ಪಿರಂಗಿ ದಳದ ಸಿಬ್ಬಂದಿಯಿಂದ ಚುರುಕುಗೊಂಡ ಡ್ರೈ ತಾಲೀಮು
ಮೈಸೂರು

ಪಿರಂಗಿ ದಳದ ಸಿಬ್ಬಂದಿಯಿಂದ ಚುರುಕುಗೊಂಡ ಡ್ರೈ ತಾಲೀಮು

September 27, 2021

ಮೈಸೂರು, ಸೆ.26(ಎಂಟಿವೈ)-ಜಂಬೂಸವಾರಿಯ ದಿನ ಚಿನ್ನದ ಅಂಬಾರಿಯಲ್ಲಿ ಆಸೀನರಾಗುವ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯ ವೇಳೆ ರಾಷ್ಟ್ರಗೀತೆ ನುಡಿಸುವಾಗ 21 ಸುತ್ತು ಕುಶಾಲತೋಪು ಸಿಡಿಸುವ ಹಿನ್ನೆಲೆಯಲ್ಲಿ ವಿಶೇಷ ಪಿರಂಗಿ ದಳದ ಸಿಬ್ಬಂದಿ ಡ್ರೈ ತಾಲೀ ಮಿನಲ್ಲಿ ನಿರತರಾಗಿದ್ದು, ಭಾನುವಾರ ಪಿರಂಗಿ ದಳದ ತಂಡ ಬಿರುಸಿನ ತಾಲೀಮು ನಡೆಸಿತು. ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಆರಂಭಕ್ಕೆ 12 ದಿನ ಮಾತ್ರ ಉಳಿದಿದ್ದು, ಅಗತ್ಯ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಅ.15ರಂದು ನಡೆಯುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯೊಳಗೆ ಆಸೀನರಾಗಿರುವ ನಾಡದೇವಿಯ ವಿಗ್ರಹಕ್ಕೆ ಸಂಪ್ರದಾಯದಂತೆ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ. ಈ ವೇಳೆ ಪೊಲೀಸ್ ಬ್ಯಾಂಡ್ ವಾದನದ ಸಿಬ್ಬಂದಿಗಳು 3 ವಿಭಾಗದಲ್ಲಿ ರಾಷ್ಟ್ರಗೀತೆ ನುಡಿಸಲಿದ್ದಾರೆ. ಈ ವೇಳೆ 7 ಪಿರಂಗಿಗಳನ್ನು ಬಳಸಿಕೊಂಡು 3 ಸುತ್ತುಗಳಲ್ಲಿ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಒಂದೇ ನಿಮಿಷದ ಅವಧಿಯಲ್ಲಿ 21 ಬಾರಿ ಕುಶಾಲತೋಪು ಸಿಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಡ್ರೈ ತಾಲೀಮು ನಡೆಸುವ ಮೂಲಕ 1 ನಿಮಿಷದ ಅವಧಿಯಲ್ಲಿ 21 ಕುಶಾಲತೋಪು ಸಿಡಿಸಲು ತರಬೇತಿ ಪಡೆದುಕೊಳ್ಳಲು ಸಿದ್ಧತೆ ನಡೆಸಿಕೊಳ್ಳುತ್ತಿ ದ್ದಾರೆ. ಇಂದು ಬೆಳಗ್ಗೆ ಅರಮನೆ ಮುಂಭಾಗದ ಪ್ರಾಂಗಣದ ಬಳಿ ಪಿರಂಗಿ ದಳದ ಸಿಬ್ಬಂದಿ ಡ್ರೈ ತಾಲೀಮು ನಡೆಸಿ ಗಮನ ಸೆಳೆದರು. ಇದೇ ವೇಳೆ ತಾಲೀಮಿನಲ್ಲಿ ನಿರತ ವಾಗಿದ್ದ ಗಜಪಡೆಯನ್ನು ಪಿರಂಗಿ ಬಳಿ ಕರೆದೊಯ್ದು ಪಿರಂಗಿಗಳ ವಾಸನೆಯ ಪರಿಚಯ ಮಾಡಿಕೊಡಲಾಯಿತು.

Translate »