ಮೈಸೂರು

ಒಂದೆಡೆ ಅಭಿವೃದ್ಧಿ, ಜೊತೆ ಜೊತೆಗೆ ಜನಸೇವೆ ನನ್ನ ಮಹದುದ್ದೇಶ…

April 12, 2023

ಹುಣಸೂರು, ಏ.11(ಕೆಕೆ)-ವ್ಯವಸ್ಥೆಯ ಸುಧಾರಣೆ, ರೈತರ, ದಮನಿತರ ಮತ್ತು ಯುವ ಸಮೂಹದ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡುತ್ತೇನೆ. ಅಭಿವೃದ್ಧಿ ಮಂತ್ರದೊಂದಿಗೆ ಜನಸೇವೆಗೆ ಬದ್ಧನಾಗಿದ್ದೇನೆ ಎಂದು ಹುಣಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‍ಗೌಡ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ತಾಲೂಕಿನ ಜನತೆ ನನ್ನನ್ನು ಆಶೀರ್ವ ದಿಸಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಘೋಷಿ ಸುವುದಕ್ಕಿಂತ ಮೊದಲು ಇರುವ ವ್ಯವಸ್ಥೆ ಸರಿಪಡಿಸುವ ಕಾರ್ಯ ಮಾಡಲಿದ್ದೇನೆ. ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಿದಲ್ಲಿ ಸೌಲಭ್ಯಗಳು ದೊರಕುತ್ತವೆ. ಸಾಮಾಜಿಕ ಸಾಮರಸ್ಯ, ಶೋಷಿತರ ಅಭಿವೃದ್ಧಿ, ಆರ್ಥಿಕ, ಶಿಕ್ಷಣ, ನೀರಾವರಿ, ತಾಲೂ ಕಿನ ಜೀವನದಿ ಲಕ್ಷ್ಮಣತೀರ್ಥ ಶುದ್ಧೀಕರಣ, ಉದ್ಯೋಗ ಸೃಷ್ಟಿ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದರು.

ಉದ್ಯೋಗ ಸೃಷ್ಟಿ!

ಕಳೆದ 2010 ರಿಂದ ನಾನು ಹುಣಸೂರು ಜನರ ನಡುವೆಯೇ ಇದ್ದು ಕೆಲಸ ಮಾಡುತ್ತಾ ಬರು ತ್ತಿದ್ದೇನೆ. ನನ್ನ ತಂದೆ ಜಿ.ಟಿ. ದೇವೇಗೌಡರು 2 ಬಾರಿ ಶಾಸಕ ರಾಗಿ ಕೇವಲ 40 ತಿಂಗಳ ಕಾಲ ಅಧಿಕಾರದಲ್ಲಿದ್ದರೂ, ತಾಲೂಕಿನ ಜನತೆ ಎಂದಿಗೂ ಮರೆಯದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ದ್ದಾರೆ. ನನ್ನ ತಾಯಿ ಲಲಿತಾ ಜಿ.ಟಿ.ದೇವೇಗೌಡರು ಜಿಪಂ ಸದಸ್ಯರಾಗಿ ಜನಪರ ಕಾರ್ಯ ಕೈಗೊಂಡಿದ್ದರು. ಹೀಗೆ ಒಂದಲ್ಲ ಒಂದು ರೀತಿ ನಮ್ಮ ಕುಟುಂಬ ಹುಣಸೂರನ್ನು ಕರ್ಮಭೂಮಿ ಮಾಡಿಕೊಂಡಿದೆ. ಹುಣಸೂರು ಮಿನಿ ಭಾರತವಿದ್ದಂತೆ. ಇಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮ ಗಳ ಜನರು ಒಂದಾಗಿ ಬಾಳುತ್ತಿದ್ದಾರೆ. ತಾಲೂಕಿನ ಯುವ ಸಮೂಹದ ಉದ್ಯೋಗ ಸೃಷ್ಟಿಗಾಗಿ ನಾನು ಈ ಹಿಂದೆಯೇ ಜಿಟಿಡಿ ಫೌಂಡೇಶನ್ ಮೂಲಕ ಉಚಿತ ವಾಗಿ ಸಿಇಟಿ ಕೋಚಿಂಗ್ ಕಲ್ಪಿಸಿದ್ದೆ. ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ತಾಲೂಕಿನಲ್ಲಿದ್ದ ಕೇವಲ 48 ಹಾಲು ಉತ್ಪಾದಕರ ಸಂಘಗಳನ್ನು 205ಕ್ಕೆ ಏರಿಸಿದ್ದೇನೆ. ಆ ಮೂಲಕ 1000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗಿದೆ ಎಂದು ಜಿ.ಡಿ.ಹರೀಶ್‍ಗೌಡ ತಿಳಿಸಿದರು.

