ದಸರಾ ಗಜಪಡೆಗೆ ರಾಜಾತಿಥ್ಯ
ಮೈಸೂರು

ದಸರಾ ಗಜಪಡೆಗೆ ರಾಜಾತಿಥ್ಯ

September 24, 2021

ಮೈಸೂರು,ಸೆ.23(ಎಂಟಿವೈ)-ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಅಭಿಮನ್ಯು ನೇತೃತ್ವದ ಗಜಪಡೆ ದಿನಕ್ಕೆ 2 ಬಾರಿ ತಾಲೀಮಿನೊಂದಿಗೆ ಮಜ್ಜನದಲ್ಲಿ ಪಾಲ್ಗೊಂಡು ವಿಹರಿಸುತ್ತಿದ್ದು, ರಾಜಾತಿಥ್ಯ ನೀಡಲಾಗುತ್ತಿದೆ.

ಈ ಸಾಲಿನ ಜಂಬೂಸವಾರಿ ಅರಮನೆ ಆವ ರಣಕ್ಕೆ ಸೀಮಿತವಾಗಿರುವುದರಿಂದ ಗಜಪಡೆ ತಾಲೀಮು ಅರಮನೆ ಆವರಣದಲ್ಲಿಯೇ ನಡೆಯು ತ್ತಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ತಾಲೀಮು ನಡೆಸಲಾಗುತ್ತಿದೆ. ಅಂಬಾರಿ ಆನೆ ಅಭಿಮನ್ಯು ವಿಗೆ ಮೊದಲು ಸ್ನಾನ ಮಾಡಿಸಿದರೆ, ನಂತರ ದಲ್ಲಿ ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ, ಲಕ್ಷ್ಮೀ, ಚೈತ್ರ, ವಿಕ್ರಮ, ಕಾವೇರಿ ಆನೆಗಳಿಗೆ ಮಜ್ಜನ ಮಾಡಿಸಲಾಗುತ್ತಿದೆ. ಸ್ನಾನದ ವೇಳೆ ಆನೆಗಳ ನೀರಿನಾಟ ನೋಡು ಗರ ಕಣ್ಮನ ಸೆಳೆಯುತ್ತದೆ. ಅಂಗಾತ ಮಲಗಿ ಕಾವಾಡಿ ಮೈ ಉಜ್ಜುವಾಗ ಸಹಕರಿಸುತ್ತವೆ. ಸೊಂಡಿಲಿನಿಂದ ನೀರು ಹಿಡಿದು ಮೈಮೇಲೆ ಎರಚಿಕೊಳ್ಳುವ ದೃಶ್ಯವನ್ನು ಅರಮನೆಗೆ ಬಂದ ಪ್ರವಾಸಿಗರು ನೋಡಿ ಸಂಭ್ರಮಿಸಿದರು.

ಮೂರು ಬಾರಿ ಸ್ನಾನ: ಬಿಸಿಲು ಹೆಚ್ಚಾಗಿರುವುದರಿಂದ ಆನೆಗಳಿಗೆ ದಿನಕ್ಕೆ ಮೂರು ಬಾರಿ ಮಜ್ಜನ ಮಾಡಿಸಲಾಗುತ್ತದೆ. ಬೆಳಗ್ಗೆ 6 ಗಂಟೆಯಿಂದಲೇ ಮಾವುತರು, ಕಾವಾಡಿಗಳು ಕೆಲಸ ಶುರು ಮಾಡುತ್ತಾರೆ. ಸ್ನಾನ ಮಾಡಿಸಿ ತಾಲೀಮಿಗೆ ಹೊರಡುತ್ತಾರೆ. ಮುಗಿದ ಬಳಿಕ ಮೈ ಮೇಲೆ ನೀರು ಹಾಕುತ್ತಾರೆ. ಮತ್ತೆ ಮಧ್ಯಾಹ್ನ 12 ಗಂಟೆಗೆ ಎರಡನೇ ಬಾರಿ ಸ್ನಾನ ಮಾಡಿಸಲಾಗುತ್ತದೆ. ಸಂಜೆ ತಾಲೀಮಿಗೂ ಮುನ್ನ ಸ್ನಾನ ಮಾಡಿಸಲಾಗುತ್ತದೆ. ನಿತ್ಯ ಮೂರು ಬಾರಿ ಸ್ನಾನ ಮಾಡಿಸಲಾಗುತ್ತದೆ.

ಭೂರಿ ಭೋಜನ: ನಾಗರಹೊಳೆ, ಬಂಡೀಪುರ ಅಭಯಾರಣ್ಯಗಳ ವಿವಿಧ ಆನೆ ಶಿಬಿರಗಳಿಂದ ಆಗಮಿಸಿ ಅಂಬಾವಿಲಾಸ ಅರಮನೆ ಆವರಣದಲ್ಲಿರುವ ದಸರಾ ಆನೆ ಗಳಿಗೆ ನಿತ್ಯ ಭೂರಿ ಭೋಜನದೊಂದಿಗೆ ರಾಜಾತಿಥ್ಯ ದೊರೆಯುತ್ತಿದೆ. ನಿತ್ಯ 2 ಬಾರಿ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಅದರಲ್ಲಿ ಹೆಸರುಕಾಳು, ಉದ್ದಿನಕಾಳು, ಗೋಧಿ, ಕುಸಲಕ್ಕಿಯೊಂದಿಗೆ ಬೆಣ್ಣೆ ತರಕಾರಿ ಬೆರೆಸಿ ಕೊಡುತ್ತೇವೆ. ಜತೆಗೆ ಭತ್ತ, ಹಿಂಡಿ, ಕಾಯಿ, ಬೆಲ್ಲ, ಹಸಿಹುಲ್ಲು, ಆಲಮರದ ಸೊಪ್ಪು, ಒಣಹುಲ್ಲು ನೀಡಲಾಗುತ್ತದೆ.

ಅಂಬಾರಿ ಆನೆಗೆ ಕುಸುರೆ ಆಹಾರ: 750 ಕೆಜಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು, ಅದರ ಅಕ್ಕಪಕ್ಕದಲ್ಲಿ ಸಾಗುವ ಕುಮ್ಕಿ ಆನೆಗಳಿಗೆ ಕುಸುರೆ ಆಹಾರ ನೀಡಲಾಗುತ್ತದೆ. ಗರಿಕೆ ಹುಲ್ಲಿನಲ್ಲಿ ಗ್ಲೂಕೋಸ್ ಪೌಡರ್, ಅವಲಕ್ಕಿ, ಬೆಲ್ಲ, ತೆಂಗಿನಕಾಯಿಯನ್ನು ಕಟ್ಟಿ ಉಂಡೆ ಆಕಾರದಲ್ಲಿ ನೀಡುವುದೇ ಕುಸುರೆ ಆಹಾರ. ಈ ಆಹಾರವನ್ನು ವಿಜಯದಶಮಿ ದಿನದಂದು ನೀಡಲಾಗುತ್ತದೆ.

Translate »