ಮೈಸೂರಲ್ಲಿ 25 ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ
ಮೈಸೂರು

ಮೈಸೂರಲ್ಲಿ 25 ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ

June 6, 2021

ಮೈಸೂರು,ಜೂ.5(ಪಿಎಂ)- ಮೈಸೂರು ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿ ಸೇರಿದಂತೆ ಇಡೀ ಮೈಸೂರು ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಕನಿಷ್ಠ 25 ಸಾವಿರ ಗಿಡಗಳನ್ನು ನೆಡುವ ಅಭಿ ಯಾನಕ್ಕೆ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಚಾಲನೆ ನೀಡಿದರು.

ವಿಶೇಷವಾಗಿ ಹೆಚ್ಚು ಆಮ್ಲಜನಕ ನೀಡುವ ಅರಳಿ, ಅತ್ತಿ, ಮತ್ತಿ, ಬಾಗೆ, ಹಲಸು, ನೇರಳೆ, ಮಹಾಗನಿ, ಬೇವು, ಸಂಪಿಗೆ, ನಾಗಲಿಂಗ ಪುಷ್ಪ ಸೇರಿದಂತೆ ವಿವಿಧ ಜಾತಿ ಗಿಡಗಳನ್ನು ನೆಡಲು ರೂಪಿಸಿರುವ ಅಭಿಯಾನಕ್ಕೆ ಮೈಸೂರಿನ ಹೊರವಲಯದ ನಂಜನಗೂಡು ರಸ್ತೆಯ ದೇವರಾಯನ ಕೆರೆ ಪಕ್ಕದ ಹಸಿರು ಮೈಸೂರು ಸಂಸ್ಥೆಯ ನರ್ಸರಿಯಲ್ಲಿ ಗಿಡಕ್ಕೆ ನೀರೆರೆಯುವ ಜೊತೆಗೆ ಗಿಡವೊಂದನ್ನು ನೆಡುವ ಮೂಲಕ ಚಾಲನೆ ಕೊಡಲಾಯಿತು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ), ಮೈಸೂರು ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹಸಿರು ಮೈಸೂರು ತಂಡ ಹಾಗೂ ಇತರೆ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ಅಭಿಯಾನ ಕಾರ್ಯಗತಗೊಳಿಸಲು ಮುಂದಾಗಲಾಗಿದೆ.
ಇದೇ ವೇಳೆ ಮಾತನಾಡಿದ ಎಸ್.ಟಿ.ಸೋಮಶೇಖರ್, ವಿಶ್ವ ಪರಿಸರ ದಿನದ ಅಂಗವಾಗಿ ಮುಡಾ ಅಧ್ಯಕ್ಷರೂ ಆದ ಹಸಿರು ಮೈಸೂರು ತಂಡದ ಅಧ್ಯಕ್ಷ ಹೆಚ್.ವಿ. ರಾಜೀವ್ ಪ್ರತಿವರ್ಷ ಗಿಡ ಬೆಳೆಸಿ ಉಚಿತವಾಗಿ ನೀಡುವ ಪರಂಪರೆ ರೂಢಿಸಿಕೊಂಡು ಬಂದಿದ್ದಾರೆ. ಆದಿಚುಂಚನ ಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಅಪೇಕ್ಷೆ ಮೇರೆಗೆ ಅವರ ಮಠದ ಸುತ್ತಮುತ್ತ ಬೆಳೆಸಲೂ ರಾಜೀವ್ ಅವರ ಕಡೆಯಿಂದಲೇ ಎರಡು ಸಾವಿರ ಗಿಡಗಳನ್ನು ಕೊಡಿಸಲಾಯಿತು ಎಂದರು.

ಮೈಸೂರನ್ನು ಹಸಿರು ನಗರವನ್ನಾಗಿಸಲು ಇಲ್ಲಿನ ಸಂಘಸಂಸ್ಥೆಗಳು, ಜನಪ್ರತಿನಿಧಿಗಳ ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾಜೀವ್ ಅವರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ನಮೋ ಗಂಗಾ ಯೋಜನೆಯಡಿ ನದಿಗಳ ಶುದ್ಧೀಕರಣ, ಸ್ವಚ್ಛ ಭಾರತದ ಅಭಿಯಾನ ಸೇರಿದಂತೆ ಪರಿಸರ ಸಂರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಹಲವು ಯೋಜನೆಗಳನ್ನು ನೀಡಿ ದ್ದಾರೆ. ಇದೀಗ ವಾಯುಮಾಲಿನ್ಯ ತಡೆಗಾಗಿ ಎಲೆಕ್ಟ್ರಿಕಲ್ ವಾಹನಗಳನ್ನು ಪರಿಚಯಿಸಲು ಹೊರಟಿದ್ದಾರೆ. ಶೀಘ್ರದಲ್ಲಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಮೈಸೂರಿನಲ್ಲೂ ಇದಕ್ಕೆ ಚಾಲನೆ ದೊರೆಯುವ ವಿಶ್ವಾಸವಿದೆ ಎಂದರು.