ಫೀಡ್ಸ್, ಗಾರ್ಮೆಂಟ್ ಆರಂಭ

ಕೆಎಂಎಫ್ ಮತ್ತು ಮೈಮೂಲ್ ಸಹಯೋಗದಲ್ಲಿ ಹುಣ ಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನ ರೈತರು ಮತ್ತು ಯುವಕರಿಗಾಗಿ ಫೀಡ್ಸ್ ಫ್ಯಾಕ್ಟರಿ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದೆ. 300 ಕೋಟಿ ರೂ.ಗಳ ಈ ಯೋಜನೆ ಯಿಂದ ಈ ಭಾಗದ ಸಾವಿರಾರು ಯುವಕರಿಗೆ ಉದ್ಯೋಗ ಸಿಗಲಿದೆ. ಹುಣಸೂರಿನಲ್ಲಿ ಗಾರ್ಮೆಂಟ್ ಆರಂಭಿಸಲು ಅವಕಾಶವಿಲ್ಲವೆಂಬ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಖಂಡಿತ ಮಾಡಬಹುದಾಗಿದ್ದು, ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕ್ಲಸ್ಟರ್ ಆರಂಭಿಸುವ ಯೋಚನೆ ಹೊಂದಿದ್ದೇನೆ ಎಂದರು.

ಡಿಪ್ಲೊಮಾ, ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ: ನನ್ನ ತಂದೆ ತಮ್ಮ ಅಧಿಕಾರಾ ವಧಿಯಲ್ಲಿ ತಾಲೂಕಿನಲ್ಲಿ 3 ಪದವಿ ಕಾಲೇಜು, ಐದು ಪಿಯು ಕಾಲೇಜು, 16 ಪ್ರೌಢಶಾಲೆಗಳನ್ನು ತೆರೆದಿದ್ದರು. ಉನ್ನತ ಶಿಕ್ಷಣ ಸಚಿವರಾಗಿದ್ದ ವೇಳೆ ತಾಲೂಕಿನ ಪದವಿ ಕಾಲೇಜುಗಳಿಗೆ ಒಟ್ಟು 20 ಕೋಟಿ ರೂ. ಅನುದಾನ ನೀಡಿದ್ದರು. ನಗರದ ದೇವರಾಜ ಅರಸು ಕಾಲೇಜಿಗೆ ಪಿಜಿ ಕೋರ್ಸ್‍ಗಳನ್ನು ತರುವಲ್ಲಿ ನನ್ನ ಪಾತ್ರವೂ ಇದೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಅವಶ್ಯವಿರುವ ಡಿಪ್ಲೊಮಾ, ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಗುರಿ ಹೊಂದಿದ್ದೇನೆ. ತಾಲೂಕು ಕ್ರೀಡಾಂಗಣದ ಅಭಿವೃದ್ಧಿ, ಸ್ಫೋಟ್ರ್ಸ್ ಅಕಾಡೆಮಿ ಸ್ಥಾಪನೆ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೋರ್ಸ್‍ಗಳನ್ನು ಒದಗಿಸುವುದು, ಶಿಕ್ಷಕರ ವೃತ್ತಿ ತರಬೇತಿಗೆ ಆದ್ಯತೆ, ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸರ್ಕಾರಿ ಶಾಲೆಗೆ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು ಹೀಗೆ ಹತ್ತು ಹಲವು ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದರು.
ಆರೋಗ್ಯಕ್ಕೆ ಆದ್ಯತೆ: ಹುಣಸೂರಿನ ಗ್ರಾಮೀಣ ಭಾಗಗಳ ಹಾಗೂ ನಗರದ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ಕಂಡಿದ್ದೇನೆ. ನೂತನವಾಗಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದ್ದು, ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕಿದೆ. ಇದಕ್ಕಾಗಿ ಶ್ರಮಿಸುತ್ತೇನೆ. ಯಶಸ್ವಿನಿ ಯೋಜನೆಯಡಿ ತಾಲೂಕಿನಲ್ಲಿ 35 ಸಾವಿರ ಸಹಕಾರಿಗಳನ್ನು ಒಳಪಡಿಸಲಾಗಿದೆ. ಹುಣಸೂರು ಉಪವಿಭಾಗ ಕೇಂದ್ರವಾಗಿದ್ದರೂ ಹೆರಿಗೆ ಆಸ್ಪತ್ರೆಯಿಲ್ಲ, ಕೆ.ಆರ್.ನಗರ, ಹೆಚ್.ಡಿ.ಕೋಟೆ ತಾಲೂಕಿಗೆ ಹೋಗುವÀ ಪರಿಸ್ಥಿತಿ ಇದೆ. ತುರ್ತು ಚಿಕಿತ್ಸೆಗಳಿಗಾಗಿ ಮೈಸೂರು, ಬೆಂಗಳೂರಿಗೆ ತೆರಳುವುದು ನಿಲ್ಲಬೇಕಿದೆ. ಪ್ರತಿ ಗ್ರಾಮದಲ್ಲೂ 25ಕ್ಕೂ ಹೆಚ್ಚು ಮಂದಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇನೆ ಎಂದರು.

