ನಕಲಿ ಆರ್‍ಟಿ-ಪಿಸಿಆರ್ ವರದಿ ತಂದು ರಾಜ್ಯ ಪ್ರವೇಶಕ್ಕೆ ಯತ್ನ ಮೂವರು ಕೇರಳಿಗರ ಬಂಧನ
ಮೈಸೂರು

ನಕಲಿ ಆರ್‍ಟಿ-ಪಿಸಿಆರ್ ವರದಿ ತಂದು ರಾಜ್ಯ ಪ್ರವೇಶಕ್ಕೆ ಯತ್ನ ಮೂವರು ಕೇರಳಿಗರ ಬಂಧನ

August 23, 2021

ಹೆಚ್.ಡಿ.ಕೋಟೆ, ಆ.22-ನಕಲಿ ಆರ್‍ಟಿ-ಪಿಸಿಆರ್ ವರದಿ ಯೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ಸಂಜೆ ನಕಲಿ ಆರ್‍ಟಿ-ಪಿಸಿಆರ್ ವರದಿ ಯೊಂದಿಗೆ ಕೇರಳದಿಂದ ರಾಜ್ಯ ಪ್ರವೇಶಿಸಲು ಪ್ರಯತ್ನಿಸಿದ ಪ್ರಕರಣವನ್ನು ಹೆಚ್.ಡಿ.ಕೋಟೆ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಕಲಿ ಕೋವಿಡ್ ವರದಿ ಯೊಂದಿಗೆ ಆಗಮಿಸಿದ ಇಬ್ಬರು ಹಾಗೂ ಇವರಿಗೆ ನಕಲಿ ಆರ್‍ಟಿ -ಪಿಸಿಆರ್ ವರದಿ ಸಿದ್ಧಪಡಿಸಿಕೊಟ್ಟ ಓರ್ವ ಸೇರಿದಂತೆ ಮೂವರನ್ನು ಬಂಧಿಸಿ ನಕಲಿ ವರದಿ ಸಿದ್ಧಪಡಿಸಲು ಉಪಯೋಗಿಸುತ್ತಿದ್ದ ಕಂಪ್ಯೂಟರ್ ಮತ್ತಿತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ವೈನಾಡ್ ಜಿಲ್ಲೆ ವೆಲ್ಲಿಮುಂಡ ನಗರದ ಜಾಬೀರ್, ಷರೀಫ್ ಮತ್ತು ರಂಜಿತ್ ಬಂಧಿತರಾಗಿದ್ದು, ಮತ್ತೋರ್ವ ಆರೋಪಿ ನಿಷಾದ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ವಿವರ: ನಕಲಿ ಆರ್‍ಟಿ-ಪಿಸಿಆರ್ ವರದಿಯೊಂದಿಗೆ ಕೇರಳ ದಿಂದ ರಾಜ್ಯಕ್ಕೆ ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಶನಿವಾರ ಸಂಜೆ ಹೆಚ್.ಡಿ.ಕೋಟೆ ಠಾಣೆ

ಸಬ್‍ಇನ್ಸ್‍ಪೆಕ್ಟರ್ ಜಯಪ್ರಕಾಶ್, ಸಿಬ್ಬಂದಿಗಳಾದ ಅಬ್ದುಲ್ ಲತೀಫ್, ವಿಶ್ವ ಮತ್ತು ಜೀಪ್ ಚಾಲಕ ಮಾದೇವಶೆಟ್ಟಿ ಅವರು ಬಾವಲಿ ಚೆಕ್‍ಪೋಸ್ಟ್‍ನಲ್ಲಿ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಗೂಡ್ಸ್ ವಾಹನದಲ್ಲಿ (ಕೆಎ 12 ಎನ್ 0297) ಆಗಮಿಸಿದ ಕೇರಳದ ಜಾಬೀರ್ ಮತ್ತು ಷರೀಫ್ ಅವರ ಆರ್‍ಟಿ-ಪಿಸಿಆರ್ ವರದಿಯನ್ನು ಸ್ಕ್ಯಾನ್ ಮಾಡಿ ನೋಡಿದಾಗ ಅದು ನಕಲಿ ಎಂದು ಪತ್ತೆಯಾಗಿದೆ. ಅವರು ನೀಡಿದ ಮಾಹಿತಿ ಮೇರೆಗೆ ಕೇರಳದ ವೆಲ್ಲಿಮುಂಡ ನಗರಕ್ಕೆ ತೆರಳಿ, ಅಲ್ಲಿ ಟೂರ್ ಅಂಡ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರಂಜಿತ್ ಎಂಬಾತನನ್ನು ಬಂಧಿಸಿ ಕಂಪ್ಯೂಟರ್ ಮತ್ತಿತರ ಪರಿಕರಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಪ್ರಕರಣದ ಮತ್ತೋರ್ವ ಆರೋಪಿ ನಿಷಾದ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Translate »