಳಿಸದ ಪರಿಣಾಮ ದಿನ ಬಳಕೆ ವಸ್ತುಗಳ ದರವೂ ಏರಿಕೆಯಾಗುತ್ತಿದೆ. ಇದೇ ಪ್ರಧಾನಿ ಮೋದಿ ಸರ್ಕಾರ ಸಾಧನೆ ಎಂದು ಛೇಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವೀಕ್ಷಕ ಮರೀಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ರಾಜ್ಯ ಯುವ ಘಟಕ ಕಾರ್ಯ ದರ್ಶಿ ಚೇತನ್, ಬ್ಲಾಕ್ ಕಾರ್ಯದರ್ಶಿ ಬಸ್ತಿಪುರ ರವಿ, ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಬಸ್ತಿಪುರ ಶಾಂತು, ಭೀಮನಗರ ರಮೇಶ್, ಮಾಜಿ ಉಪಾಧ್ಯಕ್ಷ ಅಕ್ಮಲ್‍ಪಾಶಾ, ಸದಸ್ಯರಾದ ರಾಘವೇಂದ್ರ, ಮಂಜುನಾಥ್, ಮುಖಂಡ ರಾದ ಮಾಂಬಳ್ಳಿ ಮೋಹನ್, ಮುಸ್ತಾಕ್ ಇತರರಿದ್ದರು.
ಯಳಂದೂರು ವರದಿ: ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಜಾಥಾ ನಡೆಸಿ ಪ್ರತಿಭಟಿಸಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಸೈಕಲ್‍ಗಳ ಮೂಲಕ ಪಟ್ಟಣದ ಬಸ್ ನಿಲ್ದಾಣ, ಬಳೇಪೇಟೆ, ಕೆಕೆ ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ಕೆಲಕಾಲ ಪ್ರತಿಭಟಿಸಿ ತಹಸೀಲ್ದಾರ್‍ಗೆ ಮನವಿ ಸಲ್ಲಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಎಸ್. ಬಾಲರಾಜ್ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಮರಿಗೌಡ, ಜಿಲ್ಲಾ ವಕ್ತಾರ ದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಜಿಪಂ ಮಾಜಿ ಸದಸ್ಯರಾದ ಯೋಗೇಶ್, ಸದಾಶಿವಮೂರ್ತಿ, ಮುಖಂಡರಾದ ಕಿನಕಹಳ್ಳಿ ಪ್ರಭುಪ್ರಸಾದ್, ರಂಗನಾಥ್ ಇತರರಿದ್ದರು.