ನೀರಾವರಿ, ತಂಬಾಕು ಕೃಷಿ: ತಾಲೂಕಿನ ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ತಂಬಾಕಿಗೆ ವೈಜ್ಞಾನಿಕ ದರ ಒದಗಿಸುವುದು, ತಂಬಾಕು ಮಂಡಳಿ ನಿರ್ದೇಶಕರ ಕಚೇರಿಯನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸುವ ಮತ್ತು ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಯನ್ನು ಮೈಸೂರಿನಿಂದ ಹುಣಸೂರಿಗೆ ಸ್ಥಳಾಂತರಿಸುವ ಕುರಿತಾದ ರೈತರ ಬಹುವರ್ಷಗಳ ಒತ್ತಾಯ ಪರಿಗಣಿಸಿದ್ದೇನೆ. ಬಿಳಿಕೆರೆ ಭಾಗದಲ್ಲಿ ನೀರಾವರಿ ಯೋಜನೆಗಳ ಜಾರಿಯಲ್ಲಿ ಕೊರತೆ ಇದ್ದು, ಕಾಲುವೆಗಳ ನಿರ್ಮಾಣ, ಕೆರೆಗೆಳನ್ನು ತುಂಬಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇನೆ ಎಂದರು.
ದುರಸ್ತಿ, ಪೋಡು, ಸಾಗುವಳಿ ಸಮಸ್ಯೆಗಳು: ಕಂದಾಯ ಮತ್ತು ಸರ್ವೇ ಇಲಾಖೆಗಳು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಸತಾಯಿಸುತ್ತಿವೆ. ಏಕಗವಾಕ್ಷಿ ಪದ್ಧತಿ ಮೂಲಕ ರೈತರಿಗೆ ಅವಶ್ಯವಾದ ಪಹಣಿ, ಪೋಡು, ದುರಸ್ತಿಯಂತಹ ಕಾರ್ಯಗಳು ಆಗಬೇಕೆನ್ನು ವುದು ನನ್ನಾಸೆ. ಗೋಮಾಳವನ್ನು ಸಾಗುವಳಿಗೆ ನೀಡುವ ಕುರಿತು ಸರ್ಕಾರದ ದ್ವಂದ್ವ ನೀತಿ ಖಂಡನೀಯ. ಜಿ.ಟಿ.ದೇವೇಗೌಡರ ಅವಧಿಯಲ್ಲಿ ತಾಲೂಕಿನ ಆಸ್ಪತ್ರೆ ಕಾವಲ್ ಸೊಸೈಟಿ ಭೂಮಿ ಹಕ್ಕುಪತ್ರ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡಿದ್ದರು. ಆದರೆ ಅದರ ಜಾರಿಯಲ್ಲಿ 15 ವರ್ಷಗಳೇ ಸಂದರೂ ಆಗದಿರುವುದು ಬೇಸರವಾಗಿದೆ ಎಂದರು.

