ಕಳತ್ಮಾಡು ಲಯನ್ಸ್ ಪ್ರೌಢಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿ ಸೂಚನೆ
ಕೊಡಗು

ಕಳತ್ಮಾಡು ಲಯನ್ಸ್ ಪ್ರೌಢಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

March 14, 2020

ಮಡಿಕೇರಿ ಮಾ.13-ಇತ್ತೀಚೆಗೆ ಗೋಣಿಕೊಪ್ಪ ಕಳತ್ಮಾಡುವಿನ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ದುಬಾರೆಗೆ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವಿರುದ್ಧ ಮಂಡಳಿಯು ಒಂದು ವಾರದೊಳಗೆ ಅಗತ್ಯ ಕ್ರಮ ಕೈಗೊಂಡು ವರದಿ ನೀಡಬೇಕು. ಇಲ್ಲದಿದ್ದಲ್ಲಿ ಆಡಳಿತ ಮಂಡಳಿ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿರುವ ಸಂಬಂಧ ವರದಿ ನೀಡಲು ಸೂಚಿಸ ಲಾಗಿತ್ತು, ಆದರೆ ಸಂಸ್ಥೆಯವರು ಸಮರ್ಪಕ ಮಾಹಿತಿ ಒದಗಿಸಿಲ್ಲ. ಆದ್ದರಿಂದ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ವಿರುದ್ಧ ನಿಯ ಮಾನುಸಾರ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಂಸ್ಥೆಯ ವಿರುದ್ಧ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಡಿಸಿ ಹೇಳಿದರು.

ಪ್ರವಾಸ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಕಡೆ ಶಿಕ್ಷಕರು ಹೆಚ್ಚಿನ ಗಮನಹರಿಸದಿರುವುದು ಎದ್ದು ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಮಾತನಾಡಿ, ಶೈಕ್ಷಣಿಕ ಪ್ರವಾಸವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸ ಬೇಕಿತ್ತು, ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಂದ ಅನುಮತಿ ಪಡೆದಿರುವುದಿಲ್ಲ. ಪೋಷಕರ ಅನುಮತಿಯನ್ನೂ ಸಹ ಪಡೆದಿಲ್ಲ ಎಂದು ತಿಳಿಸಿದರು.

ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳ ಕುಟುಂಬಕ್ಕೆ ವಿದ್ಯಾರ್ಥಿ ಕಲ್ಯಾಣ ನಿಧಿಯಿಂದ ತಲಾ ಒಂದು ಲಕ್ಷ ರೂ.ವನ್ನು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಿ.ಎಸ್.ಮಚ್ಚಾಡೋ ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿದೇಶಕರಾದ ಶಿವಲಿಂಗಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಗಾಯತ್ರಿ, ಪಾಂಡು, ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್ ಇತರರು ಇದ್ದರು.

Translate »