ಬೆಂಗಳೂರು, ಅ. 12(ಕೆಎಂಶಿ)- ರಾಜ್ಯ ಎದುರಿಸುತ್ತಿರುವ ಕೊರೊನಾ ವಿಷಮಸ್ಥಿತಿಯಲ್ಲಿ ಸಚಿವ ಬಿ.ಶ್ರೀರಾಮುಲು ಅವ ರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಕಸಿದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಂಪುಟದ ಸಹೋದ್ಯೋಗಿಗಳ ಕೆಲವು ಖಾತೆಗಳನ್ನು ಸಣ್ಣ ಪ್ರಮಾಣದಲ್ಲಿ ಬದಲಾ ವಣೆ ಮಾಡಿ, ಶ್ರೀರಾಮುಲು ಅವರ ಖಾತೆ ಯನ್ನು ವೈದ್ಯಕೀಯ ಶಿಕ್ಷಣ ಸಚಿವ ಸುಧಾ ಕರ್ ಅವರಿಗೆ ಹೆಚ್ಚುವರಿಯಾಗಿ ನೀಡಿದ್ದಾರೆ.
ಆರೋಗ್ಯ ಖಾತೆ ಕಳೆದುಕೊಂಡ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ್ ಬಳಿ ಹೆಚ್ಚುವರಿ ಯಾಗಿದ್ದ ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ಲೋಕೋಪ ಯೋಗಿ ಇಲಾಖೆಯನ್ನು ಪೂರ್ಣವಾಗಿ ಕಾರಜೋಳ್ ಅವರಿಗೆ ನೀಡಿ, ಸಣ್ಣ ಆದೇಶವನ್ನು ಮುಖ್ಯಮಂತ್ರಿಯವರು ಹೊರಡಿಸಿದ್ದಾರೆ. ಈ ಹಿಂದೆ ಕಾರಜೋಳ್ ಅವರು ಸಮಾಜ ಕಲ್ಯಾಣ ಇಲಾಖೆ ನೋಡಿಕೊಂಡು ಹೆಚ್ಚುವರಿಯಾಗಿ ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿ ದ್ದರು. ಆರೋಗ್ಯ ಇಲಾಖೆ ಮೇಲೆ ಹಿಡಿತ ಸಾಧಿ ಸಲು ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನಡುವೆ ಮೊದಲಿನಿಂದಲೂ ತೆರೆಮರೆಯಲ್ಲಿ ಮುಸುಕಿನ ಗುದ್ದಾಟ ನಡೆದಿತ್ತು. ಒಂದು ಹಂತದಲ್ಲಿ ಸುಧಾಕರ್, ಶ್ರೀರಾಮುಲು ಇಲಾಖೆ ಮೇಲೆ ಸವಾರಿ ಮಾಡಲು ಹೊರಟಾಗ ಇದರಿಂದ ಬೇಸತ್ತು ಶ್ರೀರಾಮುಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಧ್ಯೆಪ್ರವೇಶ ಮಾಡಿ ಅವರನ್ನು ಸಮಾಧಾನಪಡಿಸಿದ್ದರು. ಇದಾದ ನಂತರ ಶ್ರೀರಾಮುಲು ಇಲಾಖೆಯ ನಿರ್ವಹಣೆಯಲ್ಲಿ ಮೂಗುತೂರಿಸದೇ ಅಗತ್ಯ ಸಭೆಗಳನ್ನು ನಡೆಸದೇ ತಟಸ್ಥವಾಗಿ ಉಳಿದಿದ್ದರು. ಇದರಿಂದ ಕೊರೊನಾ ಸೋಂಕು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿ, ರಾಷ್ಟ್ರದಲ್ಲಿ ಎರಡನೇ ಸ್ಥಾನಕ್ಕೆ ಬಂದು ನಿಂತಿತ್ತು. ನೆರೆಯ ತಮಿಳುನಾಡು, ಆಂಧ್ರದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೆ, ರಾಜ್ಯದಲ್ಲಿ ಏರುತ್ತಲೇ ಹೋಗಿತ್ತು. ಈ ಬಗ್ಗೆ ಬಿಜೆಪಿಯ ರಾಜ್ಯ ನಾಯಕರು ಮುಖ್ಯಮಂತ್ರಿಯವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ವೈದ್ಯಕೀಯ ಶಿಕ್ಷಣ ಇಲಾಖೆ ನೋಡಿಕೊಳ್ಳುತ್ತಿರುವ ಸುಧಾಕರ್ ಅವರಿಗೆ ಈ ಖಾತೆಯನ್ನು ಹೆಚ್ಚುವರಿಯಾಗಿ ನೀಡಿ, ಕೊರೊನಾ ಸೋಂಕು ನಿರ್ವಹಣೆಯ ಹೊಣೆಗಾರಿಕೆಯನ್ನು ಅವರ ಹೆಗಲಿಗೆ ಪೂರ್ಣವಾಗಿ ನೀಡಿದ್ದಾರೆ. ಮುಖ್ಯಮಂತ್ರಿಯವರು ಹಣಕಾಸು ಇಲಾಖೆ ಜೊತೆಗೆ ಇಂಧನ, ಡಿಪಿಎಆರ್, ಗುಪ್ತಚಾರ ವಿಭಾಗ, ಸಣ್ಣ ಕೈಗಾರಿಕೆ, ವಾರ್ತೆ, ಹಿಂದುಳಿದ ವರ್ಗಗಳ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.