ನಗರಸಭೆ ಅವಾಂತರಗಳಿಗೆ ಅಂತ್ಯ ಹಾಡಬೇಕಿದೆ: ಹುಣಸೂರು ನಗರದಾದ್ಯಂತ ಸಂಚರಿಸುವ ವೇಳೆ ನಾಗರಿಕರಿಂದ ನಗರಸಭೆ ಆಡಳಿತ ವೈಖರಿ ಕುರಿತು ಅಸಮಾಧಾನದ ಮಾತುಗಳು ಬಹುವಾಗಿ ಕೇಳಿ ಬಂದಿವೆ. ಗಂಗಾನದಿ ಶುದ್ಧೀಕರಣ ಆಗುತ್ತದೆ ಎನ್ನುವುದಾದರೆ ಲಕ್ಷ್ಮಣತೀರ್ಥ ನದಿ ಶುದ್ಧೀಕರಣ ಆಗುತ್ತಿಲ್ಲವೇಕೆ? 15 ವರ್ಷಗಳಿಂದಲೂ ಯೋಜನೆಗಳು ಹೊರ ಬೀಳುತ್ತಿವೆಯೇ ಹೊರತು ಕಾರ್ಯರೂಪ ಆಗುತ್ತಿಲ್ಲ. 15 ವರ್ಷಗಳಿಂದ ನಗರ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಿಲ್ಲವೆನ್ನುವುದಾದರೆ ಅನುಮಾನದ ಪ್ರಶ್ನೆಗಳು ಜನರ ಮನದಲ್ಲಿ ಸಹಜವಾಗಿ ಮೂಡಿದೆ. ಅಕ್ರಮ ಬಡಾವಣೆಗಳ ನಿವೇಶನಕ್ಕೂ ಖಾತೆ ನೀಡುವ ಕುರಿತು ನನ್ನ ತಂದೆ ಸರ್ಕಾರದ ಮುಂದೆ ಪ್ರಸ್ತಾಪಿಸಿರುವ ಸಲಹೆಗಳು ಕಾರ್ಯರೂಪಕ್ಕೆ ಬರಲಿದ್ದು, ರಾಜ್ಯಾದ್ಯಂತ ಜಾರಿಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನನ್ನು ತಾಲೂಕಿನ ಮನೆಮಗ ಎನ್ನುತ್ತಿದ್ದಾರೆ: ಬೇರೆ ಊರಿನಿಂದ ನೀವು ಬಂದಿದ್ದೀರಿ, ಸ್ಥಳೀಯರಲ್ಲ ಎನ್ನುವ ಆರೋಪಗಳನ್ನು ವಿರೋಧಿಗಳು ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2010 ರಿಂದ ನನ್ನ ಕಾರ್ಯ ಕ್ಷೇತ್ರವನ್ನಾಗಿ ಹುಣಸೂರನ್ನು ಆಯ್ದುಕೊಂಡಿದ್ದೇನೆ. ಜಿಟಿಡಿ ಫೌಂಡೇಶನ್ ಮೂಲಕ ಆರೋಗ್ಯ ತಪಾಸಣೆ, ಪರಿಸರ ಕಾಳಜಿ, ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ಮಾಡಿಕೊಂಡು ಬಂದಿದ್ದೇನೆ. 2012ರಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ನಿರ್ದೇಶಕನಾದೆ. 2013ರಲ್ಲಿ ಡಿಸಿಸಿ ನಿರ್ದೇಶಕ, 2018 ರಲ್ಲಿ ಅಧ್ಯಕ್ಷ, ನಂತರ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮತ್ತು ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇವೆಲ್ಲವೂ ನಾನು ಹುಣಸೂರಿನ ಜನರ ಆಶೀರ್ವಾದದಿಂದಲೇ ಆಗಿದ್ದು, ಚುನಾವಣಾ ಪ್ರಚಾರಕ್ಕೆ ತೆರಳಿದ ಸಂದರ್ಭ ಜನರು ನೀನು ನಮ್ಮ ಮನೆ ಮಗ ಎಂದು ಪ್ರೀತಿ ತೋರಿ ಆಶೀರ್ವದಿಸುತ್ತಿದ್ದಾರೆ. ಹಾಗಿದ್ದಾಗ ನಾನು, ನನ್ನ ಕುಟುಂಬ ಬೇರೆ ಊರಿನವರು ಎಂದು ಹೇಳುವುದು ಸರಿಯೇ ಎಂದು ಪ್ರಶ್ನಿಸಿದರು.

