ವರಹಾ ದ್ವಾರದ ಬಳಿ ಇಂದು ದಸರಾ ಗಜಪಡೆ,  ಅಶ್ವಾರೋಹಿ ದಳಕ್ಕೆ ಸಿಡಿಮದ್ದು ತಾಲೀಮು
ಮೈಸೂರು

ವರಹಾ ದ್ವಾರದ ಬಳಿ ಇಂದು ದಸರಾ ಗಜಪಡೆ, ಅಶ್ವಾರೋಹಿ ದಳಕ್ಕೆ ಸಿಡಿಮದ್ದು ತಾಲೀಮು

September 30, 2021

ಮೈಸೂರು, ಸೆ.29(ಎಂಟಿವೈ)- ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ ಗಜಪಡೆಗೆ ನಾಳೆ(ಸೆ.30) ಬೆಳಿಗ್ಗೆ 11ಕ್ಕೆ ಅರಮನೆಯ ವರಹಾ ದ್ವಾರದ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸಿಡಿಮದ್ದು ತಾಲೀಮು ನಡೆಸ ಲಾಗುತ್ತಿದೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ದಸರಾ ಮಹೋತ್ಸವದ ಅ.7ರಿಂದ ಆರಂಭ ವಾಗಲಿದ್ದು, ಅ.15ರಂದು ಜಂಬೂಸವಾರಿ ಜರುಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅರಮನೆ ಆವರಣಕ್ಕೆ ಮಾತ್ರ ಜಂಬೂ ಸವಾರಿ ಮೆರವಣಿಗೆ ಸೀಮಿತಗೊಳಿಸಲಾಗಿದೆ. ಜಂಬೂಸವಾರಿ ದಿನ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಪೊಲೀಸ್ ಬ್ಯಾಂಡ್ ವಾದನದ ತಂಡ ರಾಷ್ಟ್ರಗೀತೆ ನುಡಿಸಲಿದೆ. ಈ ಸಂದರ್ಭ ದಲ್ಲಿ 7 ಪಿರಂಗಿ ಬಳಸಿ ಮೂರು ಸುತ್ತಿನಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆ.20 ರಿಂದ ಪಿರಂಗಿ ದಳ ಸಿಬ್ಬಂದಿ ಡ್ರೈ ತಾಲೀಮು ನಡೆಸುತ್ತಿದ್ದರು. ಜಂಬೂ ಸವಾರಿ ದಿನ ಸಮೀಪಿಸುತ್ತಿರುವುದರಿಂದ ಗಜಪಡೆ ಹಾಗೂ ಅಶ್ವಪಡೆಗೆ ಸಿಡಿಮದ್ದಿನ ಶಬ್ದ ಗ್ರಹಿಸುವಿಕೆಯ ತರಬೇತಿ ನೀಡುವ ಅವಶ್ಯಕತೆ ಇದೆ. ಇದರಿಂದ ಈ ಬಾರಿ ಎಂದಿನಂತೆ 3 ಸಲ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ. ಕೋವಿಡ್ ಹಿನ್ನೆಲೆ ಯಲ್ಲಿ ಈ ಬಾರಿಯೂ ಕಳೆದ ಸಾಲಿನಂತೆ ಗಜಪಡೆಯನ್ನು ಅರಮನೆಯ ಆವರಣದಲ್ಲೇ ನಿಲ್ಲಿಸಲಾಗುತ್ತದೆ. ವರಹಾ ದ್ವಾರದ ಬಳಿ ಪ್ರವಾಸಿ ವಾಹನ ನಿಲುಗಡೆ ಸ್ಥಳದಲ್ಲಿ 7 ಪಿರಂಗಿ ಬಳಸಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗುತ್ತದೆ. ಸಂಜೆ 4 ಗಂಟೆಗೆ ಮಾವುತರು, ಕಾವಾಡಿ, ಹಾಗೂ ವಿಶೇಷ ಮಾವುತರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.

Translate »