ಲಾಕ್‍ಡೌನ್ ನಿರ್ಬಂಧದ ನಡುವೆಯೇ  ಮೈಸೂರಲ್ಲಿ ಅನ್‍ಲಾಕ್ ಸ್ಥಿತಿ ನಿರ್ಮಾಣ
ಮೈಸೂರು

ಲಾಕ್‍ಡೌನ್ ನಿರ್ಬಂಧದ ನಡುವೆಯೇ ಮೈಸೂರಲ್ಲಿ ಅನ್‍ಲಾಕ್ ಸ್ಥಿತಿ ನಿರ್ಮಾಣ

June 17, 2021

ಮೈಸೂರು, ಜೂ. 16(ಆರ್‍ಕೆ)- ಕೊರೊನಾ ವೈರಸ್ ಸೋಂಕಿನ ಕೊಂಡಿ ತುಂಡರಿಸುವುದಕ್ಕಾಗಿ ವಿಸ್ತರಿಸಿರುವ ಲಾಕ್‍ಡೌನ್ ನಿರ್ಬಂಧದ ಗಡುವು ಇನ್ನು ಐದು ದಿನವಿದೆ. ಆಗಲೇ ಮೈಸೂರಲ್ಲಿ ಅನ್‍ಲಾಕ್ ಪರಿಸ್ಥಿತಿ ಗೋಚರಿಸುತ್ತಿದೆ.

ಸೋಮವಾರ (ಜೂ.21) ಬೆಳಿಗ್ಗೆ 6 ಗಂಟೆವರೆಗೆ ಕೊರೊನಾ ಲಾಕ್‍ಡೌನ್ ನಿರ್ಬಂಧ ಜಾರಿಯಲ್ಲಿದ್ದು, ನಂತರ ಸಡಿಲ ಗೊಳಿಸುವ ಅಥವಾ ವಿಸ್ತರಿಸುವ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲವಾದರೂ, ಜನರು ಮಾತ್ರ ಸ್ವಯಂ ಪ್ರೇರಣೆಯಿಂದ ಲಾಕ್‍ಡೌನ್ ಮಾರ್ಗಸೂಚಿಯನ್ನು ಧಿಕ್ಕರಿಸಿ ಬೇಕಾಬಿಟ್ಟಿ ಸಂಚರಿಸುತ್ತಿದ್ದಾರೆ.

ಅಗತ್ಯ ವಸ್ತು ಖರೀದಿಗೆ ಪ್ರತೀ ದಿನ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅವಕಾಶ ನೀಡಿರುವುದನ್ನೇ ಬಳಸಿಕೊಂಡು ಕೇವಲ ಹಾಲು, ಹಣ್ಣು-ತರಕಾರಿ, ದಿನಸಿ, ಮದ್ಯ ಖರೀದಿಯಷ್ಟೇ ಅಲ್ಲದೆ, ಸಾಮಾನ್ಯ ದಿನ ಗಳಲ್ಲಿದ್ದಂತೆ ಬಹುತೇಕ ಎಲ್ಲಾ ವಹಿ ವಾಟುಗಳನ್ನು ನಡೆಸಲು ಮುಂದಾ ಗುತ್ತಿರುವುದರಿಂದ ಒಂದು ರೀತಿಯಲ್ಲಿ ಅನ್‍ಲಾಕ್ ಸ್ಥಿತಿಯಂತೆ ಮೈಸೂರು ನಗರ ಕಂಡುಬರುತ್ತಿದೆ.

ಆ ವೇಳೆ ಕಬ್ಬಿಣ, ಸಿಮೆಂಟ್, ಟೈಲ್ಸ್, ಸ್ಯಾನಿಟರಿ ವಸ್ತುಗಳು ಪ್ಲಾಸ್ಟಿಕ್ ಪದಾರ್ಥ, ಗ್ಲಾಸ್‍ಹೌಸ್, ಸಲೂನ್, ಗಿಫ್ಟ್ ಶಾಪ್, ಸ್ಟೇಷನರಿ, ಜೆರಾಕ್ಸ್, ಬ್ಯಾಂಗಲ್ಸ್ ಸ್ಟೋರ್ ಸೇರಿದಂತೆ ಇನ್ನಿತರ ಅಂಗಡಿ, ವಾಣಿಜ್ಯ ಮಳಿಗೆಗಳನ್ನು ತೆರೆದು ತರಾತುರಿಯಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಪೊಲೀ ಸರು, ನಗರ ಪಾಲಿಕೆ ಸಿಬ್ಬಂದಿಗಳು ಅಲ್ಲಲ್ಲಿ ಗಸ್ತು ತಿರುಗುತ್ತಾರಾದರೂ, ಅವರ್ಯಾರೂ ಅಗತ್ಯವಸ್ತುಗಳಲ್ಲದೆ ಅಂಗಡಿ ತೆರೆದಿದ್ದರೂ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಬಂದ್ ಮಾಡಿಸುವ ಗೋಜಿಗೆ ಹೋಗುವುದಿಲ್ಲ, ಪರಿಣಾಮ ಆ ಎಲ್ಲಾ ಅಂಗಡಿಗಳು ಸುಮಾರು 10-45 ಗಂಟೆವರೆಗೂ ತೆರೆದಿರುತ್ತವೆ.

