ರಜಾ ದಿನಗಳಂದು ಪಡಿತರ ವಿತರಿಸಲು ಡಿಸಿ ಆದೇಶ
ಚಾಮರಾಜನಗರ

ರಜಾ ದಿನಗಳಂದು ಪಡಿತರ ವಿತರಿಸಲು ಡಿಸಿ ಆದೇಶ

April 6, 2020

ಚಾಮರಾಜನಗರ, ಏ.5- ಪಡಿತರದಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳ ಆಹಾರ ಧಾನ್ಯ ಏಕಕಾಲದಲ್ಲಿ ವಿತರಿಸಬೇಕಾಗಿರುವುದರಿಂದ ಏಪ್ರಿಲ್ ಮಾಹೆಯ ಸಾರ್ವಜನಿಕ ರಜಾ ದಿನ ಏ.6 ಹಾಗೂ ನ್ಯಾಯಬೆಲೆ ಅಂಗಡಿಗಳ ವಾರದ ರಜೆ ಏ.7ರ ಮಂಗಳವಾರದಂದು ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ಕಡ್ಡಾಯವಾಗಿ ತೆರೆದು ಪಡಿತರದಾರರಿಗೆ ಪಡಿತರ ವಿತರಿಸಬೇಕು ಹಾಗೂ ಜಿಲ್ಲೆಯ ಸಗಟು ಮಳಿಗೆಗಳು ಬಾಗಿಲು ತೆರೆದು ಆಹಾರ ಧಾನ್ಯಗಳನ್ನು ವಿತರಿಸಲು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಆದೇಶಿಸಿದ್ದಾರೆ.

ನ್ಯಾಯಬೆಲೆ ಅಂಗಡಿ ಮಾಲೀಕರು ಸರ್ಕಾರವು ನೀಡಿದ ನಿರ್ದೇಶನದಂತೆ ಓಟಿಪಿ/ ಆಧಾರ್ ಅಥೆಂಟಿಕೇಷನ್/ ಬಯೋಮೆಟ್ರಿಕ್ ಮೂಲಕ ಪಡಿತರ ವಿತರಿಸಲು ಸೂಚಿಸಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಮೇಲ್ಕಂಡ ವಿಧಾನದಲ್ಲಿ ಆಹಾರ ಧಾನ್ಯ ವಿತರಿಸಲು ತೊಂದರೆ ಇದ್ದಲ್ಲಿ ಸಮಸ್ಯೆ ಕುರಿತು ವಿವರಣೆ ನೀಡಿ, ಮನವಿ ಮಾಡಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳಿಗೆ ನೋಡೆಲ್ ಅಧಿಕಾರಿ ಗಳನ್ನು ನಿಯೋಜಿಸಿ ಸದರಿಯವರ ಸಮಕ್ಷಮದಲ್ಲಿ ಆಹಾರ ಧಾನ್ಯ ವಿತರಿಸಲು ಕ್ರಮ ವಹಿಸಲಾಗುವುದು. ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿದಿನ ಕಡ್ಡಾಯ ವಾಗಿ ಬೆಳಿಗ್ಗೆ 7 ರಿಂದ ರಾತ್ರಿ 8 ಗÀಂಟೆವರೆಗೆ ಪಡಿತರದಾರರಿಗೆ ಆಹಾರ ಧಾನ್ಯ ವಿತರಿಸುವುದು. ವಿತರಣೆ ಕುರಿತು ನ್ಯಾಯಬೆಲೆ ಅಂಗಡಿ ಮಾಲೀಕರು ಉದಾಸೀನ ತೋರಿ, ಲೋಪ ಎಸಗಿದಲ್ಲಿ ಅಂತಹ ನ್ಯಾಯಬೆಲೆ ಅಂಗಡಿ ವಿರುದ್ಧ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016ರ ಪ್ರಕಾರ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶಿಸಿದ್ದಾರೆ.

Translate »