ಡಾ.ಸಿ.ಎನ್.ಮಂಜುನಾಥ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದಸರಾಗೆ ಅಧಿಕೃತ ಆಹ್ವಾನ
ಮೈಸೂರು

ಡಾ.ಸಿ.ಎನ್.ಮಂಜುನಾಥ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದಸರಾಗೆ ಅಧಿಕೃತ ಆಹ್ವಾನ

October 13, 2020

ಬೆಂಗಳೂರು,ಅ.12(ಕೆಎಂಶಿ)- ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದರೂ, ಮಹೋತ್ಸವಕ್ಕೆ ಗಣ್ಯರನ್ನು ಆಹ್ವಾನಿಸು ವುದು ಅದ್ಧೂರಿಯಾಗಿಯೇ ನಡೆಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಮೇಯರ್ ತಸ್ನಿಂ ಹಾಗೂ ಸ್ವಾಗತ ಸಮಿತಿ ಸದಸ್ಯರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಸಂಪು ಟದ ಸಹೋದ್ಯೋಗಿಗಳನ್ನು ಭೇಟಿ ಮಾಡಿ, ದಸರಾ ಮಹೋತ್ಸವಕ್ಕೆ ಖುದ್ದು ಆಹ್ವಾನ ನೀಡಿದರು. ಮುಖ್ಯಮಂತ್ರಿ ಭೇಟಿಯ ನಂತರ ಮಹೋತ್ಸವ ಉದ್ಘಾಟನೆ ಮಾಡು ತ್ತಿರುವ ಹೃದಯ ತಜ್ಞ ಡಾ.ಮಂಜುನಾಥ್ ಅವರ ಕಚೇರಿ, ಜಯದೇವ ಆಸ್ಪತ್ರೆಗೆ ತೆರಳಿ ಆಹ್ವಾನ ನೀಡಿದರು.

ಎಂದಿನಂತೆ ಮೈಸೂರು ಪೇಟ ಧರಿಸಿ, ಶಾಲು ಹೊದಿಸಿ, ಹಣ್ಣು ತಾಂಬೂಲ ನೀಡಿ, ಸ್ವಾಗತ ಸಮಿತಿ ತಂಡ ಮಂಜುನಾಥ್ ಅವರಿಗೆ ಆಹ್ವಾನ ನೀಡಿತು. ಆಮಂತ್ರಣ ಪತ್ರವನ್ನು ನೀಡಿದ ಸದಸ್ಯರು ಕುಟುಂಬ ಸಮೇತ ಆಗಮಿಸಿ, ಉದ್ಘಾಟನೆಯನ್ನು ನೆರವೇರಿಸಿ ಕೊಡಬೇಕೆಂದು ಆಹ್ವಾನ ನೀಡಿದರು. ದಸರಾ ಸರಳವಾಗಿ ಆಚರಣೆಯಾದರೂ, ಗಣ್ಯರನ್ನು ಆಹ್ವಾನಿಸುವ ಸಂದರ್ಭದಲ್ಲಿ ಮಾತ್ರ ಸ್ವಾಗತ ಸಮಿತಿ ಅತ್ಯಂತ ಗೌರವದಿಂದ ಎಲ್ಲರಿಗೂ ಸಂಪ್ರದಾಯದಂತೆ ಪೇಟ, ಶಾಲು ಧರಿಸಿ, ಆಹ್ವಾನ ನೀಡಿತು.ಉದ್ಘಾಟನೆ ಆಹ್ವಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಅವರು, ಇದು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಫ್ರಂಟ್‍ಲೈನ್ ವಾರಿಯರ್ಸ್‍ಗಳಿಗೆ ಸಿಕ್ಕ ಗೌರವ. ಇದರಿಂದ ನನಗೆ ತುಂಬಾ ಸಂತಸವಾಗುತ್ತಿದೆ. ಇದು ನನ್ನೊಬ್ಬನಿಗೆ ಸಿಕ್ಕ ಗೌರವವಲ್ಲ. ಇಡೀ ವೈದ್ಯ ಸಮುದಾಯಕ್ಕೆ ಸಿಕ್ಕ ಮಾನ್ಯತೆ. ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿ ಗಳಿಗೆ ಹಾಗೂ ಸಚಿವ ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇಂತಹ ಸಂದರ್ಭಗಳಲ್ಲೂ ಕೊರೊನಾ ಬಗ್ಗೆ ತಮ್ಮ ಅನಿಸಿಕೆಯನ್ನು ಬಿಡಿಸಿಟ್ಟ ಮಂಜುನಾಥ್ ಅವರು ದಸರಾ ಸೇರಿದಂತೆ ನಾಡಿನ ಜನತೆ ಎಲ್ಲಾ ಕಡೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಮ್ಮ ಹತ್ತಿರ ನಿಖರ ಔಷಧಿಗಳು ಇಲ್ಲ. ಹೀಗಾಗಿ ಕೊರೊನಾ ಜೊತೆಯಲ್ಲೇ ನಾವೀರಬೇಕಾಗಿದ್ದರಿಂದ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಕರೆ ನೀಡಿದರು.

ದಸರಾ ಉದ್ಘಾಟನೆಗಾಗಿ ಆಯ್ಕೆ ಮಾಡಿದ್ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಆಯ್ಕೆ ಬಗ್ಗೆ ನನಗೆ ತುಂಬಾ ಸಂತಸವಾಗಿದೆ. ಪಿಯುಸಿ, ಎಂಡಿ ಸೇರಿದಂತೆ ಶಿಕ್ಷಣದ ಹಲವು ಘಟ್ಟಗಳನ್ನು ಮೈಸೂರಿನಲ್ಲಿ ಕಂಡಿದ್ದೇನೆ. ಆಗೆಲ್ಲ ದಸರಾವನ್ನು ಸಂಭ್ರಮದಿಂದ ನೋಡುತ್ತಿದ್ದೆ. ಕಳೆದ ಎರಡು ವರ್ಷದ ಹಿಂದೆಯೂ ಸ್ನೇಹಿತರೊಡನೆ ದಸರಾ ವೀಕ್ಷಣೆ ಮಾಡಿದ್ದೆ. ಆದರೆ ಈಗ ನಾನೇ ಉದ್ಘಾಟನೆಗೆ ಆಗಮಿಸುತ್ತಿರುವುದು ಖುಷಿ ತಂದಿದೆ. ಜಂಬೂ ಸವಾರಿ, ಮೈಸೂರು ಅರಮನೆ, ಚಾಮುಂಡಿ ಬೆಟ್ಟದಿಂದ ನಿಂತು, ವಿದ್ಯುತ್ ಅಲಂಕಾರ ನೋಡುವುದೇ ಒಂದು ಆನಂದ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

 

Translate »