ಕೆಆರ್ ಕ್ಷೇತ್ರಕ್ಕೆ ನಗರೋತ್ಥಾನದಡಿ ಇಪ್ಪತ್ತೆರಡೂವರೆ ಕೋಟಿ: ನಮ್ಮ ಕ್ಷೇತ್ರದಲ್ಲೂ ಒಂದೂವರೆ ಲಕ್ಷ ಆಯುರ್ವೇದ ಗಿಡಗಳನ್ನು ಪ್ರತಿ ಮನೆಗೆ ಎರಡರಂತೆ ನೀಡಲು ಇಂದು ಚಾಲನೆ ನೀಡಿದ್ದೇವೆ. ಕ್ಷೇತ್ರದಲ್ಲಿ ನಗರೋತ್ಥಾನ ಯೋಜನೆ ಯಡಿ ಉದ್ಯಾನವನ, ಸ್ಮಶಾನ ಅಭಿವೃದ್ಧಿಗಾಗಿ ಇಪ್ಪತ್ತೆರಡೂ ವರೆ ಕೋಟಿ ರೂ. ಅನುದಾನ ಲಭ್ಯವಾಗಿದೆ. ರಾಜೀವ್ ಅವರ ಸಹಕಾರ ಪಡೆದು ಈ ಅಭಿವೃದ್ಧಿ ಕಾರ್ಯದೊಂದಿಗೆ ಹಸಿರೀಕರಣಕ್ಕೂ ಒತ್ತು ನೀಡಲಾಗುವುದು ಎಂದು ಎಸ್.ಎ.ರಾಮದಾಸ್ ಪ್ರಕಟಿಸಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮೈಸೂರಿನಲ್ಲಿ ಸಣ್ಣ ಅವಘಡವಾದರೂ ಇಲ್ಲಿನ ಜನತೆ ನೊಂದುಕೊಳ್ಳುತ್ತಾರೆ. ಅಂದರೆ ಮೈಸೂರಿಗೆ ಇದು ನನ್ನ ನಗರ ಎಂಬ ಭಾವನೆ ಯಿದೆ. ಅಂತಹ ಅದ್ಭುತವಾದ ಸ್ಥಳ ಮೈಸೂರು. ಇಂತಹ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಎಸ್.ಟಿ.ಸೋಮಶೇಖರ್ ಒಂದೆಡೆ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದರೆ, ಮತ್ತೊಂ ದೆಡೆ ಅಭಿವೃದ್ಧಿಗೂ ಒತ್ತು ನೀಡಿದ್ದಾರೆ. ಅವರ ನೇತೃತ್ವದಲ್ಲಿ ಮೈಸೂರು ಜಿಲ್ಲೆಯಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹೆಚ್.ವಿ.ರಾಜೀವ್ ಮೈಸೂರು ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದರು.

ಮೈಸೂರಿನ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು ಸುತ್ತೂರು ಶ್ರೀಗಳು ನಮ್ಮೊಂದಿಗೆ ಇದ್ದಾರೆ. ಎಲ್ಲಾ ಸಮು ದಾಯಕ್ಕೂ ಮಾರ್ಗದರ್ಶನ ನೀಡುವ ಶ್ರೇಷ್ಠತೆ, ಹಿರಿತನ ವನ್ನು ಶ್ರೀಗಳು ಹೊಂದಿದ್ದಾರೆ. ಮೈಸೂರಿನ ರಿಂಗ್ ರಸ್ತೆ ಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗಿದೆ. ಹೆದ್ದಾರಿಯ ವಿಭಜಕದಲ್ಲಿ ಲಭ್ಯವಿರುವ 10 ಅಡಿ ಜಾಗದಲ್ಲಿ 6 ಸಾವಿರ ಹೆಬ್ಬೇವು ಗಿಡಗಳನ್ನು ನೆಟ್ಟ ಹಿನ್ನೆಲೆಯಲ್ಲಿ ಇಂದು ಅವು ಚೆಂದವಾಗಿ ಬೆಳೆದಿವೆ. ಸರ್ವೀಸ್ ರಸ್ತೆಗೂ 6 ಸಾವಿರ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಜೊತೆಗೆ ನಾಶವಾಗಿರುವ ಕಡೆಗಳಲ್ಲಿ ಮತ್ತೆ ಗಿಡ ನೆಡಲು ಹೆಚ್.ವಿ.ರಾಜೀವ್ ಸಹಕಾರ ನೀಡುವುದಾಗಿ ತಿಳಿಸಿದ್ದು, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ನುಡಿದರು.

ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯವರು ಆಶೀರ್ವಚನ ನೀಡಿ, ಇಂದು ವಿಶ್ವ ಪರಿಸರ ದಿನಾಚರಣೆ. ವಿಶ್ವದ ಕಲ್ಯಾಣದ ದೃಷ್ಟಿಯಿಂದ ವರ್ಷದಲ್ಲಿ ಒಂದಲ್ಲಾ ಒಂದು ದಿನ ನಿಗದಿಯಾಗಿರುತ್ತದೆ. ಅಂದರೆ ಅಂದು ಮಾತ್ರ ಆಚರಣೆ ಮಾಡಬೇಕೆಂಬುದಲ್ಲ. ಅಂದು ಸಂಕಲ್ಪ ಮಾಡಿ, ಪ್ರತಿದಿನ ಆ ಆಶಯದಲ್ಲಿ ಮುನ್ನಡೆ ಯುವುದಾಗಿದೆ ಎಂದು ಹೇಳಿದರು.

ಮಠದಿಂದ ಪೂರ್ಣ ಸಹಕಾರ: ಪರಿಸರ ಸಂರಕ್ಷಣೆ ಇಂದು ಬಹುಮುಖ್ಯವಾಗಿದೆ. ಕಾರಣ ಮಾನವನ ಚಟು ವಟಿಕೆಗಳಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾ ಗಿರುವುದು ಹಾಗೂ ಅದರಿಂದ ವಿಕೋಪ ಸಂಭವಿಸು ತ್ತಿರುವುದನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪ್ರಕೃತಿ ಸಮತೋಲನ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಮನೆಗೊಂದು ಮರ, ಊರಿಗೊಂದು ವನ ಇರಬೇಕು. ಪ್ರತಿ ಮನೆಗಳಲ್ಲೂ ಹೂ, ಹಣ್ಣಿನ ಗಿಡಗಳನ್ನು ನೆಟ್ಟು ಪೆÇೀಷಿಸಬೇಕು ಎಂದು ಸಲಹೆ ನೀಡಿದರು. ಸುತ್ತೂರಿನಲ್ಲೂ ಇದೇ ತರಹದ ನರ್ಸರಿ ಇದೆ. ಅಲ್ಲಿ ರೈತರಿಗೆ ಗಿಡಗಳನ್ನು ಕೊಡಲಾಗುತ್ತದೆ. ಈ ಅಭಿಯಾನ ಸಂಬಂಧ ಅಗತ್ಯವಾದಲ್ಲಿ ಗಿಡ ನೆಡಲು ಪೂರ್ಣ ಪ್ರಮಾಣದ ಸಹಕಾರವನ್ನು ಮಠದ ವತಿಯಿಂದ ನೀಡುವುದಾಗಿ ಸುತ್ತೂರು ಶ್ರೀ ತಿಳಿಸಿದರು.

ಮುಡಾ ಅಧ್ಯಕ್ಷರೂ ಆದ ಹಸಿರು ಮೈಸೂರು ತಂಡದ ಅಧ್ಯಕ್ಷ ಹೆಚ್.ವಿ.ರಾಜೀವ್, ಡಿ.ದೇವರಾಜ ಅರಸು ಹಿಂದು ಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್. ಕೌಟಿಲ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ, ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್, ಕರ್ನಾಟಕ ಮೃಗಾಲಯ ಪ್ರಾಧಿ ಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಡಾ ಆಯುಕ್ತ ಡಿ.ಬಿ.ನಟೇಶ್ ಮತ್ತಿತರರು ಹಾಜರಿದ್ದರು.

Translate »