ಮದ್ಯ ನಿಷೇಧಕ್ಕೆ ಆಗ್ರಹ: ಮನಿ ಆರ್ಡರ್ ಚಳವಳಿ
ಮೈಸೂರು

ಮದ್ಯ ನಿಷೇಧಕ್ಕೆ ಆಗ್ರಹ: ಮನಿ ಆರ್ಡರ್ ಚಳವಳಿ

May 19, 2020

ಚಾಮರಾಜನಗರ, ಮೇ 18(ಎಸ್‍ಎಸ್)- ಮದ್ಯ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ಮದ್ಯ ನಿಷೇಧ ಆಂದೋಲನ ಸಮಿತಿ ವತಿಯಿಂದ ನಗರದಲ್ಲಿ ಮನಿ ಆರ್ಡರ್ ಚಳವಳಿ ನಡೆಸ ಲಾಯಿತು. ಆದಾಯಕ್ಕಾಗಿ ಹಾತೊರೆಯುತ್ತಿರುವ ಸರ್ಕಾರದ ಖಜಾನೆಗೆ ನಾವು ಹಣ ತುಂಬುತ್ತೇವೆ. ಆದರೆ ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಸಂದೇಶ ರವಾನಿಸುವ ಸಲುವಾಗಿ ಅಂಚೆ ಕಚೇರಿಯಲ್ಲಿ ಹೆಣ್ಣು ಮಕ್ಕಳಿಂದ ಮುಖ್ಯಮಂತ್ರಿಗಳಿಗೆ 10, 20 ರೂ.ಗಳನ್ನು ಮನಿ ಆರ್ಡರ್ ಮಾಡಿಸುವ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಸರ್ಕಾರವನ್ನು ತೀವ್ರವಾಗಿ ಖಂಡಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಲಕ್ಷಾಂತರ ಮದ್ಯ ವ್ಯಸನಿಗಳು ಮದ್ಯ ಸೇವನೆ ಚಟದಿಂದ ಮುಕ್ತರಾಗಿದ್ದರು. ಹೀಗಾಗಿ ಲಕ್ಷಾಂತರ ಕುಟುಂಬಗಳಲ್ಲಿ ನೆಮ್ಮದಿ, ಶಾಂತಿ ನೆಲೆಸಿತ್ತು. ಆದರೆ ಸರ್ಕಾರ ಆದಾಯದ ನೆಪ ಹೇಳಿ ಸಮಾಜದ ಎಲ್ಲಾ ವರ್ಗದ ಜನರ ವಿರೋಧದ ನಡುವೆಯೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಸರಿಯಲ್ಲ ಎಂದು ಚಳವಳಿಗಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಮದ್ಯದ ಕಾರಣಕ್ಕೆ ಕೊಲೆ, ಆಸ್ತಿ-ಪಾಸ್ತಿ ಹಾನಿ, ಹಿಂಸೆ, ದೌರ್ಜನ್ಯ ಹೆಚ್ಚಾಗುತ್ತಿದೆ. ಒಂದೆಡೆ ಉದ್ಯೋಗವಿಲ್ಲ. ಕೂಲಿ ಇಲ್ಲ. ಇದರಿಂದ ಹಣವಿಲ್ಲದೇ ವ್ಯಸನಿಗಳು ಮನೆಯಲ್ಲಿದ್ದ ಅಳಿದುಳಿದ ವಸ್ತುಗಳನ್ನು ಅಡವಿಡುತ್ತಿದ್ದಾರೆ. ಆಹಾರ ಭದ್ರತೆಗಾಗಿ ನೀಡಿದ ಆಹಾರ ಧಾನ್ಯ, ಜೀವನ ನಿರ್ವಹಣೆಗಾಗಿ ಜನ್‍ಧನ್, ಕಾರ್ಮಿಕ ಕಾರ್ಡ್‍ಗಳಿಗೆ ಜಮಾ ಆದ ಹಣ ಪುನಃ ಮದ್ಯದ ಅಂಗಡಿಗಳ ಮೂಲಕ ಸರ್ಕಾರದ ಖಜಾನೆ ಸೇರುತ್ತಿದೆ ಎಂದರು.

ಸರ್ಕಾರಕ್ಕೆ ಆದಾಯವೇ ಮುಖ್ಯವಾದರೇ, ಸರ್ಕಾರದ ಖಜಾನೆಗೆ ನಾವು ಹಣ ತುಂಬುತ್ತೇವೆ. ಕೂಡಲೇ ಮದ್ಯ ಮಾರಾಟ ನಿಷೇಧಿಸಬೇಕು. ಇಲ್ಲದಿದ್ದರೇ ನಿರಂತರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಚಳವಳಿಯಲ್ಲಿ ದೀನ ಬಂಧು, ಅಮೃತಭೂಮಿ ಹಾಗೂ ಪುನರ್ಚಿತ್ ಸಂಸ್ಥೆಗಳು ಭಾಗವಹಿಸಿದ್ದವು

Translate »