ರಾಜ್ಯದಲ್ಲೀಗ `ನಿಫಾ’ ಭೀತಿ
News

ರಾಜ್ಯದಲ್ಲೀಗ `ನಿಫಾ’ ಭೀತಿ

September 8, 2021

ಬೆಂಗಳೂರು, ಸೆ.7(ಕೆಎಂಶಿ)- ನಿಫಾ ಸಾಂಕ್ರಾಮಿಕ ರೋಗ ರಾಜ್ಯ ಸರ್ಕಾರವನ್ನು ಭೀತಿಗೆ ನೂಕಿದೆ.
ನೆರೆಯ ಕೇರಳ ರಾಜ್ಯದಲ್ಲಿ ಸೋಂಕು ಪತ್ತೆಯಾಗಿರುವು ದರಿಂದ ಈ ರೋಗದ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಗ್ಯ ಇಲಾಖೆಗೆ ಆದೇಶ ಮಾಡಿದ್ದಾರೆ.

ಅಷ್ಟೇ ಅಲ್ಲ, ನಿಫಾ ಬಗ್ಗೆ ವರದಿ ನೀಡುವಂತೆ ತಜ್ಞರನ್ನು ಕೋರಿದ್ದಾರೆ. ಕರ್ನಾಟಕ ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸರ್ಕಾರ ಸಂಬಂಧಪಟ್ಟ ಜಿಲ್ಲಾಡ ಳಿತಕ್ಕೆ ಸೂಚಿಸಿದೆ. ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿ ರುವ ಚಾಮರಾಜನಗರ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗದ ಗ್ರಾಮಗಳಲ್ಲಿ ತಪಾಸಣೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಆದೇಶಿಸಲಾಗಿದೆ.

ತೀವ್ರ ಉಸಿರಾಟದ ತೊಂದರೆ, ತಲೆಸುತ್ತು, ನಿರಂತರ ಜ್ವರ, ವಾಂತಿ ಮಾಡಿಕೊಳ್ಳುವಂತಹ ರೋಗಿಗಳ ಬಗ್ಗೆ ಎಚ್ಚರವಹಿಸಿ, ಇಂತಹ ರೋಗಿಗಳು ಆಸ್ಪತ್ರೆಗೆ ದಾಖಲಾದರೆ, ತಕ್ಷಣವೇ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸ ಲಾಗಿದೆ. ಗಡಿ ಭಾಗದ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಮಾಹಿತಿ ರವಾನೆ ಮಾಡಿರುವುದಲ್ಲದೆ, ಈ ತೆರನಾದ ರೋಗ ಲಕ್ಷಣಗಳು ಕಂಡು ಬಂದರೆ, ತಕ್ಷಣವೇ ಪರೀಕ್ಷೆಗೆ ಒಳಪಡಿಸಬೇಕು, ಅವರನ್ನು ಪ್ರತ್ಯೇಕ ವಾಗಿ ಇರಿಸಿ, ಅವರ ಕುಟುಂಬದ ಮತ್ತು ಸಂಪರ್ಕಿತರ ಬಗ್ಗೆ ಮಾಹಿತಿ ಪಡೆದುಕೊಂಡು ಎಚ್ಚರವಹಿಸಿ. ಕೇರಳ ದಿಂದ ಬಂದ ಯಾರಾದರೂ ಆಸ್ಪತ್ರೆಗೆ ದಾಖಲಾದರೆ, ಅವರ ಬಗ್ಗೆ ಗಮನ ಹರಿಸಿ, ಮತ್ತು ಸರ್ಕಾ ರಕ್ಕೆ ಮಾಹಿತಿ ನೀಡಿ ಎಂದು ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯಾಧಿ ಕಾರಿಗಳಿಗೆ ಸೂಚನೆ ನೀಡಿದೆ.

ಕೇರಳದ 11 ಜಿಲ್ಲೆಗ ಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂಬ ಪ್ರಾಥಮಿಕ ಮಾಹಿತಿ ಇದೆ. ಹಂದಿ ಮತ್ತು ಬಾವಲಿಗಳಿಂದ ಈ ಸೋಂಕು ಹರಡು ತ್ತಿದೆ ಎಂಬ ಮಾಹಿತಿ ಇದೆ. ಹಂದಿ ಮತ್ತು ಬಾವಲಿಗಳಿಗೆ ಸೋಂಕು ಕಾಣಿಸಿಕೊಂಡರೆ ಅದರಿಂದ ಇತರ ಪ್ರಾಣಿಗಳು ಮತ್ತು ಹಣ್ಣು-ಹಂಪಲುಗಳ ಮೂಲಕ ರೋಗ ಹರಡುವ ಸಾಧ್ಯತೆ ಗಳಿವೆ. ಗಡಿ ಭಾಗದ ಹಂದಿಗಳಲ್ಲಿ ಇಲ್ಲವೇ ಬಾವಲಿಗಳಿಗೆ ಸೋಂಕು ತಗುಲಿದೆ ಎಂಬ ಬಗ್ಗೆ ನಿಗಾ ವಹಿಸುವಂತೆಯೂ ಆದೇಶಿಸಿದೆ. ದೆಹಲಿಗೆ ತೆರಳುವ ಮುನ್ನ ಸುದ್ದಿಗಾರ ರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೊಸ ಸೋಂಕಿನ ಬಗ್ಗೆ ಎಚ್ಚರ ವಹಿಸು ವಂತೆ ಈಗಾಗಲೇ ತಿಳಿಸಿದ್ದೇನೆ. ಅದರಲ್ಲೂ ರಾಜ್ಯದ ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿ, ಕೇರಳದಿಂದ ರಾಜ್ಯ ಪ್ರವೇಶ ಮಾಡುವ ಪ್ರಯಾಣಿಕರ ಬಗ್ಗೆಯು ಎಚ್ಚರ ವಹಿಸಿ ಅವರನ್ನು ಪರೀಕ್ಷೆಗೆ ಒಳಪಡಿಸುವಂತೆ ಹೇಳಿದ್ದೇನೆ ಎಂದರು. ನೆರೆ ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡಿರು ವುದರಿಂದ ನಾವು ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ತಜ್ಞರನ್ನು ಕೋರಿದ್ದೇನೆ ಎಂದು ಇದೇ ಸಂದರ್ಭ ದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Translate »