ಈರುಳ್ಳಿ ಬೆಲೆ ಏರಿಕೆ ಆಗಲ್ಲ ಎನ್ನುವ ದೇವರಾಜ ಮಾರುಕಟ್ಟೆ ವರ್ತಕರು
ಮೈಸೂರು

ಈರುಳ್ಳಿ ಬೆಲೆ ಏರಿಕೆ ಆಗಲ್ಲ ಎನ್ನುವ ದೇವರಾಜ ಮಾರುಕಟ್ಟೆ ವರ್ತಕರು

August 27, 2020

ಮೈಸೂರು, ಆ.26(ಪಿಎಂ)- ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ಈರುಳ್ಳಿ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಸಾಧ್ಯತೆ ಇಲ್ಲ ಎಂದು ಮೈಸೂರಿನ ದೇವರಾಜ ಮಾರುಕಟ್ಟೆ ಈರುಳ್ಳಿ ವ್ಯಾಪಾರಿಗಳು ಅಂದಾಜು ಮಾಡಿದ್ದಾರೆ.

ದೇವರಾಜ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿ ಜಿ.ಆನಂದ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಈರುಳ್ಳಿ ಬೆಲೆ ಯಲ್ಲಿ ಸದ್ಯ ಅಂಥ ಏರಿಕೆ ಆಗಿಲ್ಲ, ಏರಿಕೆ ಯಾಗುವ ಸಾಧ್ಯತೆಯೂ ಇಲ್ಲ. ಈರುಳ್ಳಿ ಸ್ಥಳೀಯವಾಗಿ ಪೂರೈಕೆ ಆಗಲಿರುವು ದರಿಂದ ಬೆಲೆ ದುಬಾರಿ ಆಗದು.

ಈಗ ದೇವರಾಜ ಮಾರುಕಟ್ಟೆಯಲ್ಲಿ ಪ್ರಥಮ ಶ್ರೇಣಿ ಈರುಳ್ಳಿ ಕೆಜಿಗೆ 25 ರೂ. ಇದೆ. 2ನೇ ದರ್ಜೆಯದಕ್ಕೆ 12ರಿಂದ 15 ರೂ. ಬೆಲೆ ಇದೆ. ಚಿಲ್ಲರೆ ಅಂಗಡಿಗಳಲ್ಲಿ 1-2 ರೂ. ಹೆಚ್ಚಿ ರುತ್ತದೆ. ತಳ್ಳುವ ಗಾಡಿಯವರು ಗುಣಮಟ್ಟ ಕಡಿಮೆ ಇರುವ ಈರುಳ್ಳಿ ಮಾರುವುದರಿಂದ ಬೆಲೆಯೂ ಕಡಿಮೆ ಇರುತ್ತದೆ ಎಂದರು.

ಸದ್ಯ ಮಹಾರಾಷ್ಟ್ರದಿಂದ ಮೈಸೂರು ಎಪಿ ಎಂಸಿಗೆ ಈರುಳ್ಳಿ ಪೂರೈಕೆಯಾಗುತ್ತಿದೆ. ಅದು ಸೆಪ್ಟೆಂಬರ್ ಮಾಸಾಂತ್ಯಕ್ಕೆ ಖಾಲಿ ಯಾಗಲಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಸ್ಥಳೀಯ ಈರುಳ್ಳಿಯೇ ಮಾರು ಕಟ್ಟೆಗೆ ಬರಲಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಈರುಳ್ಳಿ ಪೂರೈಕೆ ಯಾಗಬೇಕಿದೆ ಎಂದರು.

ದೇವರಾಜ ಮಾರುಕಟ್ಟೆಯ ಮತ್ತೊಬ್ಬ ಈರುಳ್ಳಿ ವ್ಯಾಪಾರಿ ಫಕ್ರುದ್ದೀನ್ ಅಲಿ (ಬಕ್ಕರ್) ಮಾತನಾಡಿ, ದುಪ್ಪ ಈರುಳ್ಳಿ ಕೆಜಿ 25 ರೂ. ಇದ್ದರೆ, ಸಾಂಬಾರು ಈರುಳ್ಳಿ ಕೆಜಿಗೆ 60 ರೂ. ಇದೆ. ಸದ್ಯ ಬೆಲೆ ದುಬಾರಿ ಆಗುವ ಸಾಧ್ಯತೆ ಇಲ್ಲ ಎಂದರು.

ಕೆಜಿಗೆ 16ರಿಂದ 17 ರೂ.ಗಳಷ್ಟಿದ್ದ ಈರುಳ್ಳಿ ಧಾರಣೆ ಕಳೆದ ವಾರ ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ 22ರಿಂದ 23 ರೂ.ಗೆ ಹೆಚ್ಚಳವಾಯಿತು. ಹಬ್ಬಕ್ಕೂ ಮುನ್ನ ಮಳೆ ಯಾಗಿದ್ದರಿಂದ ಈರುಳ್ಳಿ ಬೆಲೆಯಲ್ಲಿ ಏರಿಕೆ ಯಾಗುತ್ತದೆ ಎಂದು ವರ್ತಕರು ಅಂದಾಜು ಮಾಡಿದ್ದರು. ಕೇರಳಕ್ಕೆ ಮೈಸೂರಿನಿಂದಲೂ ಹೆಚ್ಚು ಈರುಳ್ಳಿ ಪೂರೈಕೆಯಾಗುತ್ತದೆ. ಓಣಂ ಸಮೀಪಿಸುತ್ತಿರುವುದರಿಂದ 1-2 ರೂ. ಬೆಲೆ ಏರುತ್ತದೆ. ಬಳಿಕ ಕಡಿಮೆಯಾಗಲಿದೆ ಎಂಬುದು ವ್ಯಾಪಾರಸ್ಥರ ಅನುಭವದ ಮಾತು.

Translate »