ಇಂದು ವರಿಷ್ಠರಿಂದ ರಾಜ್ಯ ಮುಖಂಡರೊಂದಿಗೆ ಚರ್ಚೆ
News

ಇಂದು ವರಿಷ್ಠರಿಂದ ರಾಜ್ಯ ಮುಖಂಡರೊಂದಿಗೆ ಚರ್ಚೆ

December 10, 2022

ಬೆಂಗಳೂರು, ಡಿ.9- ಗುಜರಾತ್, ಹಿಮಾಚಲ ಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆ ಮುಗಿಯು ತ್ತಿದ್ದಂತೆ ಬಿಜೆಪಿ ವರಿಷ್ಠರು ಕರ್ನಾಟಕ ವಿಧಾನಸಭಾ ಚುನಾವಣೆಗೆ ರಂಗ ಪ್ರವೇಶ ಮಾಡುತ್ತಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವರಾದ ಪಿಯುಷ್ ಗೋಯಲ್ ಧರ್ಮೇಂದ್ರ ಪ್ರಧಾನ್ ಹಾಗೂ ಭೂಪೇಂದ್ರ ಯಾದವ್ ನಾಳೆ (ಡಿ.10) ರಾಜ್ಯ ನಾಯಕರೊಟ್ಟಿಗೆ ಚುನಾ ವಣಾ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಈ ಮೂವರು ನಾಯಕರು ನಾಳೆ ರಾಜ್ಯಕ್ಕೆ ಭೇಟಿ ನೀಡಲಿ ದ್ದಾರೋ ಇಲ್ಲವೇ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಚರ್ಚೆ ಮಾಡಲಿದ್ದಾರೋ ತಿಳಿದು ಬಂದಿಲ್ಲ. ನಾಳೆ ಪೂರ್ವ ಭಾವಿ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆರ್‍ಎಸ್‍ಎಸ್‍ನ ಪ್ರಾದೇಶಿಕ ನಾಯಕರು ತಮ್ಮ ಕಚೇರಿಗೆ ಕರೆಸಿಕೊಂಡು ನಿನ್ನೆ ರಾತ್ರಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಆರ್‍ಎಸ್‍ಎಸ್ ಪ್ರಮುಖ ಮುಕುಂದ್ ಅವರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಸುದೀರ್ಘ ಸಮಾಲೋಚನೆ ನಡೆಸಿದರು. ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 5 ಮತ್ತು 6ರಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ನಾಯಕರಿಂದ ಕೆಲವು ಮಾಹಿತಿ ಪಡೆದಿದ್ದರು. ಈ ಮಾಹಿತಿ ಆಧಾರ ಹಾಗೂ ಸಮೀಕ್ಷೆಗಳ ವರದಿಯನ್ನಾಧಾರವಾಗಿಟ್ಟುಕೊಂಡು ಚುನಾವಣಾ ಉಸ್ತುವಾರಿಗಳು ನಾಳೆ ನೀಲಿ ನಕ್ಷೆಯೊಂದನ್ನು ಸಿದ್ಧ ಪಡಿಸಿ, ಅದನ್ನು ಕಾರ್ಯರೂಪಕ್ಕೆ ತರಲು ರಾಜ್ಯ ನಾಯಕರಿಗೆ ಸೂಚಿಸಲಿದ್ದಾರೆ. ರಾಜ್ಯ ವಿಧಾನಸಭೆಗೆ 2023ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ಜರುಗಲಿದ್ದು, ಐದು ತಿಂಗಳ ಮುನ್ನವೇ ಪಕ್ಷವನ್ನು ಸಂಘಟಿಸುವ ಮತ್ತು ಅಭ್ಯರ್ಥಿಗಳನ್ನು ಅಂತಿಮ ಗೊಳಿಸುವ ಕಾರ್ಯಕ್ಕೆ ವರಿಷ್ಠರು ಮುಂದಾಗಿದ್ದಾರೆ.  ರಾಜ್ಯದ 224 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯು ವರಿಷ್ಠರದ್ದೇ ಅಂತಿಮ. ಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರು ಮತ್ತು ಸಂಘ ಪರಿವಾರದ ಮುಖಂಡರೊಟ್ಟಿಗೆ ಸಮಾಲೋಚನೆ ನಡೆಸಿದರೂ, ಅಂತಿಮವಾಗಿ ಸಮೀಕ್ಷಾ ವರದಿಯನ್ನಿಟ್ಟುಕೊಂಡೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ನಾಳಿನ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅನ್ನು ಕರ್ನಾಟಕದಲ್ಲಿ ಕಟ್ಟಿ ಹಾಕಿ ಪಕ್ಷವನ್ನು ಮುನ್ನೆಡೆಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Translate »