ದೇವರಾಜ ಮಾರುಕಟ್ಟೆ ಸ್ಥಳಾಂತರದಿಂದ ಹಬ್ಬದ ಆದಾಯಕ್ಕೆ ಕುತ್ತು
ಮೈಸೂರು

ದೇವರಾಜ ಮಾರುಕಟ್ಟೆ ಸ್ಥಳಾಂತರದಿಂದ ಹಬ್ಬದ ಆದಾಯಕ್ಕೆ ಕುತ್ತು

August 24, 2020

ಮೈಸೂರು, ಆ.23(ಪಿಎಂ)- ಮೈಸೂರಿನ ದೇವರಾಜ ಮಾರುಕಟ್ಟೆ ಹೂ ಮಾರಾಟದ ಅಂಗಡಿಗಳನ್ನು ಜೆಕೆ ಮೈದಾನಕ್ಕೆ ತಾತ್ಕಾಲಿಕ ಸ್ಥಳಾಂತರ ಮಾಡಿದ್ದು ವರ್ಷಕ್ಕೊಂದು ಹಬ್ಬದ ಆದಾಯಕ್ಕೂ ಕುತ್ತಾಯಿತು ಎಂದು ಹೂ ವ್ಯಾಪಾರಿ ಗಳು ಅಳಲು ತೋಡಿಕೊಂಡಿದ್ದಾರೆ.

ಜೆಕೆ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆಗೆ ಮೂಲ ಸೌಲಭ್ಯಕ್ಕೂ ನಾವೇ ವೆಚ್ಚ ಮಾಡಿ ದ್ದೇವೆ. ಮಹಾನಗರ ಪಾಲಿಕೆಯಿಂದ ಮೈದಾನದ ವ್ಯವಸ್ಥೆ ಬಿಟ್ಟರೆ ಬೇರಾವುದೇ ಸೌಲಭ್ಯ ಒದಗಲಿಲ್ಲ ಎಂದು ಹೂ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಗೌರಿ-ಗಣೇಶ ಹಬ್ಬದಲ್ಲಿ ಮಾರುಕಟ್ಟೆಯಲ್ಲಿ ಜನ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಪಾಲಿಕೆ ಆ.19ರಿಂದ 22ರವರೆಗೆ ದೇವರಾಜ ಮಾರುಕಟ್ಟೆಯ ಹೂ ಮಳಿಗೆಗಳನ್ನು ಜೆಕೆ ಮೈದಾನಕ್ಕೆ ಸ್ಥಳಾಂತರ ಮಾಡಿತ್ತು. ವರಮಹಾಲಕ್ಷ್ಮಿ ಹಬ್ಬದ ವೇಳೆಯೂ (ಜು.29ರಿಂದ 31ರವರೆಗೆ) ಸ್ಥಳಾಂತರ ಮಾಡ ಲಾಗಿತ್ತು. ಎರಡೂ ಸಂದರ್ಭ ನಿರೀಕ್ಷೆಯಷ್ಟು ವ್ಯಾಪಾರ ವಾಗದೇ ನಮಗೆ ನಷ್ಟವಾಗಿದೆ ಎಂದು ಸಗಟು ಹಾಗೂ ಚಿಲ್ಲರೆ ಹೂ ವ್ಯಾಪಾರಿಗಳು `ಮೈಸೂರು ಮಿತ್ರ’ನೊಂದಿಗೆ ನೋವು ತೋಡಿಕೊಂಡಿದ್ದಾರೆ.

ದೇವರಾಜ ಮಾರುಕಟ್ಟೆ ಗಾಯಿತ್ರಿ ಫ್ಲವರ್ ಸ್ಟಾಲ್‍ನ ಎನ್.ಮಂಜುನಾಥ್ ಮಾತನಾಡಿ, ಸ್ಥಳಾಂತರ ಮಾಡಿದ 2 ಬಾರಿಯೂ ವ್ಯಾಪಾರವಾಗದೇ ನಷ್ಟವಾಗಿದೆ. ದೇವರಾಜ ಮಾರುಕಟ್ಟೆಗೆ ಬರುತ್ತಿದ್ದುದರಲ್ಲಿ ಅರ್ಧ ಜನರೂ ಜೆಕೆ ಮೈದಾನಕ್ಕೆ ಬರಲಿಲ್ಲ ಎಂದರು.

