ಇಂದು ಗಜ ಪಯಣಕ್ಕೆ ಚಾಲನೆ
ಮೈಸೂರು

ಇಂದು ಗಜ ಪಯಣಕ್ಕೆ ಚಾಲನೆ

September 13, 2021

ಮೈಸೂರು, ಸೆ.12(ಆರ್‍ಕೆ)- ಹುಣಸೂರು ತಾಲೂಕು ವೀರನಹೊಸಳ್ಳಿಯಲ್ಲಿ ನಾಳೆ (ಸೆ.13) ಮೈಸೂರು ದಸರಾ ಮಹೋತ್ಸವದ ಗಜಪಯಣ ಆರಂಭವಾಗಲಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಅವರು ಸೋಮವಾರ ಬೆಳಗ್ಗೆ 9.30 ಗಂಟೆಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳನ್ನೊಳಗೊಂಡ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಉಪ ಮೇಯರ್ ಅನ್ವರ್ ಬೇಗ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಹೆಚ್.ಪಿ.ಮಂಜುನಾಥ್, ಕೆ.ಮಹದೇವ, ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಎಸ್.ಎ. ರಾಮದಾಸ್, ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್‍ಕುಮಾರ್, ಹರ್ಷವರ್ಧನ್, ವಿಧಾನಪರಿಷತ್ ಸದಸ್ಯ ರಾದ ಎ.ಹೆಚ್.ವಿಶ್ವನಾಥ್, ಆರ್.ಧರ್ಮಸೇನಾ, ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಸೇರಿದಂತೆ ಹಲವು ಜನಪ್ರತಿ ನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೇಶ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಎಸ್ಪಿ ಆರ್.ಚೇತನ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಅರಣ್ಯ, ಕಂದಾಯ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳು ಗಜಪಯಣ ಸಂದರ್ಭ ಉಪಸ್ಥಿತರಿರುವರು.
ಅಭಿಮನ್ಯು ನೇತೃತ್ವದ 8 ಆನೆಗಳಿಗೆ ಪೂರ್ಣಕುಂಭ ದೊಂದಿಗೆ ವಿಶೇಷ ಪೂಜೆ ಸಲ್ಲಿಸಲು ಅರಣ್ಯ ಇಲಾಖೆ, ಹುಣಸೂರು ತಾಲೂಕು ಆಡಳಿತವು ವೀರನಹೊಸಳ್ಳಿಯ ನಾಗರ ಹೊಳೆ ಪಾರ್ಕಿನ ಹೆಬ್ಬಾಗಿಲ ಬಳಿ ಸಕಲ ಸಿದ್ಧತೆ ನಡೆಸಿದೆ.

ಗೋಪಾಲಸ್ವಾಮಿ, ವಿಕ್ರಮ, ಕಾವೇರಿ, ಧನಂಜಯ, ಅಶ್ವ ತ್ಥಾಮ, ಚೈತ್ರ ಮತ್ತು ಲಕ್ಷ್ಮೀ ಆನೆಗಳು ದಸರಾದಲ್ಲಿ ಪಾಲ್ಗೊಳ್ಳ ಲಿವೆ. ಅಶ್ವತ್ಥಾಮ ಮೊದಲ ಬಾರಿ ಹಾಗೂ ಲಕ್ಷ್ಮೀ ಎರಡನೇ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸ ಲಿವೆ. 56 ವರ್ಷದ ಅಭಿಮನ್ಯು ಈ ಬಾರಿಯೂ ಸಹ ಅಧಿ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಅಲಂಕೃತ ಚಿನ್ನದ ಅಂಬಾರಿ ಹೊರುತ್ತಿದ್ದಾನೆ. ಸೋಮವಾರ ಮೈಸೂರಿಗೆ ಆಗಮಿಸುವ 8 ಆನೆಗಳೂ ಅಶೋಕಪುರಂನ ಅರಣ್ಯ ಭವನದಲ್ಲಿ ಬೀಡು ಬಿಡಲಿದ್ದು, ಸೆಪ್ಟೆಂಬರ್ 16ರಂದು ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಜಿಲ್ಲಾ ಡಳಿತವು ಬರಮಾಡಿಕೊಳ್ಳಲಿದೆ. ಒಂದು ತಿಂಗಳ ಕಾಲ ಗಜಪಡೆಯು ಅರಮನೆಯ ಆನೆ ಶಿಬಿರದಲ್ಲಿ ವಾಸ್ತವ್ಯ ಹೂಡಲಿದ್ದು, ನಂತರ ತಾಲೀಮು ಆರಂಭವಾಗಲಿದೆ.

Translate »