ನಟ ಧನ್ವೀರ್ ಸೇರಿ 6 ಮಂದಿ ವಿರುದ್ಧ FIR
ಮೈಸೂರು

ನಟ ಧನ್ವೀರ್ ಸೇರಿ 6 ಮಂದಿ ವಿರುದ್ಧ FIR

October 25, 2020

ಮೈಸೂರು,ಅ.24-ಅರಣ್ಯ ಇಲಾಖೆ ಅನುಮತಿ ಪಡೆಯದೇ ಮತ್ತಿ ಗೋಡು ಆನೆ ಶಿಬಿರಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ಆರೋಪದಡಿ ಚಿತ್ರನಟ ಧನ್ವೀರ್ ಸೇರಿ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅರಣ್ಯ ಇಲಾಖೆ ಅನುಮತಿ ಪಡೆಯದೆ ಆನೇಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಆನೆ ಶಿಬಿರಕ್ಕೆ ನಟ ಧನ್ವೀರ್ ಹಾಗೂ ಸ್ನೇಹಿತರು ಅ.23ರಂದು ಅತಿಕ್ರಮವಾಗಿ ಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ಮಹೇಂದ್ರ ಎಂಬ ಸಾಕಾನೆ ಮೇಲೆ ಸವಾರಿ ಮಾಡಿದ್ದಾರೆ. ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿರುವುದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾಹಿತಿ ಪಡೆದು ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದಡಿ, ನಟ ಧನ್ವೀರ್, ಜೊತೆಯಲ್ಲಿದ್ದ ವಿಶ್ವಾಸ್ ಐಯ್ಯರ್, ದರ್ಶನ್ ಸೇರಿದಂತೆ ಹೆಸರು ಪತ್ತೆಯಾಗದ ಇನ್ನೂ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ಮತ್ತಿಗೋಡು ಆನೆ ಶಿಬಿರ ಉಸ್ತುವಾರಿ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡ ಲಾಗಿದ್ದು, ತನಿಖೆ ಕೈಗೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. `ಬಜಾರ್’ ಚಿತ್ರದ ನಾಯಕನಟ ಧನ್ವೀರ್, ರಾತ್ರಿ ವೇಳೆ ಕಾಡಿನಲ್ಲಿ ಅಡ್ಡಾಡಿ, ಹುಲಿ ಕಂಡು ಸಂಭ್ರಮಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ರಾತ್ರಿ ವೇಳೆ ಸಫಾರಿಗೆ ನಿರ್ಬಂಧವಿದ್ದರೂ ಧನ್ವೀರ್‍ಗೆ ಅವಕಾಶ ನೀಡಿದ್ದು ಹೇಗೆ? ಎಂದು ಅರಣ್ಯ ಇಲಾಖೆಯನ್ನು ತರಾಟೆ ತೆಗೆದುಕೊಂಡಿದ್ದರು.

Translate »