ಸಹಕಾರ ಕ್ಷೇತ್ರ ವಿಶಾಲವಾದುದು: ಸಹಕಾರ ಕ್ಷೇತ್ರವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಹಕಾರಿ ಕ್ಷೇತ್ರದ ವ್ಯಾಪ್ತಿ ವಿಶಾಲವಾಗಿದೆ. ಆ ಮೂಲಕ ನನಗೆ ರಾಜಕೀಯ ಲಾಭ ಇರಬಹುದು. ಹಾಗೆಂದ ಮಾತ್ರಕ್ಕೆ ಯಾವತ್ತೂ ಸಹಕಾರಿ ಸಿಬ್ಬಂದಿಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಲ್ಲ. ಬಳಸುವುದೂ ಇಲ್ಲ. ಸಹಕಾರಿ ಕ್ಷೇತ್ರದ ಮಹತ್ವ ಮತ್ತು ವ್ಯಾಪ್ತಿಯನ್ನು ಅರಿಯದವರು ಈ ರೀತಿ ಟೀಕಿಸಬಹುದು. ಅಷ್ಟೇ ಎಂದರು.
ಪಕ್ಷಬೇಧ ಮರೆತು ಸಾಲಮನ್ನಾ: ಸಹಕಾರಿ ಕ್ಷೇತ್ರದಲ್ಲಿ ಪಕ್ಷಭೇದÀವಿಲ್ಲ. 2013ರವರೆಗೆ ತಾಲೂಕಿಗೆ ಸಹಕಾರ ಕ್ಷೇತ್ರದಿಂದ ಗರಿಷ್ಠ 20 ಕೋಟಿ ರೂ. ಸಾಲಸೌಲಭ್ಯ ದೊರಕುತ್ತಿತ್ತು. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ನಂತರ(2018) ತಾಲೂಕಿಗೆ 160 ಕೋಟಿ ರೂ. ಸಾಲಸೌಲಭ್ಯ ನೀಡಿದ್ದೇನೆ. ಕುಮಾರಣ್ಣನ ಸರ್ಕಾರ ಸಾಲಮನ್ನಾ ಯೋಜನೆಯಡಿ ತಾಲೂಕಿನ 130 ಕೋಟಿ ರೂ.ಗಳ ಪೈಕಿ 122 ಕೋಟಿ ರೂ. ಸಾಲಮನ್ನಾ ಮಾಡಿದೆ. ಇದು ರಾಜಕೀಯ ಪಕ್ಷದ ಆಧಾರದಡಿ ಆದ ಮನ್ನಾ ಆಗಿಲ್ಲವೆಂದು ಸಹಕಾರಿ ಕ್ಷೇತ್ರದಲ್ಲಿ ರಾಜಕೀಯವೆಂದು ಟೀಕಿಸಿದವರಿಗೆ ಟಾಂಗ್ ನೀಡಿದರು. ತಾಲೂಕಿನಲ್ಲಿ 3 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಜನತಾ ಬಜಾರ್ ಸ್ಥಾಪಿಸಿದ್ದು, ಮಿಕ್ಕ 24 ಸಂಘಗಳ ವ್ಯಾಪ್ತಿಯಲ್ಲೂ ಜನತಾ ಬಜಾರ್ ಸ್ಥಾಪಿಸಲಾಗುವುದು. ಆ ಮೂಲಕ ಮಹಿಳೆಯರು ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡಲಾಗುವುದು ಎಂದರು.

