ಬಡಜನರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಪಡಿತರ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಬಡಜನರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಪಡಿತರ ಕಿಟ್ ವಿತರಣೆ

April 27, 2020

ಹುಣಸೂರು, ಏ.26(ಕೆಕೆ)- ಕೊರೊನಾ ವೈರಾಣು ಮಹಾಮಾರಿಯಿಂದ ತಲ್ಲಣಗೊಂಡ 300ಕ್ಕೂ ಹೆಚ್ಚು ಬಡಜನರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪಡಿತರ ಕಿಟ್‍ಗಳನ್ನು ವಿತರಿಸಿದರು.

ನಂತರ ಅವರು ಮಾತನಾಡಿ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕೊರೊನಾ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆ ಅವಮಾನದಿಂದ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳಾದರೂ ಕನಿಷ್ಠ ಸಾಂತ್ವನ ಹೇಳಲಾಗದ ಮಂಡ್ಯ ಜಿಲ್ಲಾಡಳಿತದ ಕಾರ್ಯÀ ವೈಖರಿ ಪ್ರಶ್ನಾರ್ಹವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿ, 50 ಸಾವಿರ ರೂ. ವೈಯಕ್ತಿಕ ನೆರವು ನೀಡಿದ ನಂತರವಷ್ಟೇ ಜಿಲ್ಲಾ ಅಧಿಕಾರಿಯೊಬ್ಬರು ಭೇಟಿ ನೀಡುತ್ತಾರೆಂದರೆ, ಅದು ಅಲ್ಲಿನ ಆಡಳಿತ ವೈಫಲ್ಯ ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಸರ್ಕಾರದ ಆದೇಶದಂತೆ ಮಾಧ್ಯಮ ಮಿತ್ರರಿಗೆ ಜಿಲ್ಲಾಸ್ಪತ್ರೆ ಯಲ್ಲೇ ತಪಾಸಣೆ ನಡೆಸಿದ್ದರೆ, ಮಂಡ್ಯದಲ್ಲಿ ಅಹಿತಕರ ಘಟನೆ ಸಂಭವಿಸುತ್ತಿರಲಿಲ್ಲ. ಇದಕ್ಕೆಲ್ಲ ಜಿಲ್ಲಾಡಳಿತದ ವೈಫಲ್ಯವೇ ಕಾರಣ. ಜನ ವಸತಿ ಪ್ರದೇಶದಲ್ಲಿರುವ ಅಂಬೇಡ್ಕರ್ ಭವನ ದಲ್ಲಿ ಪತ್ರಕರ್ತರ ತಪಾಸಣೆ ನಡೆಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈ ಬಗ್ಗೆ ತನಿಖೆ ನಡೆಯಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.

ತನಿಖೆಗೆ ಒತ್ತಾಯ: ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡರ ಮೇಲಿನ ಪ್ರಕರಣ ವಿಚಾರ ತನಿಖೆಯಾಗ ಬೇಕು. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ಆಗಬೇಕು. ಮಂಡ್ಯದಲ್ಲಿ ಜಿಲ್ಲಾಸ್ಪತ್ರೆ ಇಟ್ಟು ಕೊಂಡು ಅಂಬೇಡ್ಕರ್ ಭವನದಲ್ಲಿ ಸೋಂಕು ಪರೀಕ್ಷೆ ಮಾಡುವ ಅವಶ್ಯಕತೆ ಇರಲಿಲ್ಲ. ಈ ವಿಚಾರಕ್ಕೆ ತಳ್ಳಾಟ ಆಗಿದೆ. ಮಾತಿಗೆ ಮಾತು ಬೆಳೆÉದಿದೆ ಎಂದರು.

ಈ ವೇಳೆ ಮಾಜಿ ಸಚಿವ ಸಾ.ರಾ.ಮಹೇಶ್, ಮುಖಂಡ ರಾದ ದೇವರಹಳ್ಳಿ ಸೋಮಶೇಖರ್, ರೈಸ್‍ಮಿಲ್ ಸ್ವಾಮಿಗೌಡ, ಸತೀಶ್ ಪಾಪಣ್ಣ, ಬಿಳಿಕೆರೆ ಪ್ರಸನ್ನ, ನಗರಸಭಾ ಸದಸ್ಯರಾದ ಶರವಣ, ಶ್ರೀನಾಥ್, ಕೃಷ್ಣರಾಜಗುಪ್ತ, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಸ್ವಾಮಿ, ಚಿಕ್ಕಹುಣಸೂರು ಗೋವಿಂದೇಗೌಡ, ರವಿಕುಮಾರ್, ಮೊನಿಕಾ ಮಂಜು ಸೇರಿದಂತೆ ಆನೇಕರು ಭಾಗವಹಿಸಿದ್ದರು.

Translate »