ನಿಂತು ಹೋದ `ಮೈಕ್ ಚಂದ್ರು’ ಧ್ವನಿ
ಮೈಸೂರು

ನಿಂತು ಹೋದ `ಮೈಕ್ ಚಂದ್ರು’ ಧ್ವನಿ

September 13, 2021

ಮೈಸೂರು,ಸೆ.12(ಆರ್‍ಕೆಬಿ)-ಮೈಕ್ ಚಂದ್ರು ಎಂದೇ ಜನಪ್ರಿಯರಾಗಿದ್ದ ಮೈಸೂ ರಿನ ಪ್ರಚಾರಕ ಎನ್.ಚಂದ್ರಶೇಖರ್ (71) ಶನಿವಾರ ರಾತ್ರಿ ರಾಣೆಬೆನ್ನೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಸುಲೋಚನ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೈಸೂರಿನ ಜೆ.ಪಿ.ನಗರದ ನಿವಾಸಿ ಚಂದ್ರು ತನ್ನ ಸಹೋದರಿಯನ್ನು ನೋಡಲು ರಾಣೆಬೆನ್ನೂ ರಿಗೆ ಹೋಗಿದ್ದರು. ಅಲ್ಲಿ ಅವರಿಗೆ ಹೃದಯಾ ಘಾತ ಸಂಭವಿಸಿತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.

ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ ಅವರ ಮೈಸೂರಿನ ನಿವಾಸಕ್ಕೆ ತರಲಾಯಿತು. ಅಲ್ಲಿ ಸಾರ್ವಜನಿಕ ದರ್ಶನದ ನಂತರ ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನ ಸತ್ಯ ಹರಿಶ್ಚಂದ್ರ ಘಾಟ್‍ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ತಮ್ಮ ಕಂಚಿನ ಕಂಠದಿಂದ ಗಮನ ಸೆಳೆದಿದ್ದ ಅವರು `ಮೈಕ್ ಚಂದ್ರು’ ಎಂದೇ ಕರೆಯಲ್ಪಟ್ಟಿದ್ದರು. 2018ರಲ್ಲಿ ಮೈಸೂರು ಅಂಚೆ ವಿಭಾಗದಿಂದ ಇವರ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿತ್ತು. ತಿ.ನರಸೀಪುರದವರಾದ ಚಂದ್ರು, ಬನುಮಯ್ಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ನಿಲ್ಲಿಸಿ, ಮೈಕ್ ಘೋಷಣೆಯ ಕಡೆಗೆ ಆಕರ್ಷಿತ ರಾದರು. ಪೂರ್ಣ ಸಮಯ ಘೋಷಕರಾಗಿಯೇ ಮುಂದುವರಿದರು. ಸರ್ಕಾರಿ ನೌಕರಿಯ ಅವಕಾಶ ದೊರೆತರೂ ಕಲೆಯತ್ತಲೇ ಹೆಚ್ಚು ಆಕರ್ಷಿತರಾದರು. ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮ, ವಾದ್ಯಗೋಷ್ಟಿ ಅಥವಾ ರಾಜಕೀಯ ರ್ಯಾಲಿಗಳು ಆಯೋಜನೆಯಾದರೆ ಮೊದಲು ಮೈಕ್ ಚಂದ್ರು ಅವರಿಗೆ ಆಹ್ವಾನ ಇರುತ್ತಿತ್ತು. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಪ್ರವೀಣರಾಗಿದ್ದ ಅವರು ದಸರಾ ವಸ್ತು ಪ್ರದರ್ಶನದಲ್ಲಿ ನಿಗದಿತ ಘೋಷಕರಾಗಿದ್ದರು. ಅನೇಕ ಆರ್ಕೆಸ್ಟ್ರಾ ತಂಡಗಳಲ್ಲಿ ಸೇವೆ ಸಲ್ಲಿಸಿದ್ದರು.

ರಂಗಭೂಮಿ ಕಲಾವಿದರಾಗಿ ತಮ್ಮ ಪ್ರಯಾಣ ಆರಂಭಿಸಿದ ಅವರು, ಅಮರ ಕಲಾ ಸಂಘ, ಕಲಾಪ್ರಿಯ ಮತ್ತು ಸಮುದಾಯದಂತಹ ಹಲವಾರು ತಂಡಗಳೊಂದಿಗೆ ಕೆಲಸ ಮಾಡಿದರು. ಜನಪ್ರಿಯ ನಾಟಕ ‘ಲಂಚಾವತಾರ’ದಲ್ಲಿ ಪ್ರಸಿದ್ಧ ನಟ ದಿ.ಹಿರಣ್ಣಯ್ಯನವ ರೊಂದಿಗೆ ನಟಿಸಿದ್ದರು. ಅವರ ಚುನಾವಣಾ ಪ್ರಚಾರದ ವೈಖರಿ ಬಿಬಿಸಿಯ ಗಮನ ಸೆಳೆದಿತ್ತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಅವರು ಕೊನೆಯ ಹಂತದವರೆಗೂ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಯ ನಿರೀಕ್ಷೆಯಲ್ಲಿಯೇ ಕೊನೆಯುಸಿರೆಳೆದ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ಸರ್ಕಾರ ಈ ವರ್ಷವಾದರೂ ಅವರಿಗೆ ಮರಣೋ ತ್ತರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿÀಸುವಂತೆ ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿ ದ್ದಾರೆ. ಇವರ ನಿಧನಕ್ಕೆ ಎಂಎಲ್‍ಸಿ ಎ.ಹೆಚ್.ವಿಶ್ವನಾಥ್ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

Translate »