ಫ್ಲಾಟ್‍ಗಳ ಮೇಲಿನ ಮುದ್ರಾಂಕ ಶುಲ್ಕ ಇಳಿಕೆ
ಮೈಸೂರು

ಫ್ಲಾಟ್‍ಗಳ ಮೇಲಿನ ಮುದ್ರಾಂಕ ಶುಲ್ಕ ಇಳಿಕೆ

November 22, 2020

ಮೈಸೂರು, ನ.21(ಆರ್‍ಕೆ)-ಕರ್ನಾಟಕ ಸ್ಟ್ಯಾಂಪ್ ಕಾಯ್ದೆ 1957ಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರ, ಅಪಾರ್ಟ್‍ಮೆಂಟ್‍ನ 20ರಿಂದ 35 ಲಕ್ಷ ರೂ. ಬೆಲೆಯ ಫ್ಲಾಟ್‍ಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಇಳಿಸಿದೆ. ರಾಜ್ಯಪಾಲರ ಆಜ್ಞಾನುಸಾರ ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲಿ ವಸತಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರವು ನವಂಬರ್ 19ರಂದು ಕರ್ನಾಟಕ ಸ್ಟ್ಯಾಂಪ್ ಆ್ಯಕ್ಟ್‍ಗೆ ತಿದ್ದುಪಡಿ ಮಾಡಿ ಆದೇಶಿಸಿದೆ. ಅದರಿಂದ ಅಪಾರ್ಟ್‍ಮೆಂಟ್ ಅಥವಾ ಫ್ಲಾಟ್ ಖರೀದಿಸುವವರಿಗೆ ಅನುಕೂಲವಾದಂತಾಗಿದೆ.

20 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮಾರುಕಟ್ಟೆ ಬೆಲೆ ಇರುವ ಅಪಾರ್ಟ್‍ಮೆಂಟ್ ಅಥವಾ ಫ್ಲಾಟ್ ಮಾರಾಟಕ್ಕೆ ಶೇ.2 ಹಾಗೂ 20ರಿಂದ 35 ಲಕ್ಷ ರೂ. ಮಾರುಕಟ್ಟೆ ಮೌಲ್ಯದ ಫ್ಲಾಟ್ ಅಥವಾ ಅಪಾರ್ಟ್‍ಮೆಂಟ್‍ಗೆ ಶೇ.3ರಷ್ಟು ಮುದ್ರಾಂಕ ಶುಲ್ಕವನ್ನು ಸರ್ಕಾರ ನಿಗದಿಗೊಳಿಸಿದೆ.

ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಮೈಸೂರಿನ ಸಂಕಲ್ಪ ಗ್ರೂಪ್‍ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಕೆ.ಜಗದೀಶ ಬಾಬು ಅವರು, ಯಾವುದೇ ಪ್ರಸಿದ್ಧ ಬಿಲ್ಡರ್‍ಗಳು ಮೈಸೂರಲ್ಲಿ 20ರಿಂದ 35 ಲಕ್ಷ ರೂ.ಗಳ ವಸತಿ ಯೋಜನೆಗಳನ್ನು ಹೊಂದಿಲ್ಲ. ಫ್ಲಾಟ್‍ಗಳ ಮೇಲಿನ ಮುದ್ರಾಂಕ ಶುಲ್ಕ ಇಳಿಸಿರುವುದರಿಂದ ಯಾರಿಗೆ ಅನುಕೂಲ ವಾಗಿದೆ ಎಂದು ತಿಳಿಯುತ್ತಿಲ್ಲ. ಇದು ಆರ್ಥಿಕವಾಗಿ ಹಿಂದುಳಿ ದವರಿಗೆ ಅನುಕೂಲವಾಗಬಹುದು. ಆದರೆ ಮಧ್ಯಮ ಆದಾಯ ವರ್ಗದವರು ಫಲಾನುಭವಿಗಳಾಗಲಾರರು. ಈಗ ಫ್ಲಾಟ್‍ಗಳ ಬೆಲೆ ಟಯರ್-2 ಮತ್ತು ಟಯರ್-3 ಸಿಟಿಗಳಲ್ಲಿ 40 ರಿಂದ 45 ಲಕ್ಷದಿಂದ ಆರಂಭವಾಗುತ್ತವೆ ಎಂದರು.

ಬ್ರಿಗೇಡ್ ಗ್ರೂಪ್‍ನ ಮುಖ್ಯಸ್ಥೆ ಬಿ.ಆರ್.ಸುಚಿತ್ರಾ ಪ್ರತಿಕ್ರಿಯೆ ನೀಡಿ, ಬ್ರಿಗೇಡ್ ಗ್ರೂಪ್ 25ರಿಂದ 30 ಲಕ್ಷದೊಳಗಿನ ಫ್ಲಾಟ್‍ಗಳ ವಸತಿ ಯೋಜನೆಗಳನ್ನೇ ಹೊಂದಿಲ್ಲ. ಆದರೆ ಸರ್ಕಾರದ ಈ ಕ್ರಮವನ್ನು ತಾವು ಸ್ವಾಗತಿಸುತ್ತೇವೆ. ಅದರಿಂದ 35 ಲಕ್ಷ ರೂ. ಒಳಗಿನ ಫ್ಲಾಟ್ ಖರೀದಿಸುವವರಿಗೆ ಸಹಾಯವಾಗುತ್ತದೆ ಎಂದರು.

ಪ್ರಸ್ತುತ 2 ಬಿಹೆಚ್‍ಕೆ ಫ್ಲಾಟ್‍ನ ಮಾರುಕಟ್ಟೆ ಬೆಲೆ 45 ರಿಂದ 50 ಲಕ್ಷ ರೂ. ಇದೆ. ಮೈಸೂರಿನಲ್ಲಂತೂ ಭೂಮಿ ಗಗನಕ್ಕೇರಿದೆ. ನಿರ್ಮಾಣ ಖರ್ಚೂ ಸಹ ಹೆಚ್ಚಾಗಿರುವ ಕಾರಣ, ಕಡಿಮೆ ವೆಚ್ಚದಲ್ಲಿ ಅಪಾರ್ಟ್‍ಮೆಂಟ್ ನಿರ್ಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. 40 ರಿಂದ 45 ಲಕ್ಷ ರೂ.ಗಳ ಕೈಗೆಟಕುವ ಬೆಲೆಯಲ್ಲಿ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಲು ಹಾಗೂ ವಸತಿ ಯೋಜನೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಖಾಸಗಿ ಬಿಲ್ಡರ್ ಗಳನ್ನು ತೊಡಗಿಸಿಕೊಳ್ಳಬೇಕು ಎಂದು ಕ್ರೆಡಾಯ್ (ಅಖಇಆಂI) ಅಧ್ಯಕ್ಷ ಡಾ. ಜಗದೀಶ ಬಾಬು ಅವರು ಸಲಹೆ ನೀಡಿದ್ದಾರೆ.

Translate »