ಮೈಸೂರು: ನ್ಯಾ.ಎ.ಜೆ.ಸದಾಶಿವ ಆಯೋಗದ ವದರಿಯಂತೆ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಅ.2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅನಿರ್ಧಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಮೈಸೂರಿನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ವರೆಗೆ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾ ಮಂಗಳವಾರ ಚಾಲನೆ ಪಡೆದುಕೊಂಡಿತು.
ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಮಾದಿಗ ಸಂಘಟನೆ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾಕ್ಕೆ ಮೈಸೂರಿನ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಚಾಲನೆ ನೀಡಿದರು.
ಪರಿಶಿಷ್ಟ ಜಾತಿ ಪಟ್ಟಿಗೆ ಸ್ಪøಶ್ಯ ಜಾತಿಗಳು ಸೇರ್ಪಟ್ಟ ಪರಿಣಾಮ ಮೀಸಲಾತಿ ಪಡೆಯಲು ಪೈಪೋಟಿ ಹೆಚ್ಚಾಯಿತು. ಇದರಿಂದ ಮಾದಿಗ ಸಮುದಾಯ ಹಿಂದುಳಿಯುವಂತಾಯಿತು. ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿರುವ ನ್ಯಾ.ಸದಾಶಿವ ಆಯೋಗವು ಸರ್ಕಾರದಿಂದಲೇ ರಚನೆಯಾಗಿ ವರದಿ ಸಿದ್ಧಪಡಿಸಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಈ ಆಯೋಗದ ವರದಿಯನ್ನು ಜಾರಿಗೆ ತರಬೇಕು ಎಂದು ಜಾಥಾದಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಆಗ್ರಹಿಸಿದರು.
ಮೂರು ಜಿಲ್ಲೆಗಳ ಮಾದಿಗ ಸಂಘಟನೆ ಒಕ್ಕೂಟದ ಅಧ್ಯಕ್ಷ ಕೆ.ಪ್ರಸನ್ನಚಕ್ರವರ್ತಿ, ಮಾದಿಗ ಸಂಘಟನೆಗಳ ಮುಖಂಡರಾದ ಸಿ.ಶಿವಯ್ಯ, ನಂಜುಂಡಮೌರ್ಯ ಸೇರಿದಂತೆ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.