ಅದರಿಂದಾಗಿ ಜನ ಸಂದಣಿ, ವಾಹನ ಸಂಚಾರವೂ ಸಹಜವಾಗಿಯೇ ಜಾಸ್ತಿಯಾಗಿ ರುತ್ತದೆ. ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಶಿವರಾಂಪೇಟೆ, ಸಂತೆ ಪೇಟೆ, ಎಪಿಎಂಸಿ ಮಾರುಕಟ್ಟೆ, ಬೋಟಿ ಬಜಾರ್, ಓಲ್ಡ್ ಆರ್‍ಎಂಸಿ ಮಾರುಕಟ್ಟೆ, ಅಗ್ರಹಾರ ಸರ್ಕಲ್, ಚಾಮುಂಡಿಪುರಂ ಸರ್ಕಲ್, ಹೆಬ್ಬಾಳಿನ ಸೂರ್ಯಬೇಕರಿ ಸರ್ಕಲ್, ಹೆಬ್ಬಾಳು ಮೇನ್ ರೋಡ್, ಅಭಿಷೇಕ ಸರ್ಕಲ್, ರಾಮಕೃಷ್ಣನಗರ ಸರ್ಕಲ್, ವಿವೇಕಾನಂದ ಸರ್ಕಲ್, ನ್ಯೂ ಕಾಂತರಾಜ ಅರಸ್ ರೋಡ್ ಸೇರಿದಂತೆ ಮೈಸೂರು ನಗರದಾದ್ಯಂತ ಎಲ್ಲಿ ನೋಡಿ ದರಲ್ಲಿ ಜನ, ವಾಹನ ದಟ್ಟಣೆಯಿಂದ ಕೂಡಿರುವುದು ಕಂಡುಬರುತ್ತಿದೆ.

ಹೋಟೆಲ್‍ಗಳಲ್ಲಿ ಆಹಾರವನ್ನು ಪಾರ್ಸಲ್ ನೀಡುತ್ತಿದ್ದು, ಜೊಮೆಟೋ, ಸ್ವಿಗ್ಗಿಯಂತಹ ಸಂಸ್ಥೆಗಳು ಆನ್‍ಲೈನ್ ಆರ್ಡರ್ ಪಡೆದು ಮನೆ ಮನೆಗೆ ಆಹಾರ ಪೂರೈಸುತ್ತಿರುವುದು, ಮೈಸೂರಲ್ಲಿ ವಾಹನ ಸಂಚಾರ ದಟ್ಟಣೆಗೆ ಮತ್ತೊಂದು ಕಾರಣವಾಗಿದೆ.

ಉಳಿದಂತೆ ತುರ್ತು ವೈದ್ಯಕೀಯ ಸೇವೆ ಎಂದು ಬೋರ್ಡ್ ಹಾಕಿಕೊಂಡು ಓಡಾಡುವವರ ಸಂಖ್ಯೆಯೂ ಇತ್ತೀಚೆಗೆ ಜಾಸ್ತಿಯಾಗಿದ್ದರೆ, ಆಸ್ಪತ್ರೆಗಳಿಗೆ ಮಾಸ್ಕ್, ಪಿಪಿಇ ಕಿಟ್, ಔಷಧಿ ಸರಬರಾಜು ಮಾಡುವ ಲಾಜಿಸ್ಟಿಕ್ ವಾಹನಗಳೂ ನಗರ ದಾದ್ಯಂತ ಓಡಾಡುತ್ತಿರುವುದರ ಜೊತೆಗೆ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಅಂತರ ಜಿಲ್ಲೆಗೆ ಸಂಚರಿಸುತ್ತಿರುವ ವಾಹನ ಗಳಿಗೂ ನಿರ್ಬಂಧಗೊಳಿಸುತ್ತಿಲ್ಲವಾ ದ್ದರಿಂದ ಮಾಮೂಲಿ ದಿನಗಳಲ್ಲಿರು ವಂತೆಯೇ ವಾಹನ ಸಂಚಾರ ದಟ್ಟಣೆ ಲಾಕ್‍ಡೌನ್ ನಿರ್ಬಂಧದಲ್ಲೂ ಕಾಣುತ್ತಿದೆ.

ಎಲ್ಲೆಡೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆಯಾದರೂ, ಕಟ್ಟು ನಿಟ್ಟಾಗಿ ತಪಾಸಣೆ ನಡೆಸಿ ನಿಯಮ ಗಳನ್ನು ಜಾರಿಗೊಳಿಸದಿರುವುದರಿಂದ ಜನರು ಎಗ್ಗಿಲ್ಲದೇ ಓಡಾಡುತ್ತಿರುವುದು ಕಂಡುಬಂದಿದೆ.

Translate »