ಪಾಲಿಕೆಯು ಹೂವಿನ ವ್ಯಾಪಾರಕ್ಕೆ ಜಾಗ ಕೊಟ್ಟಿತು ಎಂಬುದನ್ನು ಬಿಟ್ಟರೆ ಪ್ರತಿಯೊಂದು ವ್ಯವಸ್ಥೆಗೂ ವ್ಯಾಪಾ ರಸ್ಥರೇ ವೆಚ್ಚ ಮಾಡಬೇಕಾಯಿತು. ಪೆಂಡಾಲ್, ಲೈಟ್ಸ್ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಕ್ಕೂ ನಾವೇ ಹಣ ವ್ಯಯಿಸಿದ್ದೇವೆ. ವ್ಯಾಪಾರಸ್ಥರೇ ಹಣ ನೀಡಿ ಕುಡಿಯುವ ನೀರಿನ ಟ್ಯಾಂಕರ್ ತರಿಸಿದ್ದೆವು. ಇತ್ತ ವ್ಯಾಪಾರವೂ ಸರಿಯಾಗಿ ಆಗಿಲ್ಲ. 2 ಬಾರಿಯೂ ಶೇ.50ರಷ್ಟು ವಹಿವಾಟು ಕುಸಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನತೆ ಒಂದೆಡೆ ಕೊರೊನಾ ಭಯದಿಂದ ಹೊರ ಬಾರದ ಸ್ಥಿತಿಯಲ್ಲಿದ್ದರೆ, ಮತ್ತೊಂದೆಡೆ ಹೂ ಒಂದನ್ನು ಬಿಟ್ಟರೆ ಉಳಿದೆಲ್ಲಾ ಸಾಮಾನುಗಳಿಗೆ ಮಾರುಕಟ್ಟೆಗೇ ಹೋಗಬೇಕಿತ್ತು. ಹೀಗಾಗಿ ಜೆಕೆ ಮೈದಾನಕ್ಕೆ ಹೆಚ್ಚು ಜನ ಬರಲಿಲ್ಲ. ಹೂವಿನ ಬೆಲೆಯಲ್ಲೇನೂ ಏರಿಕೆ ಆಗಿರಲಿಲ್ಲ. ಬೇಡಿಕೆ ಇಲ್ಲದ್ದಕ್ಕೆ ಎಷ್ಟೊ ವ್ಯಾಪಾರ ಸ್ಥರು ಅರ್ಧ ಬೆಲೆಗೆ ಮಾರಾಟ ಮಾಡಿದರು. ಉಳಿಕೆಯಾದ ಹೂವನ್ನು ತ್ಯಾಜ್ಯಕ್ಕೆ ಹಾಕಿದ್ದಾರೆ ಎಂದರು.

ಸಗಟು ಹೂ ವ್ಯಾಪಾರಿಗಳು, ಹಾರದ ಮಳಿಗೆ ಗಳವರು ಪೆಂಡಾಲ್ ಹಾಕಿಸಿದ್ದಕ್ಕೆ 3 ದಿನಗಳಿಗೆ 1 ಲಕ್ಷ ರೂ. ವೆಚ್ಚ ಮಾಡಿದ್ದೇವೆ. ಪೆಂಡಾಲ್ ಹಾಕಿಸಿ ಕೊಳ್ಳಲು ಚಿಲ್ಲರೆ ವ್ಯಾಪಾರಿಗಳೂ ಪ್ರತ್ಯೇಕವಾಗಿ ಹಣ ವ್ಯಯಿಸಿದ್ದಾರೆ ಎಂದು ಹೂವಿನ ವ್ಯಾಪಾರಿ ನರೇಂದ್ರ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಮತ್ತೆಂದೂ ನಾವು ಸ್ಥಳಾಂತರಗೊಳ್ಳುವುದಿಲ್ಲ, ಮಾರುಕಟ್ಟೆ ಬಿಟ್ಟು ಹೊರ ಹೋಗದಿರಲು ನಿರ್ಧರಿಸಿದ್ದೇವೆ. ಮಹಾನಗರ ಪಾಲಿಕೆ ನಮಗೆ ಒತ್ತಾಯ ಮಾಡಬಾರದು ಎಂದು ದೇವರಾಜ ಮಾರುಕಟ್ಟೆ ಹೂ ವ್ಯಾಪಾರಿ ಎನ್.ಮಂಜುನಾಥ್ ಮನವಿ ಮಾಡಿದ್ದಾರೆ. ಪಾಲಿಕೆ ಜಾಗ ಕೊಟ್ಟರೆ ಸಾಕೇ? ಶೌಚಾಲಯದ ವ್ಯವಸ್ಥೆಯೂ ಇರಲಿಲ್ಲ. ಯಾವುದೇ ಕಾರಣಕ್ಕೂ ಇನ್ನು ಜೆಕೆ ಮೈದಾನಕ್ಕೆ ಹೋಗಲ್ಲ. ಇದು ಹೂ ವ್ಯಾಪಾರಿಗಳೆಲ್ಲರ ತೀರ್ಮಾನ ಎಂದು ವ್ಯಾಪಾರಿ ನರೇಂದ್ರ ಕುಮಾರ್ ಹೇಳಿದರು.

Translate »