ಹುಣಸೂರು ಉಪವಿಭಾಗವನ್ನು ಒಳಗೊಂಡು ಜಿಲ್ಲೆಯಾಗಬೇಕೆಂಬ ಕೂಗು ಹಲವು ವರ್ಷಗಳಿಂದ ಎದ್ದಿದೆ. ಜಿಲ್ಲೆಯಾಗಬೇಕೆಂಬುದಕ್ಕೆ ನನ್ನ ಬೆಂಬಲವಿದೆ. ಆದರೆ ಅದರ ಸಾಧಕ ಬಾಧಕಗಳನ್ನು ಸಮಗ್ರವಾಗಿ ಪರಿಗಣಿಸಿ ಮುಂದಡಿ ಇಡಬೇಕಿದೆ.

ನಂದಿನಿ ಕನ್ನಡಿಗರ ಹೆಮ್ಮೆ: ಕೆಎಂಎಫ್‍ನ ನಂದಿನಿಯನ್ನು ಅಮುಲ್‍ನೊಂದಿಗೆ ವಿಲೀನಗೊಳಿ ಸುವ ಕುರಿತು ಎದ್ದಿರುವ ವಿವಾದದ ಕುರಿತು ಉತ್ತರಿಸಿದ ಅವರು ನಂದಿನಿ ಕನ್ನಡಿಗರ ಅಸ್ಮಿತೆ, ಕನ್ನಡಿಗರ ಹೆಮ್ಮೆ. ಕೆಎಂಎಫ್ ಒಂದು ಸ್ವಾಯತ್ತ ಸಂಸ್ಥೆ. ದೇಶದಲ್ಲಿ ಅತೀ ದೊಡ್ಡ ಎರಡನೇ ಸಹಕಾರಿ ಸಂಸ್ಥೆಯಾಗಿದೆ. ಇದನ್ನು ಮತ್ತೊಂದು ಸಂಸ್ಥೆಯೊಂದಿಗೆ ವಿಲೀನಗೊಳಿಸುವುದು ಇಲ್ಲಿನ ರೈತರಿಗೆ ಅನ್ಯಾಸವೆಸಗಿದಂತೆ. ಇದನ್ನು ನಾನು ವಿರೋಧಿಸುತ್ತೇನೆ. ಕನ್ನಡಿಗರ ಸ್ವಾಭಿಮಾನವನ್ನು ಪ್ರಶ್ನಿಸಿದಂತೆ ಆಗಲಿದೆ. ಯಾವುದೇ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಬಾರದು ಎಂದರು.

ಆದಿವಾಸಿಗಳ ಸಮಸ್ಯೆ, ಕಾಡಂಚಿನ ರೈತರ ಕೂಗು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಂಚಿನಲ್ಲಿರುವ ರೈತರ ಜಮೀನುಗಳ ಸಮಸ್ಯೆ ಪರಿಹಾರವಾಗಬೇಕಿದೆ. ಸ್ಪಷ್ಟತೆಯಿಲ್ಲದೇ ರೈತರು ತೊಂದರೆಗೆ ಸಿಲುಕಿದ್ದಾರೆ. ತಾಲೂಕಿನಲ್ಲಿ ಆದಿವಾಸಿಗಳ ಸಮಸ್ಯೆ ಜ್ವಲಂತವಾಗಿದ್ದು, ಪರಿಹಾರಕ್ಕಾಗಿ ಸರ್ಕಾರದ ಮಟ್ಟದಲ್ಲಿ ದನಿಯೆತ್ತುವ ಅವಶ್ಯಕತೆಯಿದೆ ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಕುಮಾರ್, ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್ ಹಾಜರಿದ್ದರು.

Translate »